ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸಿರುವುದನ್ನು ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಧರಣಿ ಮುಂದುವರಿಸಿರುವ ಕಾರಣದಿಂದ ವಿಧಾನಸಭೆ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.
ಶುಕ್ರವಾರ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಧರಣಿ ಮುಂದುವರಿಸಿದರು. ಹತ್ತು ನಿಮಿಷ ಕಲಾಪ ಮುಂದೂಡಿದ ಸಭಾಧ್ಯಕ್ಷ ಯು.ಟಿ. ಖಾದರ್, ತಮ್ಮ ಕಚೇರಿಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ಸಂಧಾನಕ್ಕೆ ಯತ್ನಿಸಿದರು. ಆದರೆ, ಬಿಜೆಪಿ ಸದಸ್ಯರು ಪಟ್ಟು ಸಡಿಲಿಸದ ಕಾರಣ ಸಂಧಾನ ಯತ್ನ ವಿಫಲವಾಯಿತು.
ಪುನಃ ಕಲಾಪ ಆರಂಭವಾದಾಗಲೂ ವಿರೋಧ ಪಕ್ಷಗಳ ಸದಸ್ಯರು ಧರಣಿ ಮುಂದುವರಿಸಿದರು. ಕೇಂದ್ರ ಸರ್ಕಾರದ ವಿರುದ್ಧದ ನಿರ್ಣಯಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದರು.
ಗದ್ದಲದ ಮಧ್ಯದಲ್ಲೇ ಎರಡು ವರದಿಗಳ ಮಂಡನೆ ಮತ್ತು ಎರಡು ಮಸೂದೆಗಳ ಅಂಗೀಕಾರ ಆಯಿತು. ಕೇಂದ್ರ ಸರ್ಕಾರವನ್ನು ಬೆಂಬಲಿಸಿ ಪ್ರತಿ ನಿರ್ಣಯ ಮಂಡಿಸಲು ಅವಕಾಶ ನೀಡುವಂತೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಮನವಿ ಮಾಡಿದರು. ಸ್ಪೀಕರ್ ಒಪ್ಪಲಿಲ್ಲ. ಗದ್ದಲದ ಮಧ್ಯೆಯೇ ತಾವು ತಂದಿದ್ದ ನಿರ್ಣಯದ ಕರಡನ್ನು ಅಶೋಕ ಓದಿದರು. ಗದ್ದಲ ಮತ್ತಷ್ಟು ಜೋರಾಗುತ್ತಿದ್ದಂತೆ ಸ್ಪೀಕರ್ ಸದನದ ಕಲಾಪವನ್ನು ಸೋಮವಾರ ಬೆಳಿಗ್ಗೆ 9.30ಕ್ಕೆ ಮುಂದೂಡಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.