ADVERTISEMENT

ಗರಿಷ್ಠ ಸಂಖ್ಯೆಯಲ್ಲಿ ಅಂಗಾಂಗ, ಅಂಗಾಂಶ ದಾನ: ಸಾವಿನಲ್ಲೂ ಸಾರ್ಥಕತೆ ಕಂಡ 151 ಜೀವ

ವರುಣ ಹೆಗಡೆ
Published 14 ಜನವರಿ 2023, 19:45 IST
Last Updated 14 ಜನವರಿ 2023, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಸ್ತೆ ಅಪಘಾತ ಸೇರಿ ವಿವಿಧ ಸಂದರ್ಭಗಳಲ್ಲಿ ಗಂಭೀರ ಗಾಯಗೊಂಡು, ಮಿದುಳು ನಿಷ್ಕ್ರಿಯಗೊಂಡವರಲ್ಲಿ ಕಳೆದ ವರ್ಷ 151 ಮಂದಿ ಅಂಗಾಂಗಗಳನ್ನು ದಾನ ಮಾಡಿದ್ದಾರೆ. ಅವರಿಂದ 403 ಅಂಗಾಂಗಗಳು ಹಾಗೂ 348 ಅಂಗಾಂಶಗಳನ್ನು ಸಂಗ್ರಹಿಸಲಾಗಿದೆ.

ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (ಸೊಟ್ಟೊ), ಅಂಗಾಂಗ ಹಾಗೂ ಅಂಗಾಂಶವನ್ನು ಸಂಗ್ರಹಿಸಿ, ಅಂಗಾಂಗ ವೈಫಲ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಕಸಿ ಮಾಡಿಸಲು ನೆರವಾಗುತ್ತಿದೆ. ಈ ಸಂಸ್ಥೆಯಡಿ ಕಳೆದ ವರ್ಷ ಗರಿಷ್ಠ ಸಂಖ್ಯೆಯಲ್ಲಿ ಅಂಗಾಂಗ ದಾನ ನಡೆದಿದೆ.

2019ರಲ್ಲಿ 105 ಮಂದಿ ಅಂಗಾಂಗ ದಾನ ಮಾಡಿದ್ದು, 296 ಅಂಗಾಂಗಗಳು ಹಾಗೂ 197 ಅಂಗಾಂಶಗಳನ್ನು ಸಂಗ್ರಹಿಸಲಾಗಿತ್ತು. ಬಳಿಕ ಕೋವಿಡ್ ಕಾಣಿಸಿಕೊಂಡಿದ್ದರಿಂದ ಅಂಗಾಂಗ ದಾನಕ್ಕೆ ಸಮಸ್ಯೆಯಾಗಿತ್ತು. 2020ರಲ್ಲಿ 35 ಮಂದಿ ಮಾತ್ರ ಅಂಗಾಂಗ ದಾನ ಮಾಡಿದ್ದರು. 2022ರ ಮಾರ್ಚ್ ಬಳಿಕ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖ ಆದದ್ದರಿಂದ, ಅಂಗಾಂಗ ದಾನ ಪ್ರಮಾಣ ಏರಿಕೆ ಕಂಡಿದೆ.

ADVERTISEMENT

2022ರ ಜನವರಿ ತಿಂಗಳಲ್ಲಿ 7 ದಾನಿಗಳಿಂದ 21 ಅಂಗಾಂಗಗಳು ಹಾಗೂ 12 ಅಂಗಾಂಶಗಳನ್ನು ಸಂಗ್ರಹಿಸಿದರೆ, ಅಕ್ಟೋಬರ್ ತಿಂಗಳಲ್ಲಿ 20 ದಾನಿಗಳಿಂದ 57 ಅಂಗಾಂಗಗಳು ಹಾಗೂ 53 ಅಂಗಾಂಶಗಳನ್ನು ಸಂಗ್ರಹಿಸಲಾಗಿದೆ. ಈವರೆಗೆ ತಿಂಗಳೊಂದರಲ್ಲಿ ಸಂಗ್ರಹಿಸಿದ ಗರಿಷ್ಠ ಅಂಗಾಂಗ ಹಾಗೂ ಅಂಗಾಂಶಗಳು ಇವಾಗಿವೆ. ಹೆಚ್ಚಿನವರು ಮೂತ್ರಪಿಂಡಗಳು ಹಾಗೂ ಕಣ್ಣುಗಳನ್ನು ದಾನ ಮಾಡಿದ್ದಾರೆ.

16 ವರ್ಷಗಳಲ್ಲಿ 755 ಮಂದಿ ದಾನ: ಈ ಮೊದಲು ಜೀವಸಾರ್ಥಕತೆ ಹೆಸರಿನಿಂದ ನೋಂದಾಯಿಸಲಾಗಿದ್ದ ಸೊಟ್ಟೊ, ಅಂಗಾಂಗ ದಾನಕ್ಕೆ ಉತ್ತೇಜನ ನೀಡುವುದು ಹಾಗೂ ಮೃತ ದಾನಿಗಳಿಂದ ಅಂಗಾಂಗ ಒದಗಿಸುವ ಕಾರ್ಯವನ್ನು ಮಾಡುತ್ತಿದೆ. ಮಿದುಳು ನಿಷ್ಕ್ರಿಯಗೊಂಡ ಬಳಿಕ ಕುಟುಂಬ ಸದಸ್ಯರ ಒಪ್ಪಿಗೆ ಮೇರೆಗೆ ಅಂಗಾಂಗವನ್ನು ದಾನವಾಗಿ ಪಡೆಯಲಾಗುತ್ತದೆ. 2007ರಿಂದ 2022ರ ಅವಧಿಯಲ್ಲಿ 755 ಮಂದಿ ಅಂಗಾಂಗ ದಾನ ಮಾಡಿದ್ದಾರೆ. ಇಷ್ಟು ಮಂದಿಯಿಂದ 2,035 ಅಂಗಾಂಗಗಳು ಹಾಗೂ 1,552 ಅಂಗಾಂಶಗಳನ್ನು ಸಂಗ್ರಹಿಸಲಾಗಿದೆ.

‘ಮಾನವ ಅಂಗಾಂಗ ದಾನ ಕಸಿ ಕಾಯ್ದೆ 1994 ಅಂಗಾಂಗ ದಾನಕ್ಕೆ ಉತ್ತೇಜನ ನೀಡುತ್ತಿದೆ. ಮಿದುಳು ನಿಷ್ಕ್ರಿಯಗೊಂಡ ಯಾವುದೇ ವ್ಯಕ್ತಿ ಅಂಗಾಂಗಗಳನ್ನು ದಾನ ಮಾಡಬಹುದಾಗಿದೆ. ಹೃದಯ, ಮೂತ್ರಪಿಂಡ, ಶ್ವಾಸಕೋಶ ಸೇರಿ ವಿವಿಧ ಅಂಗಾಂಗಗಳಿಂದ ಐವರಿಗೆ, ಹೃದಯದ ಕವಾಟ, ಚರ್ಮ, ಕಣ್ಣು ಗುಡ್ಡೆ ಸೇರಿ ವಿವಿಧ ಅಂಗಾಂಶಗಳ ನೆರವಿನಿಂದ 50 ಮಂದಿಗೆ ನೆರವಾಗಬಹುದು’ ಎಂದು ಸೊಟ್ಟೊ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದರು.

ಮೂತ್ರಪಿಂಡಕ್ಕೆ ಬೇಡಿಕೆ
ಅಂತಿಮ ಹಂತದ ಅಂಗಾಂಗ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸೊಟ್ಟೊ ಸಂಸ್ಥೆ ನೆರವಾಗುತ್ತಿದೆ. ಸಂಸ್ಥೆಯಡಿ ಮೂತ್ರ
ಪಿಂಡಕ್ಕಾಗಿ 4,601 ಮಂದಿ, ಯಕೃತ್ತಿಗಾಗಿ 1,267 ಮಂದಿ, ಹೃದಯಕ್ಕಾಗಿ 114 ಮಂದಿ ಹಾಗೂ ಶ್ವಾಸಕೋಶಕ್ಕಾಗಿ 46 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದ್ಯತೆ ಅನುಸಾರ ಸಂಸ್ಥೆಯು ಅಂಗಾಂಗಗಳನ್ನು ಒದಗಿಸುತ್ತಿದೆ. ಕಳೆದ 16 ವರ್ಷಗಳಲ್ಲಿ 1,129 ಮೂತ್ರಪಿಂಡ ಹಾಗೂ 1,184 ಕಣ್ಣುಗಳನ್ನು ಸಂಗ್ರಹಿಸಿ, ನೋಂದಾಯಿತರಿಗೆ ಒದಗಿಸಲಾಗಿದೆ.

*
ಅಂಗಾಂಗ ದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ಆಸ್ಪತ್ರೆಗಳಲ್ಲಿಯೂ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಇದರಿಂದ ಅಂಗಾಂಗ ದಾನ ಹೆಚ್ಚಳವಾಗುತ್ತಿದೆ.
-ಡಾ.ಸಿ.ಎನ್. ಮಂಜುನಾಥ್, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.