ADVERTISEMENT

ಅಂಗಾಂಗ ದಾನ: ‘ಖಾಸಗಿ’ ಮನವಿಗೆ ಸ್ಪಂದನ

ನಗರದ ಖಾಸಗಿ ಆಸ್ಪತ್ರೆಗಳಲ್ಲಿನ ವೈದ್ಯರಿಂದ ಕುಟುಂಬಸ್ಥರಿಗೆ ಮನವರಿಕೆ

ವರುಣ ಹೆಗಡೆ
Published 5 ಸೆಪ್ಟೆಂಬರ್ 2024, 23:31 IST
Last Updated 5 ಸೆಪ್ಟೆಂಬರ್ 2024, 23:31 IST
   

ಬೆಂಗಳೂರು: ಮಿದುಳು ನಿಷ್ಕ್ರಿಯಗೊಂಡವರ ಅಂಗಾಂಗ ದಾನಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರಿಗೆ ಮನವರಿಕೆ ಮಾಡಿಸುವಲ್ಲಿ ನಗರದ ಖಾಸಗಿ ಆಸ್ಪತ್ರೆಗಳು ಯಶಸ್ವಿಯಾಗುತ್ತಿದ್ದು, ಈ ವರ್ಷ ರಾಜ್ಯದಲ್ಲಿ ಅಂಗಾಂಗ ದಾನ ಮಾಡಿದ 105 ಮಂದಿಯಲ್ಲಿ 77 ಮಂದಿಯ ಅಂಗಾಂಗಗಳನ್ನು ನಗರದ ಖಾಸಗಿ ಆಸ್ಪತ್ರೆಗಳಲ್ಲಿಯೇ ಸಂಗ್ರಹಿಸಲಾಗಿದೆ.

ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯು (ಸೊಟ್ಟೊ) ಅಂಗಾಂಗ ಹಾಗೂ ಅಂಗಾಂಶವನ್ನು ಸಂಗ್ರಹಿಸಿ, ಅಂಗಾಂಗ ವೈಫಲ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಕಸಿ ಮಾಡಿಸಲು ನೆರವಾಗುತ್ತಿದೆ. ರಸ್ತೆ ಅಪಘಾತ ಸೇರಿ ವಿವಿಧ ಸಂದರ್ಭಗಳಲ್ಲಿ ಗಂಭೀರವಾಗಿ ಗಾಯಗೊಂಡು, ಮಿದುಳು ನಿಷ್ಕ್ರಿಯಗೊಂಡವರ ಅಂಗಾಂಗಗಳನ್ನು ದಾನವಾಗಿ ಪಡೆದು, ಅಂಗಾಂಗ ವೈಫಲ್ಯಕ್ಕೆ ಒಳಗಾದವರಿಗೆ ಕಸಿ ಮಾಡಲಾಗುತ್ತಿದೆ. ದಾನಿಗಳ ಕೊರತೆಯಿಂದ ರಾಜ್ಯದಲ್ಲಿ ಎಂಟು ಸಾವಿರಕ್ಕೂ ಅಧಿಕ ಮಂದಿ ಅಂಗಾಂಗಗಳಿಗಾಗಿ ಎದುರು ನೋಡುತ್ತಿದ್ದಾರೆ.

ಅಂಗಾಂಗ ದಾನದ ಬಗ್ಗೆ ಆರೋಗ್ಯ ಇಲಾಖೆಯು ಜಾಗೃತಿ ಮೂಡಿಸುತ್ತಿದ್ದರೂ ಜನರಲ್ಲಿನ ಅರಿವಿನ ಕೊರತೆಯಿಂದಾಗಿ ಅಂಗಾಂಗ ದಾನ ಪ್ರಕ್ರಿಯೆಗೆ ಹಿನ್ನಡೆಯಾಗಿದೆ. ಅಂಗಾಂಗ ವೈಫಲ್ಯಕ್ಕೆ ಒಳಗಾದವರಿಗೆ ಸಮಯಕ್ಕೆ ಸರಿಯಾಗಿ ಕಸಿ ಮಾಡದಿದ್ದಲ್ಲಿ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಆದ್ದರಿಂದ ಇಲ್ಲಿನ ಆಸ್ಪತ್ರೆಗಳ ವೈದ್ಯರೂ ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಕುಟುಂಬಸ್ಥರಿಗೆ ಅಂಗಾಂಗ ದಾನದ ಮಹತ್ವದ ಬಗ್ಗೆ ತಿಳಿಸಿ, ಸಂಗ್ರಹಿಸಲಾದ ಅಂಗಾಂಗಗಳನ್ನು ‘ಸೊಟ್ಟೊ’ ಅಡಿ ಹೆಸರು ನೋಂದಾಯಿಸಿಕೊಂಡವರಿಗೆ ಕಸಿ ಮಾಡಿಸುತ್ತಿದ್ದಾರೆ.

ADVERTISEMENT

ಹಲವರಿಗೆ ನೆರವು: ಈ ಮೊದಲು ಜೀವಸಾರ್ಥಕತೆ ಹೆಸರಿನಿಂದ ನೋಂದಾಯಿಸಲಾಗಿದ್ದ ‘ಸೊಟ್ಟೊ’ ಪ್ರಕಾರ, ಈ ವರ್ಷ ಇಲ್ಲಿನ ಆಸ್ಟರ್ ಆರ್‌ವಿ ಆಸ್ಪತ್ರೆಯಲ್ಲಿ ಗರಿಷ್ಠ (24) ಮಂದಿಯಿಂದ ಅಂಗಾಂಗಗಳನ್ನು ಸಂಗ್ರಹಿಸಲಾಗಿದೆ. ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ 11 ಮಂದಿ, ಸ್ಪರ್ಶ್‌ ಆಸ್ಪತ್ರೆಯಲ್ಲಿ 10 ಮಂದಿ, ನಾರಾಯಣ ಹೃದಯಾಲಯದಲ್ಲಿ ಐವರು, ಕಾವೇರಿ ಆಸ್ಪತ್ರೆಯಲ್ಲಿ ನಾಲ್ವರಿಂದ ಅಂಗಾಂಗಗಳನ್ನು ಪಡೆಯಲಾಗಿದೆ. ಬ್ಯಾಪ್ಟಿಸ್, ಮಣಿಪಾಲ್ ಸೇರಿ ನಗರದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿಯೂ ದಾನಿಗಳಿಂದ ಅಂಗಾಂಗ ಸಂಗ್ರಹಿಸಿ, ಅಂಗಾಂಗ ವೈಫಲ್ಯಕ್ಕೆ ಒಳಗಾದವರಿಗೆ ಕಸಿ ಮಾಡಲಾಗಿದೆ. ಒಟ್ಟು 105 ದಾನಿಗಳಿಂದ 301 ಅಂಗಾಂಗ ಹಾಗೂ 526 ಅಂಗಾಂಶಗಳನ್ನು ಸಂಗ್ರಹಿಸಲಾಗಿದೆ. 

‘ವ್ಯಕ್ತಿಯ ಮಿದುಳು ನಿಷ್ಕ್ರಿಯಗೊಂಡ ಬಳಿಕ ಕುಟುಂಬದ ಸದಸ್ಯರ ಒಪ್ಪಿಗೆ ಮೇರೆಗೆ ಅಂಗಾಂಗಗಳನ್ನು ದಾನವಾಗಿ ಪಡೆಯಲಾಗುತ್ತಿದೆ. ದಾನಿಗಳ ಕೊರತೆಯಿಂದಾಗಿ ಅಂಗಾಂಗ ಕಸಿಗೆ ಕಾಯುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ರಸ್ತೆ ಅಪಘಾತ ಸೇರಿ ವಿವಿಧ ಸಂದರ್ಭಗಳಲ್ಲಿ ಗಂಭೀರವಾಗಿ ಗಾಯಗೊಂಡು, ಮಿದುಳು ನಿಷ್ಕ್ರಿಯಗೊಂಡವರ ಕುಟುಂಬಸ್ಥರಿಗೆ ಅಂಗಾಂಗ ದಾನದ ಬಗ್ಗೆ ಮನವರಿಕೆ ಮಾಡಿಸಲಾಗುತ್ತಿದೆ’ ಎಂದು ಸ್ಪರ್ಶ್‌ ಆಸ್ಪ‍ತ್ರೆಯ ಕಸಿ ಸಲಹೆಗಾರ ಡಾ. ಗೌತಮ್ ಕುಮಾರ್ ತಿಳಿಸಿದರು.

ಮೂತ್ರಪಿಂಡಕ್ಕೆ ಹೆಚ್ಚಿನ ಬೇಡಿಕೆ

‘ಸೊಟ್ಟೊ’ ಸಂಸ್ಥೆಯಡಿ ಅಂಗಾಂಗಕ್ಕಾಗಿ ನೋಂದಾಯಿಸುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಸಂಸ್ಥೆಯಡಿ ಮೂತ್ರಪಿಂಡಕ್ಕಾಗಿ 5945 ಮಂದಿ ನೋಂದಾಯಿಸಿಕೊಂಡು ಕಾಯುತ್ತಿದ್ದಾರೆ. ಯಕೃತ್ತಿಗಾಗಿ 2198 ಹೃದಯಕ್ಕಾಗಿ 190 ಶ್ವಾಸಕೋಶಕ್ಕಾಗಿ 79 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದ್ಯತೆ ಅನುಸಾರ ಸಂಸ್ಥೆಯು ಅಂಗಾಂಗಗಳನ್ನು ಒದಗಿಸುತ್ತಿದೆ.

–––

ಒಬ್ಬ ವ್ಯಕ್ತಿಯು ಅಂಗಾಂಗ ದಾನದ ಮೂಲಕ ಎಂಟು ಮಂದಿಯ ಜೀವ ಉಳಿಸಲು ಸಾಧ್ಯ. ಅಂಗಾಂಗ ದಾನ ಹೆಚ್ಚಿಸಲು ದಾನಿಗಳ ಕುಟುಂಬಸ್ಥರಿಗೆ ಸನ್ಮಾನ ಸೇರಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

– ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.