ADVERTISEMENT

ಕಾಳಿ ಹುಲಿ ಮೀಸಲಿನಲ್ಲಿ ಆರ್ಕಿಡೇರಿಯಂ: ಅರಣ್ಯ ಇಲಾಖೆ ವರದಿ ಕೇಳಿದ ಎನ್‌ಟಿಸಿಎ

ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಮೀಸಲು ಅರಣ್ಯದಲ್ಲಿ ಅರಣ್ಯ ಮತ್ತು ವನ್ಯಜೀವಿ ಕಾಯ್ದೆಗಳನ್ನು ಉಲ್ಲಂಘಿಸಿ ಆರ್ಕಿಡೇರಿಯಂ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2023, 13:59 IST
Last Updated 18 ಡಿಸೆಂಬರ್ 2023, 13:59 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಮೀಸಲು ಅರಣ್ಯದಲ್ಲಿ ಅರಣ್ಯ ಮತ್ತು ವನ್ಯಜೀವಿ ಕಾಯ್ದೆಗಳನ್ನು ಉಲ್ಲಂಘಿಸಿ ಆರ್ಕಿಡೇರಿಯಂ ಕಾಮಗಾರಿ ಹಾಗೂ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸುತ್ತಿರುವುದರ ಕುರಿತು ವಾಸ್ತವ ವರದಿ ಸಲ್ಲಿಸುವಂತೆ ಕರ್ನಾಟಕ ಅರಣ್ಯ ಇಲಾಖೆಯ ಪಿಸಿಸಿಎಫ್‌ ಅವರಿಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ನಿರ್ದೇಶನ ನೀಡಿದೆ.

‘ದಾಂಡೇಲಿ ವನ್ಯಜೀವಿ ಧಾಮದಲ್ಲಿ ನಿಯಮ ಉಲ್ಲಂಘಿಸಿ ಕ್ಯಾನೊಪಿ ವಾಕ್‌ ಪ್ರವಾಸೋದ್ಯಮ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಯಾವುದೇ ಅನುಮತಿ ಪಡೆಯದೆ ಹುಲಿ ಪ್ರತಿಷ್ಠಾನದ ಹಣ ಹಾಗೂ ಸಿಎಸ್‌ಆರ್ ಹಣ ಬಳಸಿ ಆರ್ಕಿಡೇರಿಯಂ ನಿರ್ಮಿಸಲಾಗಿದೆ. ಈ ಕುರಿತು ಉನ್ನತ ಮಟ್ಟದ ತನಿಖೆ ಆಗಬೇಕು’ ಎಂದು ಆಗ್ರಹಿಸಿ ಸ್ಥಳೀಯರು ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವ್‌, ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಪ್ರಾಧಿಕಾರಕ್ಕೆ ದಾಖಲೆಗಳ ಸಮೇತ ದೂರು ನೀಡಿದ್ದರು.

ADVERTISEMENT

ಪಿಸಿಸಿಎಫ್‌ ಅವರಿಗೆ ಡಿಸೆಂಬರ್‌ 11ರಂದು ಪತ್ರ ಬರೆದಿರುವ ಪ್ರಾಧಿಕಾರದ ಸಹಾಯಕ ಅರಣ್ಯ ಮಹಾನಿರ್ದೇಶಕರಾದ ಹರಿಣಿ ವೇಣುಗೋಪಾಲ್‌, ‘ಈ ಬಗ್ಗೆ ದೂರುಗಳು ಬಂದಿದ್ದು, ಪ್ರಾಧಿಕಾರಕ್ಕೆ ಶೀಘ್ರ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದ್ದಾರೆ.

‘ಹುಲಿ ಮೀಸಲು ಪ್ರದೇಶದ ಕೋರ್ ಪ್ರದೇಶದಲ್ಲಿ ಬೃಹತ್ ಮರಗಳನ್ನು‌ ಕಡಿದು ಆರ್ಕಿಡೇರಿಯಂ ನಿರ್ಮಿಸಲಾಗಿದೆ. ಮೀಸಲು ಪ್ರದೇಶದಲ್ಲಿ ಯಾವುದೇ ಹೊಸ ನಿರ್ಮಾಣ ಕಾಮಗಾರಿಗೆ ಅನುವು ಮಾಡಿಕೊಡುವುದಿಲ್ಲ ಎಂದು ಎನ್‌ಟಿಸಿಎ ಈ ಹಿಂದೆಯೇ ತೀರ್ಮಾನ ತೆಗೆದುಕೊಂಡಿದೆ. ಆದರೆ, ಕಾಳಿ ಹುಲಿ ಮೀಸಲು ಪ್ರದೇಶದ ಯೋಜನಾ ನಿರ್ದೇಶಕರು ಈ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಕಾಮಗಾರಿ ನಡೆಸಲು ಅವಕಾಶ ನೀಡಿದ್ದಾರೆ. ಈ ಕಾಮಗಾರಿಗೆ ಕೈಗಾ ಅಣು ವಿದ್ಯುತ್‌ ಸ್ಥಾವರ ‍ಪ್ರಾಧಿಕಾರದಿಂದ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ ಹಣಕಾಸಿನ ನೆರವು ಪಡೆದಿರುವುದಾಗಿ ಪ್ರಕಟಿಸಿದ್ದಾರೆ. ಉಳಿದ ವೆಚ್ಚವನ್ನು ಹುಲಿ ಪ್ರತಿಷ್ಠಾನದಿಂದ ಭರಿಸಿರುವುದಾಗಿ ಹೇಳಿದ್ದಾರೆ. ಸಿಎಸ್‌ಆರ್‌ ಅಡಿಯಲ್ಲಿ ಹಣಕಾಸಿನ ನೆರವು ಪಡೆಯಲು ಹಾಗೂ ಪ್ರತಿಷ್ಠಾನದ ಹಣವನ್ನು ಮನಸ್ಸಿಗೆ ಬಂದಂತೆ ಖರ್ಚು ಮಾಡಲು ಅನುಮತಿ ನೀಡಿದವರು ಯಾರು? ಈ ಬಗ್ಗೆ ಸಮಗ್ರ ತನಿಖೆ ಆಗಬೇಕು’ ಎಂದು ದೂರಿನಲ್ಲಿ ಆಗ್ರಹಿಸಿದ್ದರು.

‘ಕ್ಯಾಸಲ್‌ರಾಕ್‌ ಅಭಯಾರಣ್ಯದ ವ್ಯಾಪ್ತಿಯಲ್ಲಿ ಅನುಮತಿ ಇಲ್ಲದೆಯೇ ಕ್ಯಾನೋಪಿ ವಾಕ್ ಕಾಮಗಾರಿ ನಡೆಸುವುದಕ್ಕೂ ಸ್ಥಳೀಯರು ಹಾಗೂ ಹೋರಾಟಗಾರರು ಈ ಹಿಂದೆ ವಿರೋಧ ವ್ಯಕ್ತ‍ಪಡಿಸಿದ್ದರು. ಇದು ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ಅರಣ್ಯ ಇಲಾಖೆ ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಗಳು, ‘ಕ್ಯಾಸಲ್‌ರಾಕ್– ಕುವೇಶಿ– ದೂಧ್ ಸಾಗರ ಜಲಪಾತದ ದಾರಿಯಲ್ಲಿ ಚಾರಣ ಕೈಗೊಳ್ಳುವ ಕುರಿತು ಕಾಳಿ ಹುಲಿ ಸಂರಕ್ಷಣಾ ಯೋಜನೆಯಲ್ಲೇ ಉಲ್ಲೇಖವಾಗಿದೆ. ಕ್ಯಾನೋಪಿ ವಾಕ್ ಕೂಡ ಇದರ ವ್ಯಾಪ್ತಿಗೆ ಬರುತ್ತದೆ. ಇದೊಂದು ಪರಿಸರ ಪ್ರವಾಸೋದ್ಯಮ ಚಟುವಟಿಕೆ’ ಎಂದು ಸಮರ್ಥಿಸಿಕೊಂಡಿದ್ದವು. ವಾಣಿಜ್ಯ ಉದ್ದೇಶವಿರದ ಕಾಮಗಾರಿಗಳನ್ನು ಸಂರಕ್ಷಿತ ಪ್ರದೇಶದ ವ್ಯಾಪ್ತಿಯೊಳಗೆ ಕೈಗೊಳ್ಳಬಹುದು. ಬೇರಾವುದೇ ಚಟುವಟಿಕೆ ಕೈಗೊಳ್ಳಬೇಕೆಂದರೂ ಆ ಬಗ್ಗೆ ಹುಲಿ ಸಂರಕ್ಷಣಾ ಯೋಜನೆಯಲ್ಲಿ ಉಲ್ಲೇಖವಾಗಿರಬೇಕು ಎಂದು ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿದೆ. ಸುಪ್ರೀಂ ಕೋರ್ಟ್‌ ನಿರ್ದೇಶನ ಉಲ್ಲಂಘಿಸಿ ಆರ್ಕಿಡೇರಿಯಂ ಕಾಮಗಾರಿ ನಡೆಸಲಾಗಿದೆ’ ಎಂದು ದೂರಿನಲ್ಲಿ ವಿವರಿಸಿದ್ದರು. 

ಅಕ್ರಮ ಕಾಮಗಾರಿಗೆ ಅನುವು ಮಾಡಿಕೊಟ್ಟ ಆಗಿನ ಪಿಸಿಸಿಎಫ್, ಕೆನರಾ ವೃತ್ತದ ಸಿಸಿಎಫ್‌, ಡಿಸಿಎಫ್‌ ಹಾಗೂ ಎಸಿಎಫ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.