ಬೆಂಗಳೂರು: ‘ರಾಘವೇಶ್ವರ ಭಾರತೀ ಸ್ವಾಮೀಜಿಯನ್ನು ಅತ್ಯಾಚಾರ ಆರೋಪದಿಂದ ಕೈಬಿಟ್ಟಿರುವ ಆದೇಶವನ್ನು ನ್ಯಾಯಾಧೀಶ ಜಿ.ಬಿ.ಮುದಿಗೌಡರ್ ಬರೆದಿಲ್ಲ. ಬದಲಿಗೆ ಬೇರೆ ಯಾರೋ ಬರೆದಿದ್ದಾರೆ’ ಎಂದು ಪ್ರಾಸಿಕ್ಯೂಷನ್ ಹೈಕೋರ್ಟ್‌ಗೆ ದೂರಿದೆ.
ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳನ್ನು ಅತ್ಯಾಚಾರ ಆರೋಪದಿಂದ ಮುಕ್ತಗೊಳಿಸಿರುವ ಸೆಷನ್ಸ್ ನ್ಯಾಯಾ ಲಯದ ಆದೇಶ ಪ್ರಶ್ನಿಸಿ ಪ್ರಾಸಿಕ್ಯೂಷನ್ ಮತ್ತು ಸಂತ್ರಸ್ತೆ ಸಲ್ಲಿಸಿರುವ ಕ್ರಿಮಿನಲ್ ಪುನರ್ ಪರಿಶೀಲನಾ ಅರ್ಜಿಗಳನ್ನು ನ್ಯಾಯಮೂರ್ತಿ ಕೆ.ಸೋಮಶೇಖರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ರಾಜ್ಯ ಪ್ರಾಸಿಕ್ಯೂಟರ್ ವಿ.ಎಂ. ಶೀಲವಂತ ಅವರು, ‘ಸ್ವಾಮೀಜಿಗಳನ್ನು ಆರೋಪ ದಿಂದ ಕೈಬಿಟ್ಟಿರುವ ಆದೇಶ ನೀಡಿ ರುವ ಸೆಷನ್ಸ್ ನ್ಯಾಯಾಧೀಶ ಜಿ.ಬಿ.ಮುದಿಗೌಡರ್ ಅವರು ಸ್ವತಃ ಆದೇಶ ಬರೆದಿಲ್ಲ. ಬೇರೆ ಯಾರೋ ಬರೆದಿದ್ದಾರೆ’ ಎಂದು ಆಕ್ಷೇಪಿಸಿದರು.
‘ಇಂಗ್ಲಿಷ್‌ನಲ್ಲಿ ಬರೆದಿರುವ ಈ ಆದೇಶ 117 ಪುಟ ಗಳಲ್ಲಿದೆ. ಅದ ರಲ್ಲಿ ನ್ಯಾಯಾಧೀಶರು ತಮ್ಮನ್ನು 12ಕ್ಕೂ ಹೆಚ್ಚು ಕಡೆ we ಎಂದು ಸಂಬೋಧಿಸಿ
ಕೊಂಡಿದ್ದಾರೆ. ಇದರರ್ಥ ಆದೇಶವನ್ನು ಒಬ್ಬರಿಗಿಂತ ಹೆಚ್ಚು ಜನರು ಬರೆದಿರುವ ಅನುಮಾನವಿದೆ. ಆದ್ದರಿಂದ, ಇದೊಂದು ತಾಂತ್ರಿಕ ದೋಷಗಳಿಂದ ಕೂಡಿದ ಆದೇಶವಾಗಿದ್ದು ಅಧೀನ ನ್ಯಾಯಾಲಯಕ್ಕೆ ವಾಪಸು ಕಳುಹಿಸಬೇಕು’ ಎಂದರು.
ಇದಕ್ಕೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ ರಾಘವೇಶ್ವರ ಭಾರತೀ ಶ್ರೀಗಳ ಪರ ವಕೀಲ ಪಿ.ಎನ್.ಮನಮೋಹನ್ ಅವರು, ‘ಇಂಗ್ಲಿಷ್ ಪದ we ಒಂದನ್ನೇ ಆಧಾರವಾಗಿ ಇಟ್ಟುಕೊಂಡು ಈ ಆದೇಶವನ್ನು ನ್ಯಾಯಾಧೀಶ ಮುದಿಗೌಡರ್ ಬರೆದಿಲ್ಲ ಎಂದು ವಾದ ಮಂಡಿಸುವುದು ಹಾಸ್ಯಾಸ್ಪದ ಎನಿಸುತ್ತದೆ’ ಎಂದರು.
‘ಹಳ್ಳಿಯಲ್ಲಿ ಮಾತೃಭಾಷೆ ಕನ್ನಡದಲ್ಲಿ ಕಲಿತವರ ಇಂಗ್ಲಿಷ್ ಕೆಲವೊಮ್ಮೆ ತಪ್ಪಾಗಬಹುದು. ನಗರ ಮಟ್ಟದಲ್ಲಿ ಓದಿದವರ ಭಾಷಾ ಗುಣಮಟ್ಟ ಹಳ್ಳಿ ಯಲ್ಲಿ ಓದಿದವರ ಭಾಷಾ ಸಂಪತ್ತಿನಲ್ಲಿ ಇಲ್ಲದಿರಬಹುದು. ಕೇವಲ we ಶಬ್ದದ ಆಧಾರದಲ್ಲಿ ಆದೇಶವನ್ನು ಮುದಿಗೌಡರ್ ಅವರು ಬರೆದಿಲ್ಲ ಎಂದು ಹೇಳುವುದು ಸಮಂಜಸವಲ್ಲ’ ಎಂದು ಸಮರ್ಥಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.