ADVERTISEMENT

ಆಡಳಿತ ಪಕ್ಷದ ಜತೆ ಕೈಜೋಡಿಸಿದ ಬಿಜೆಪಿ ನಾಯಕರು: ಲಿಂಬಾವಳಿ

ವಿಧಾನಸಭೆಯಲ್ಲಿ ಕಳಪೆ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 16:04 IST
Last Updated 26 ಜುಲೈ 2024, 16:04 IST
ಅರವಿಂದ ಲಿಂಬಾವಳಿ
ಅರವಿಂದ ಲಿಂಬಾವಳಿ   

ಬೆಂಗಳೂರು: ‘ನಮ್ಮ ಪಕ್ಷದ ಅಧ್ಯಕ್ಷರು ಮತ್ತು ವಿರೋಧ ಪಕ್ಷ ನಾಯಕರ ಮಧ್ಯೆ ಸಾಮರಸ್ಯ, ಹೊಂದಾಣಿಕೆ, ತಾಳ– ಮೇಳ ಇರಲಿಲ್ಲ. ಹೀಗಾಗಿ ಅಧಿವೇಶನದಲ್ಲಿ ಪರಿಣಾಮಕಾರಿ ವಿರೋಧಪಕ್ಷವಾಗಿ ಕಾರ್ಯ ನಿರ್ವಹಿಸಲಿಲ್ಲ’ ಎಂದು ಬಿಜೆಪಿ ನಾಯಕ ಅರವಿಂದ ಲಿಂಬಾವಳಿ ಕಿಡಿಕಾರಿದ್ದಾರೆ.

ಈ ಕುರಿತು ‘ಎಕ್ಸ್‌’ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ‘ಸಿಕ್ಕ ಅವಕಾಶ ಮತ್ತು ಸಮಯವನ್ನು ಕೈಚೆಲ್ಲಿ ಕಲಾಪ ಮೊಟಕುಗೊಳಿಸುವಲ್ಲಿ ಆಡಳಿತ ಪಕ್ಷದ ನಾಯಕರ ಜತೆ ಕೈ ಜೋಡಿಸಿದ್ದು ಪ್ರಶ್ನಾರ್ಹ’ ಎಂದಿದ್ದಾರೆ.

‘ಬೆಂಗಳೂರು ಸೇರಿ ಅನೇಕ ಜಿಲ್ಲೆಗಳಲ್ಲಿ ಡೆಂಗಿ ತಾಂಡವವಾಡುತ್ತಿದೆ. ಅಲ್ಲದೇ, ಭಾರಿ ಮಳೆ ಮತ್ತು ನೆರೆ ಹಾವಳಿಯಿಂದ ಲಕ್ಷಾಂತರ ಜನ ಮನೆ– ಮಠ ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ಈ ಬಗ್ಗೆ ಬೆಳಕು ಚೆಲ್ಲಬೇಕು. ಜನರ ಸಂಕಷ್ಟಕ್ಕೆ ಕನ್ನಡಿಯಾಗಬೇಕು ಎಂದು ನಮ್ಮ ಪಕ್ಷದ ನಾಯಕರಿಗೆ ಅನಿಸದೇ ಹೋದುದು ದುರ್ದೈವ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಬರ ಪರಿಹಾರವೂ ಅನೇಕ ರೈತರಿಗೆ ತಲುಪಿಲ್ಲ. ಆ ಬಗ್ಗೆ ಪ್ರತಿಪಕ್ಷದ ನಾಯಕರು ಮಾತನಾಡಲೇ ಇಲ್ಲ. ಶಾಸಕರೂ ಆಗಿರುವ ನಮ್ಮ ಪಕ್ಷದ ಅಧ್ಯಕ್ಷರು ಮತ್ತು ವಿರೋಧ ಪಕ್ಷದ ಮಧ್ಯೆ ಹೊಂದಾಣಿಕೆಯೇ ಇರಲಿಲ್ಲ. ಆಡಳಿತ ಪಕ್ಷ ಇದರ ಸಂಪೂರ್ಣ ಲಾಭ ಪಡೆಯಿತು’ ಎಂದು ಹೇಳಿದ್ದಾರೆ.

‘ಮುಡಾ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಗ್ಯಾರಂಟಿ ಯೋಜನೆ ಹಣಕ್ಕೆ ಎಸ್‌ಸಿ–ಎಸ್‌ಟಿಗೆ ಮೀಸಲಿಟ್ಟಿರುವ ಅನುದಾನದ ದುರ್ಬಳಕೆ... ಹೀಗೆ ಯಾವ ವಿಷಯವನ್ನೂ ಒಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ನಮ್ಮ ಪಕ್ಷಕ್ಕೆ ಸಾಧ್ಯವಾಗಲಿಲ್ಲ. ಈ ವಿಷಯಗಳ ಬಗ್ಗೆ ಪರಿಣಾಮಕಾರಿಯಾಗಿ ವಿಷಯ ಮಂಡಿಸಲು ವಿರೋಧಪಕ್ಷದ ನಾಯಕರೂ ವಿಫಲರಾದರು. ಆಡಳಿತ ಪಕ್ಷದೊಂದಿಗೆ ಶಾಮೀಲಾಗಿದೆಯಾ ಎಂದು ಜನ ಮಾತಾಡಿಕೊಳ್ಳುವಂತಾಗಿದೆ’ ಎಂದು ತಿಳಿಸಿದ್ದಾರೆ.

‘ಮುಡಾ ವಿರುದ್ಧ ನಡೆಸಿದ ಹೋರಾಟ ಕಣ್ಣೊರೆಸುವ ತಂತ್ರದಂತೆ ಕಂಡಿತು. ಅಧಿವೇಶನದಲ್ಲಿ ನಾಯಕರ ನಡೆ ಗಮನಿಸಿದರೆ ಮುಂದಿನ ದಿನಗಳಲ್ಲಿ ಬಿಜೆಪಿ ಜನಪರ ಹೋರಾಟಗಳಲ್ಲಿ ಹೇಗೆ ತೊಡಗಿಸಿಕೊಳ್ಳಬಹುದು ಎಂಬುದು ನಿಷ್ಠಾವಂತ ಕಾರ್ಯಕರ್ತರಿಗೆ ಆತಂಕದ ವಿಷಯವಾಗಿದೆ’ ಎಂದಿದ್ದಾರೆ.

‘ಬೆರಳೆಣಿಕೆಯಷ್ಟು ಶಾಸಕರನ್ನು ಹೊಂದಿದ್ದ ದಿನಗಳಲ್ಲೂ ಆರ್ಭಟಿಸುತ್ತಿದ್ದ, ಜನರ ಆಶೋತ್ತರಗಳಿಗೆ ದನಿಯಾಗುತ್ತಿದ್ದ ಬಿಜೆಪಿಯನ್ನು ನೋಡಿದ್ದ ನನಗೆ, ಇಂದಿನ ನಮ್ಮ ಪಕ್ಷದ ಈ ಪರಿಸ್ಥಿತಿ ನೋಡಿ ತೀವ್ರ ಬೇಸರವಾಗಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.