ಬೆಂಗಳೂರು: ‘101.3 ಎಫ್.ಎಂ.ರೈನ್ ಬೋ ಕನ್ನಡ ಕಾಮನಬಿಲ್ಲು ವಾಹಿನಿಯನ್ನು ಬೆಂಗಳೂರು ಆಕಾಶವಾಣಿ ಜೊತೆ ವಿಲೀನಗೊಳಿಸಲು ನಿರ್ಧರಿಸಲಾಗಿದೆ. ವಾಹಿನಿಯನ್ನು ಶಾಶ್ವತವಾಗಿ ಮುಚ್ಚುವ ಹುನ್ನಾರ ಇದರ ಹಿಂದೆ ಅಡಗಿದೆ’ ಎಂದು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಆರೋಪಿಸಿದ್ದಾರೆ.
ಈ ಸಂಬಂಧ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
‘101.3 ಎಫ್.ಎಂ.ರೈನ್ ಬೋ ಕನ್ನಡ ಕಾಮನಬಿಲ್ಲು ವಾಹಿನಿಯು 20 ವರ್ಷಗಳಿಂದ ರಾಜ್ಯದ ಜನರಿಗೆ ಮಾಹಿತಿ ಹಾಗೂ ಮನೋರಂಜನೆ ಒದಗಿಸುತ್ತಿದೆ. ವಿಲೀನ ನಿರ್ಧಾರಕ್ಕೆ ಆಕಾಶವಾಣಿಯ ಅಧಿಕಾರಿಗಳು ವಿರೋಧ ವ್ಯಕ್ತಪಡಿಸದಿರುವುದು ಅಚ್ಚರಿ ಮೂಡಿಸಿದೆ. ವಿಲೀನದ ಮೂಲಕ ವಾಹಿನಿಯನ್ನು ಹಂತ ಹಂತವಾಗಿ ನಿರ್ನಾಮ ಮಾಡುವುದು ಈ ನಿರ್ಧಾರದ ಹಿಂದಿನ ಉದ್ದೇಶ. ಹೊರರಾಜ್ಯದ ಕೆಲವು ಅಧಿಕಾರಿಗಳ ಹುನ್ನಾರ ಇದು’ ಎಂದು ತಿಳಿಸಿದ್ದಾರೆ.
‘ಗೃಹಸಚಿವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಮುಖ್ಯಮಂತ್ರಿಯವರು ಈ ವಿಷಯವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕು’ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.