ADVERTISEMENT

ಹೆಚ್ಚುವರಿ ವೇತನ ಬಡ್ತಿಗೆ ಆದೇಶ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2018, 20:41 IST
Last Updated 29 ನವೆಂಬರ್ 2018, 20:41 IST

ಬೆಂಗಳೂರು: ‘1974ರಿಂದ 1987ರ ಅವಧಿಯಲ್ಲಿ, ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಒಂದು ಹೆಚ್ಚವರಿ ವೇತನ ಬಡ್ತಿ ನೀಡಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಈ ಕುರಿತಂತೆ ದಾವಣಗೆರೆಯ ನಿವೃತ್ತ ಪ್ರಾಂಶುಪಾಲ ಎಸ್‌.ಪರಮೇಶ್ವರಪ್ಪ ಸೇರಿದಂತೆ 500ಕ್ಕೂ ಹೆಚ್ಚು ಜನರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಲ್‌.ನಾರಾಯಣ ಸ್ವಾಮಿ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಲೇವಾರಿ ಮಾಡಿದೆ.

‘ಈ ಆದೇಶವನ್ನು ಆರು ತಿಂಗಳಲ್ಲಿ ಪಾಲಿಸಬೇಕು’ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ಕರ್ನಾಟಕ ಸಿವಿಲ್‌ ಸೇವೆಗಳು (ಸೇವಾ ಮತ್ತು ಕನ್ನಡ ಭಾಷಾ ಪರೀಕ್ಷೆಗಳು) ನಿಯಮಗಳು–1974ರ ಅನುಸಾರ 1974ರಿಂದ 1987ರ ಅವಧಿಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ಭಾಷಾ ಪರೀಕ್ಷೆ ಪಾಸಾದ ಸರ್ಕಾರಿ ನೌಕರರಿಗೆ ಒಂದು ಹೆಚ್ಚುವರಿ ವೇತನ ನೀಡಲಾಗಿತ್ತು.

’ಈ ಆದೇಶವನ್ನು ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದವರಿಗೂ ವಿಸ್ತರಿಸಬೇಕು‘ ಎಂದು ಕೋರಿ ಖಾಸಗಿ ಅನುದಾನಿತ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

**

ಹೈಕೋರ್ಟ್‌ ನ್ಯಾಯಮೂರ್ತಿಗಳ ನೇಮಕಕ್ಕೆ ರಂಗನಾಥ್‌ ಆಗ್ರಹ

ಬೆಂಗಳೂರು: ‘ಹೈಕೋರ್ಟ್‌ನಲ್ಲಿ ಖಾಲಿ ಇರುವ 29 ನ್ಯಾಯಮೂರ್ತಿಗಳ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದು ಬೆಂಗಳೂರು ವಕೀಲರ ಸಂಘ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

ಈ ಕುರಿತು ಪ್ರಧಾನ ಮಂತ್ರಿ, ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ, ಅಟಾರ್ನಿ ಜನರಲ್ ಮತ್ತು ಕೇಂದ್ರ ಕಾನೂನು ಸಚಿವರಿಗೆ ಪತ್ರ ಬರೆದಿರುವ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ‘ಹಾಲಿ ಇರುವ ನ್ಯಾಯಮೂರ್ತಿಗಳ ಮೇಲೆ ಕಾರ್ಯಬಾಹುಳ್ಯ ಹೆಚ್ಚಾಗಿದೆ. ಕಕ್ಷಿದಾರರಿಗೆ ತ್ವರಿತ ನ್ಯಾಯ ಸಿಗುತ್ತಿಲ್ಲ’ ಎಂದು ಆಕ್ಷೇಪಿಸಿದ್ದಾರೆ.

‘ಕಳೆದ ಮೇ 2018ರಲ್ಲಿ ಕರ್ನಾಟಕ ಹೈಕೋರ್ಟ್‌ನ ಕೊಲಿಜಿಯಂ 9 ಮಂದಿ ವಕೀಲರ ಹೆಸರನ್ನು ನ್ಯಾಯಮೂರ್ತಿಗಳ ಹುದ್ದೆಗಳಿಗೆ ಶಿಫಾರಸು ಮಾಡಲಾಗಿತ್ತು. ಈ ಕಡತ ಕೇಂದ್ರ ಸರ್ಕಾರದ ಮುಂದೆ ಬಾಕಿ ಇದೆ. ಈ ಶಿಫಾರಸು ಪಟ್ಟಿಗೆ ಆದಷ್ಟು ಶೀಘ್ರ ಅನುಮೋದನೆ ನೀಡಬೇಕು’ ಎಂದು ಪತ್ರದಲ್ಲಿ ಕೋರಲಾಗಿದೆ.

ರಾಜ್ಯ ಹೈಕೋರ್ಟ್‌ಗೆ ಮಂಜೂರಾಗಿರುವ ಒಟ್ಟು ನ್ಯಾಯಮೂರ್ತಿಗಳ ಸಂಖ್ಯೆ 62. ಸದ್ಯ 33 ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಬೆಂಗಳೂರಿನ ಪ್ರಧಾನ ಪೀಠದಲ್ಲಿ 23, ಧಾರವಾಡದಲ್ಲಿ 6 ಹಾಗೂ ಕಲಬುರ್ಗಿಯಲ್ಲಿ 4 ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಒಟ್ಟು 3.25 ಲಕ್ಷ ಪ್ರಕರಣ ವಿಚಾರಣೆಗೆ ಬಾಕಿ ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.