ಬೆಂಗಳೂರು: ‘ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ (ಒಪಿಎಸ್) ಜಾರಿ ಕುರಿತಂತೆ ಪಕ್ಷದ ಹೈಕಮಾಂಡ್ ಜತೆ ಮಾತನಾಡಿ ನಿರ್ಧಾರ ತಿಳಿಸಲಾಗುವುದು. ಸುಳ್ಳು ಭರವಸೆ ನೀಡಲು ಹೋಗುವುದಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಪಡಿಸಿ ಒಪಿಎಸ್ ಜಾರಿಗೆ ಆಗ್ರಹಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಎನ್‌ಪಿಎಸ್ ನೌಕರರು ಹಮ್ಮಿಕೊಂಡಿರುವ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಆರನೇ ದಿನಕ್ಕೆ ಕಾಲಿಟ್ಟಿದೆ. ಧರಣಿ ಸ್ಥಳಕ್ಕೆ ಶನಿವಾರ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ಸರ್ಕಾರಿ ನೌಕರರ ಹಕ್ಕು ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ. ಅದಷ್ಟು ಬೇಗ ಪಕ್ಷದ ನಿರ್ಧಾರ ತಿಳಿಸಲಾಗುವುದು. ನಿಮ್ಮ ಜತೆ ನಾನಿದ್ದೇನೆ. ನಿಮ್ಮ ಬೇಡಿಕೆಗೆ ವಿರುದ್ಧ ಇಲ್ಲ’ ಎಂದು ಧರಣಿ ನಿರತರಿಗೆ ಭರವಸೆ ನೀಡಿದರು.
‘ಸರ್ಕಾರಿ ನೌಕರರಿಗೆ ನ್ಯಾಯಯುತ ಸಂಬಳ, ಪಿಂಚಣಿ ಕೊಡಬೇಕು. ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿದ್ದೇನೆ. ಒಪಿಎಸ್ ಮಾಡಲು ಸಾಧ್ಯವಿಲ್ಲ ಎಂದು ನನ್ನ ಅಧಿಕಾರವಧಿಯಲ್ಲಿ ಹೇಳಿದ್ದೆ. ಆದರೆ, ಈಗ ಕಾಲ ಬದಲಾಗಿದೆ. ಈಗಾಗಲೇ ಜಾರ್ಖಂಡ್, ಅಸ್ಸಾಂ, ಹಿಮಾಚಲ ಪ್ರದೇಶದಲ್ಲಿ ಒಪಿಎಸ್ ಜಾರಿ ತರಲಾಗಿದೆ. ನಮ್ಮ ಸರ್ಕಾರ ಬಂದರೆ ಜಾರಿಗೆ ತರಲು ಪ್ರಯತ್ನಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.