ಬೆಂಗಳೂರು: ‘ಬೆಳಗಾವಿಯ ವಿಧಾನಮಂಡಲ ಅಧಿವೇಶನದಲ್ಲಿ ನಾವು ಪರಿಣಾಮಕಾರಿಯಾಗಿಯೇ ಎಲ್ಲ ವಿಷಯಗಳನ್ನು ಪ್ರಸ್ತಾಪಿಸಿದ್ದೇವೆ. ಆದರೆ, ಸರ್ಕಾರವೇ ಕೆಲವು ವಿಷಯಗಳ ಪ್ರಸ್ತಾಪಕ್ಕೆ ಅವಕಾಶ ನೀಡಲಿಲ್ಲ‘ ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ ದೂರಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಡಿ.ಕೆ.ಶಿವಕುಮಾರ್ ಮತ್ತು ಜಮೀರ್ ಅಹಮದ್ ಪ್ರಕರಣಗಳ ಚರ್ಚೆಗೆ ಅವಕಾಶವನ್ನೇ ಕೊಡಲಿಲ್ಲ ಎಂದರು.
‘ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ನಿಮಗೆ ಏಕೆ ಸಾಧ್ಯವಾಗಲಿಲ್ಲ’ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ನಾವು ಬಯಸಿದ ಎಲ್ಲ ವಿಷಯಗಳನ್ನೂ ಪ್ರಾಮಾಣಿಕವಾಗಿ ಪ್ರಸ್ತಾಪಿಸಿದ್ದೇವೆ‘ ಎಂದರು.
‘ನಾಯಕರ ಮಧ್ಯೆ ಯಾವುದೇ ಸಮಸ್ಯೆಗಳಿಲ್ಲ. ಸಣ್ಣ ಪುಟ್ಟ ಸಮಸ್ಯೆಗಳಿದ್ದರೆ ಅವುಗಳನ್ನು ಪಕ್ಷದ ವೇದಿಕೆಯಲ್ಲೇ ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸಿಕೊಳ್ಳುತ್ತೇವೆ. ಮುಖ್ಯಮಂತ್ರಿ ಹುದ್ದೆಗಾಗಿನ ಕಿತ್ತಾಟ ಕಾಂಗ್ರೆಸ್ ಪಕ್ಷದಲ್ಲಿ ಇನ್ನೂ ಮುಗಿದಿಲ್ಲ’ ಎಂದು ಹೇಳಿದರು.
‘ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿರುವಂತೆ ಲೋಕಸಭೆ ಚುನಾವಣೆ ಬಳಿಕ ಸರ್ಕಾರ ಪತನವಾಗಬಹುದು. ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಜಿತ್ ಪವಾರ್ ಯಾರು ಆಗುತ್ತಾರೆ ಎಂಬುದನ್ನು ಕಾದು ನೋಡಬೇಕು. ಸರ್ಕಾರ ಉರುಳುತ್ತದೆ ಎಂದು ನಾನು ಹೇಳುತ್ತಿಲ್ಲ. ಆಪರೇಷನ್ ಮಾಡುವ ಉದ್ದೇಶವೂ ಬಿಜೆಪಿಗೆ ಇಲ್ಲ. ಕುಮಾರಸ್ವಾಮಿ ಹೇಳಿದ್ದನ್ನು ಮಾತ್ರ ತಿಳಿಸಿದ್ದೇನೆ’ ಎಂದು ಅಶೋಕ ಹೇಳಿದರು.
‘ಬೆಳಗಾವಿ ಅಧಿವೇಶನ ನನಗೆ ತೃಪ್ತಿ ತಂದಿಲ್ಲ. ವಿಪಕ್ಷವಾಗಿ ನಾವು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಹುದಿತ್ತು’ ಎಂದು ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ.
ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭೇಟಿಯ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.
‘ನಾವು ಸಾಕಷ್ಟು ವಿಷಯಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಬಹುದಿತ್ತು. ಆದರೆ, ವಿರೋಧ ಪಕ್ಷವಾಗಿ ನಮ್ಮ ನಿರ್ವಹಣೆ ನಿರೀಕ್ಷೆ ಮಟ್ಟಕ್ಕೆ ಇರಲಿಲ್ಲ. ಸರ್ಕಾರವನ್ನು ಇಕಟ್ಟಿಗೆ ಸಿಲುಕಿಸಬಹುದಾದ ಹಲವು ವಿಷಯಗಳಿ
ದ್ದವು. ಉತ್ತರಕರ್ನಾಟಕ ಬಗ್ಗೆ ಚರ್ಚೆ ಎಂದು ರಾಜೀ ಮಾಡಿಕೊಂಡೆವು’ ಎಂದು ಹೇಳಿದರು.
‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಏಳು ತಿಂಗಳಾಗಿದೆ. ಆರ್.ಅಶೋಕ ಅವರು ಹೊಸದಾಗಿ ವಿರೋಧಪಕ್ಷದ ನಾಯಕರಾಗಿದ್ದಾರೆ. ಅವರು ಇನ್ನೂ ಸುಧಾರಣೆ ಆಗಬೇಕಾಗಿದೆ. ನಮ್ಮಲ್ಲಿ ನಾಯಕತ್ವದ ಕೊರತೆ ಇಲ್ಲ’ ಎಂದರು.
‘ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸು ಎಂದು ಯಡಿಯೂರಪ್ಪ ಹಿಂದೊಮ್ಮೆ ಹೇಳಿದ್ದಾಗ ಓಡಿ ಹೋಗಿದ್ದೆ. ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ನನ್ನ ಮಗನಿಗೆ ಟಿಕೆಟ್ ಕೊಡುವಂತೆ ಕೇಳಿದ್ದೇನೆ. ಸರ್ವೇ ಮಾಡಲಿ. ಆ ಬಳಿಕ ಯಾರಿಗೆ ಬೇಕಾದರೂ ಕೊಡಲಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.