ADVERTISEMENT

ವಿಪಕ್ಷದ ಅಹೋರಾತ್ರಿ ಧರಣಿ ರಾಜಕೀಯ ನಾಟಕ: ಎಚ್‌.ಕೆ. ಪಾಟೀಲ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 6:11 IST
Last Updated 25 ಜುಲೈ 2024, 6:11 IST
ಎಚ್‌.ಕೆ ಪಾಟೀಲ
ಎಚ್‌.ಕೆ ಪಾಟೀಲ   

ಬೆಂಗಳೂರು: ‘ಬಿಜೆಪಿಯವರು ರಾಜಕೀಯ ತಂತ್ರಕ್ಕೆ ವಿಧಾನಮಂಡಲ ಅಧಿವೇಶನವನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ಕಾನೂನು ಸಚಿವ ಎಚ್‌.ಕೆ. ಪಾಟೀಲ ಆರೋಪಿಸಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಮುಡಾ ವಿಚಾರದಲ್ಲಿ ಚರ್ಚೆಗೆ ಅವಕಾಶ ನೀಡಲಿಲ್ಲವೆಂದು ವಿರೋದ ಪಕ್ಷದವರು ಅಹೋರಾತ್ರಿ ಧರಣಿ ಮಾಡಿದ್ದಾರೆ. ನಿಲುವಳಿ ಪ್ರಸ್ತಾವ ಯಾಕೆ ಮಾಡಬಾರದು ಎನ್ನುವುದನ್ನು  ನಾವು ವಿವರಿಸಿದ್ದೇವೆ. ಆದರೂ ಅವರು ಧರಣಿ ಮಾಡುತ್ತಿದ್ದಾರೆ’ ಎಂದರು.

‘ತಮ್ಮ ಮೇಲೆಯೇ ಆಪಾದನೆ ಇದ್ದರೂ ತನಿಖೆಗೆ ಮುಖ್ಯಮಂತ್ರಿ ಅವರು ವಿಚಾರಣಾ ಆಯೋಗ ರಚಿಸಿದ್ದಾರೆ. ತನ್ನ ಮೇಲೆ ಆರೋಪ ಇದ್ದಾಗ  ಯಾರಾದರೂ ಒಬ್ಬ ಮುಖ್ಯಮಂತ್ರಿ ತನಿಖಾ‌ ಆಯೋಗ ರಚಿಸಿರುವ ನಿದರ್ಶನ ಇದೆಯೇ‘ ಎಂದು ಪಾಟೀಲ ಪ್ರಶ್ನಿಸಿದರು. 

ADVERTISEMENT

‘ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ, ಬಿ.ಎಸ್‌. ಯಡಿಯೂರಪ್ಪ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಮೇಲೂ ಆರೋಪಗಳಿದ್ದವು. ಮುಡಾ ವಿಚಾರದಲ್ಲಿ ಆಯೋಗ ರಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಲುವನ್ನು ವಿರೋದ ಪಕ್ಷದವರು ಪ್ರಶಂಸೆ ಮಾಡಬೇಕಿತ್ತು. ಆದರೆ, ಅವರು ಧರಣಿ ನಡೆಸುತ್ತಿರುವುದು ಕೇವಲ ರಾಜಕೀಯ ನಾಟಕ’ ಎಂದು ಟೀಕಿಸಿದರು.

‘ಉತ್ತರ ಕನ್ನಡ, ಮಲೆನಾಡು ಭಾಗದಲ್ಲಿ ಮಳೆಯಿಂದಾಗಿ ಸಾಕಷ್ಟು ಅನಾಹುತ ಆಗಿದೆ. ಅಧಿವೇಶನದಲ್ಲಿ ಈ ವಿಷಯಗಳ ಬಗ್ಗೆ ಚರ್ಚೆ ಮಾಡಿಲ್ಲ. ಆ ಕುರಿತು ಚರ್ಚೆ ಆಗಬೇಕಿದೆ. ಒಂದೇ ದೇಶ, ಒಂದು ಚುನಾವಣೆ ಮತ್ತು ನೀಟ್ ವಿರೋಧಿಸಿ ನಿರ್ಣಯ ಮಂಡಿಸಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.