ADVERTISEMENT

ರೈತರಿಗೆ ಪೈಸೆ ಕೊಡದ ಕಟುಕ ಹೃದಯದ ಸರ್ಕಾರ: ಆರ್.ಅಶೋಕ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 23:30 IST
Last Updated 5 ಡಿಸೆಂಬರ್ 2023, 23:30 IST
ಆರ್‌. ಅಶೋಕ
ಆರ್‌. ಅಶೋಕ   

ವಿಧಾನಸಭೆ: ‘ಈ ಸರ್ಕಾರ ಕಟುಕ ಹೃದಯದ್ದಾಗಿದ್ದು, ಬರ ಪರಿಹಾರಕ್ಕಾಗಿ ಏನೂ ಮಾಡಿಲ್ಲ. ಈವರೆಗೂ ಒಂದು ನಯಾ ಪೈಸೆ ರೈತರ ಖಾತೆಗೆ ಹಾಕಿಲ್ಲ. ಆಡಳಿತ ಪಕ್ಷಕ್ಕೆ ತಾಯಿ ಹೃದಯ ಇರಬೇಕು. ಸಂಕಷ್ಟಕ್ಕೆ ತಕ್ಷಣಕ್ಕೆ ಧಾವಿಸಿ ಬರುವ ಬದಲು ಕೈಚೆಲ್ಲಿ ಕುಳಿತಿದೆ’.

ಈ ರೀತಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವರು ವಿರೋಧಪಕ್ಷದ ನಾಯಕ ಆರ್‌.ಅಶೋಕ, ಮಂಗಳವಾರ ಬರ ವಿಷಯದ ಕುರಿತು ಚರ್ಚೆಯನ್ನು ಆರಂಭಿಸಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರನ್ನು ಕಾಲೆಳೆದರಲ್ಲದೇ, ಇಂಧನ ಇಲಾಖೆಯ ವೈಫಲ್ಯವನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.

‘ಬರ ಮತ್ತು ಪ್ರವಾಹದ ಸಂದರ್ಭದಲ್ಲಿ ನಮ್ಮ ಸರ್ಕಾರ ಇದ್ದಾಗ, ಕೇಂದ್ರದ ನೆರವಿಗೂ ಕಾಯದೇ ರೈತರಿಗೆ ಎರಡು ಪಟ್ಟು ಪರಿಹಾರ, ಪ್ರವಾಹದಲ್ಲಿ ಮನೆಗಳು ಕೊಚ್ಚಿ ಹೋದಾಗ ಎನ್‌ಡಿಆರ್‌ಎಫ್‌ ನಿಯಮಕ್ಕಿಂತೂ ಹೆಚ್ಚು ಮೊತ್ತವನ್ನು ಮನೆಗಳ ನಿರ್ಮಾಣಕ್ಕೆ ನೀಡಿದೆವು. 14 ಬಾರಿ ಬಜೆಟ್‌ ಮಂಡಿಸಿರುವುದಾಗಿ ಹೇಳಿಕೊಳ್ಳುವ ನೀವು ಒಂದು ಪೈಸೆ ಬಿಡುಗಡೆ ಮಾಡದೇ ಏಕೆ ನಿರ್ಲಕ್ಷಿಸಿದ್ದೀರಿ’ ಎಂದು ಖಾರವಾಗಿ ಪ್ರಶ್ನಿಸಿದರು. 

ADVERTISEMENT

ಅಶೋಕ ವಾದ ಸರಣಿ

* ರಾಜ್ಯವನ್ನು 50 ಕ್ಕೂ ಹೆಚ್ಚು ವರ್ಷ ಆಡಳಿತ ಮಾಡಿದ ನೀವು ಬರದಿಂದ ಗುಳೇ ಹೋಗುವುದನ್ನು ತಡೆಯಲು ಶಾಶ್ವತ ಪರಿಹಾರದ ಬಗ್ಗೆ ಏಕೆ ಯೋಚಿಸಲಿಲ್ಲ. ನಾವು ಆಡಳಿತ ಮಾಡಿರುವುದು ಕೇವಲ 9 ವರ್ಷ ಮಾತ್ರ. ಗುಳೇ ಹೋಗುವುದು ಇನ್ನೂ ನಿಂತಿಲ್ಲ. ಗೋವಾ ಬೀಚ್‌ ಬಳಿ ಹೋದರೆ ಗುಳೆ ಹೋದ ಕನ್ನಡಿಗರ ದುಸ್ಥಿತಿ ಕಾಣಬಹುದು.

* ರಾಜ್ಯದಲ್ಲಿ ವಿದ್ಯುತ್‌ ಕಡಿತ ನಿತ್ಯದ ವಿದ್ಯಮಾನವಾಗಿದೆ. ನಿರ್ವಹಣೆಗಾಗಿ ವಿದ್ಯುತ್‌ ಕಡಿತ ಮಾಡಲಾಗಿದೆ ಎಂದು ಇಂಧನ ಸಚಿವರು ಹೇಳುತ್ತಾರೆ. ಆದರೆ, ಎಷ್ಟು ದಿನ ವಿದ್ಯುತ್‌ ನಿರ್ವಹಣೆ ಮಾಡುತ್ತೀರಿ?

* ವಿದ್ಯುತ್‌ ಕಣ್ಣಾಮುಚ್ಚಾಲೆಯಿಂದ ಜನ ಸಾಮಾನ್ಯರು, ರೈತರು ಹೈರಾಣಾಗಿದ್ದಾರೆ. ಕೃಷಿಗೆ ಮೊದಲಿಗೆ 4 ರಿಂದ 5 ಗಂಟೆ ವಿದ್ಯುತ್‌ ಕೊಡುತ್ತೇವೆ ಎಂದಿರಿ. ಈಗ 7 ಗಂಟೆ ಕೊಡುತ್ತೇವೆ ಎಂದು ಹೇಳುತ್ತಾ, ರಾತ್ರಿ ವೇಳೆ ವಿದ್ಯುತ್‌ ಕೊಡುತ್ತಿದ್ದೀರಿ. ಇದರಿಂದ ಹಾವು ಮತ್ತು ಕರಡಿಗಳಿಂದ ರೈತರು ಕಚ್ಚಿಸಿಕೊಳ್ಳುವಂತಾಗಿದೆ. ವಿದ್ಯುತ್‌ ಸಂಪರ್ಕದ ಕೊರತೆಯಿಂದ ಸಿಂಗಲ್‌ ಫೇಸ್‌ ಆಗಿ ಮೋಟಾರ್‌ಗಳು ಸುಟ್ಟು ಹೋಗುತ್ತಿವೆ.

* ಬರ ನಿರ್ವಹಣೆಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಆದರೆ, ತೆಲಂಗಾಣದ ಪತ್ರಿಕೆಗಳಲ್ಲಿ ₹7 ಕೋಟಿಯಷ್ಟು ಖರ್ಚು ಮಾಡಿ ಕರ್ನಾಟಕ ಸರ್ಕಾರದ ಜಾಹೀರಾತು ಪ್ರಕಟಿಸಿದ್ದೀರಿ. ಬೊಕ್ಕಸದ ಹಣ ಖರ್ಚು ಮಾಡುವ ಅಗತ್ಯವಿತ್ತೇ?

ಉಪ್ಪು ಇದ್ದಿಲಿಗೂ ಬರವೇ?

‘ಗ್ರಾಮಾಂತರ ಪ್ರದೇಶದಲ್ಲಿ ಟ್ರಾನ್ಸ್‌ಫಾರ್ಮರ್‌ ಹಾಕಿಸಿಕೊಳ್ಳಲು ರೈತರು ಉಪ್ಪು ಇದ್ದಿಲು ಕೊಡುವುದರ ಜತೆ ಟ್ರಾನ್ಸ್‌ಫಾರ್ಮರ್‌ ಸಾಗಿಸಲು ವಾಹನಕ್ಕೂ ಹಣ ಕೊಡಬೇಕು. ಇದಲ್ಲದೇ ಪ್ರತಿ ರೈತರಿಂದ ₹25 ಸಾವಿರ ಲಂಚ ಕೇಳುತ್ತಾರೆ. ನಿಮ್ಮ ಸರ್ಕಾರಕ್ಕೆ ಉಪ್ಪು ಮತ್ತು ಇದ್ದಿಲು ಪೂರೈಕೆ ಮಾಡಲು ಹಣವಿಲ್ಲವೆ’ ಎಂದು ಅಶೋಕ ಕುಟುಕಿದರು. ‘ಅಂತಹ ಪ‍್ರಕರಣ ಇದ್ದರೆ ತಿಳಿಸಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದಾಗ ‘ನನ್ನ ಜತೆ ಗ್ರಾಮಾಂತರ ಪ್ರದೇಶಕ್ಕೆ ಬನ್ನಿ ಎಲ್ಲವನ್ನೂ ತೋರಿಸುತ್ತೇನೆ’ ಎಂದು ತಿರುಗೇಟು ನೀಡಿದರು.

4 ಲಕ್ಷ ಪಂಪ್‌ಸೆಟ್‌ ಸಕ್ರಮಕ್ಕೆ ಕ್ರಮ

‘ರಾಜ್ಯದಲ್ಲಿರುವ 4 ಲಕ್ಷ ಅಕ್ರಮ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಭರವಸೆ ನೀಡಿದರು.

‘ರಾಜ್ಯದಲ್ಲಿ ಈಗ ವಿದ್ಯುತ್‌ಗೆ ಕೊರತೆ ಇಲ್ಲ. ಇತರ ರಾಜ್ಯಗಳಿಂದ ಖರೀದಿಸುತ್ತಿದ್ದೇವೆ. ಬಿಜೆಪಿ ಅವಧಿಯಲ್ಲಿ ಹೆಚ್ಚು ಪ್ರಮಾಣದಲ್ಲಿ ವಿದ್ಯುತ್‌  ಉತ್ಪಾದನೆ ಮಾಡಿದ್ದರೆ ಈ ಸಮಸ್ಯೆ ಉಂಟಾಗುತ್ತಿರಲಿಲ್ಲ. ಆಗ ಬೇಡಿಕೆ ಕಡಿಮೆ ಇತ್ತು ಈ ಬೇಡಿಕೆ ಹೆಚ್ಚಾಗಿದೆ’ ಎಂದರು.

‘ರಾತ್ರಿ ವೇಳೆ ಪಂಪ್‌ಸೆಟ್‌ ಚಾಲೂ ಮಾಡಲು ಹೋಗಿ ಕರಡಿಯಿಂದ ದಾಳಿಗೊಳಗಾದ ರೈತ ಕುಟುಂಬಕ್ಕೆ ಇಂಧನ ಇಲಾಖೆಯಿಂದ ಪರಿಹಾರ ನೀಡುತ್ತೇವೆ’ ಎಂದು ಹೇಳಿದ ಜಾರ್ಜ್‌ ಮುಂದೆ ಈ ರೀತಿ ಆದರೆ ಪರಿಹಾರ ನೀಡುವುದಿಲ್ಲ’ ಎಂದರು.

‘ರಾತ್ರಿ ವೇಳೆ ಪಂಪ್‌ ಸೆಟ್‌ ಚಾಲೂ ಮಾಡಲು ಹೋದಾಗ ಕರಡಿ ಚಿರತೆಯಿಂದ ದಾಳಿ ಒಳಗಾದರೆ ಪರಿಹಾರ ಕೊಡಬೇಕು’ ಎಂದು ಅಶೋಕ ಅವರು ಒತ್ತಾಯಿಸಿದರು.

ಬಿಜೆಪಿ ಆರಗ ಜ್ಞಾನೇಂದ್ರ ಮಾತನಾಡಿ, ‘ಟ್ರಾನ್ಸ್‌ಫಾರ್ಮರ್‌ಗಳನ್ನು ಕೇರಳದಿಂದ ತರಿಸಲಾಗುತ್ತಿದೆ. ರಾಜ್ಯ ಸರ್ಕಾರದ್ದೇ ಕವಿಕಾ ಸಂಸ್ಥೆಯಿಂದ ಏಕೆ ಖರೀದಿಸುತ್ತಿಲ್ಲ’ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಾರ್ಜ್‌ ‘ಕವಿಕಾದಿಂದಲೂ ಖರೀದಿಸುತ್ತಿದ್ದು ಹೆಚ್ಚಿನ ಬೇಡಿಕೆ ಇರುವುದರಿಂದ ಕೇರಳದ ಸರ್ಕಾರ ಸಂಸ್ಥೆಯಿಂದಲೇ ಖರೀದಿಸಲಾಗುತ್ತಿದೆ. ಹಿಂದೆಯೂ ಖರೀದಿಸಲಾಗಿತ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.