ADVERTISEMENT

ಹೋರಾಟ ಯಾರ ವಿರುದ್ಧವೂ ಅಲ್ಲ: ನಿರಂಜನಾನಂದಪುರಿ ಸ್ವಾಮೀಜಿ

ಆರ್‌ಎಸ್‌ಎಸ್‌ ಕೈವಾಡ ನಿರಾಕರಿಸಿದ ಸಚಿವ ಕೆ.ಎಸ್‌. ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 16:22 IST
Last Updated 7 ಫೆಬ್ರುವರಿ 2021, 16:22 IST
   

ಬೆಂಗಳೂರು: ‘ಕುರುಬರನ್ನು ಪರಿಶಿಷ್ಟ ಪಂಗಡಗಳ (ಎಸ್‌.ಟಿ) ಪಟ್ಟಿಗೆ ಸೇರಿಸಬೇಕೆಂಬ ಹೋರಾಟ ಯಾವ ವ್ಯಕ್ತಿ ಅಥವಾ ಪಕ್ಷದ ವಿರುದ್ಧವೂ ಅಲ್ಲ. ಇದು ಯಾವ ಪಕ್ಷ ಅಥವಾ ವ್ಯಕ್ತಿಯ ಪರವಾದ ಹೋರಾಟವೂ ಅಲ್ಲ’ ಎಂದು ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

ಬಿಐಇಸಿ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ‘ನಾನು ಇಲ್ಲಿ ನಿಮಿತ್ತ ಮಾತ್ರ. ಕುರುಬ ಸಮುದಾಯದ ಪ್ರತಿ ವ್ಯಕ್ತಿಯೂ ಬೀದಿಗೆ ಬಂದಿದ್ದಾನೆ. ಹೋರಾಟದ ಹಿಂದೆ ಯಾವ ರಾಜಕಾರಣವೂ ಇಲ್ಲ. ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಪರಿಶಿಷ್ಟ ಪಂಗಡಗಳ ಮೀಸಲಾತಿ ಸೌಲಭ್ಯ ದೊರೆಯಬೇಕು. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಔದ್ಯೋಗಿಕವಾಗಿ ಸಮುದಾಯಕ್ಕೆ ಶಕ್ತಿ ಬರಬೇಕು ಎಂಬುದೇ ಹೋರಾಟದ ಹಿಂದಿರುವ ಆಶಯ’ ಎಂದರು.

‘21 ದಿನಗಳ ಅವಧಿಯ ಪಾದಯಾತ್ರೆ ಆರಂಭಿಸುವಾಗ ಜನಬೆಂಬಲದ ಕುರಿತು ಅಳುಕು ಇತ್ತು. ಆದರೆ, ಹೋರಾಟದ ಹಾದಿಯಲ್ಲಿ ಕಂಡ ಬೆಂಬಲ ಕಂಡು ಮೂಕವಿಸ್ಮಿತನಾಗಿದ್ದೇನೆ. ಹಾಲುಮತ ಸಮಾಜದ ಅನೇಕ ಮಠಾಧೀಶರು ಆರಂಭದಿಂದ ಕೊನೆಯವರೆಗೆ ನಮ್ಮೊಡನೆ ಹೆಜ್ಜೆ ಹಾಕಿದರು. ಅನೇಕ ಹೆಣ್ಣುಮಕ್ಕಳು ಕಷ್ಟ ಲೆಕ್ಕಿಸದೆ ನಡೆದರು. ನಡೆಯುವಾಗ ನೋವು ಇರುತ್ತಿತ್ತು. ಆದರೆ, ಜನಬೆಂಬಲ ನೋಡಿದಾಗ ಎಲ್ಲವೂ ಮರೆಯಾಯಿತು’ ಎಂದು ಅನುಭವ ಹಂಚಿಕೊಂಡರು.

ADVERTISEMENT

ಆರೋಪದ ಕುರಿತು ಅಸಮಾಧಾನ

ಸಚಿವ ಕೆ.ಎಸ್‌. ಈಶ್ವರಪ್ಪ ಮಾತನಾಡಿ, ‘ನಿರಂಜನಾನಂದ ಪುರಿ ಸ್ವಾಮೀಜಿ ನಮ್ಮ ಸಮುದಾಯದ ಪಾಲಿನ ಕೃಷ್ಣನಿದ್ದಂತೆ. ಸಮುದಾಯದ ಕಡುಬಡವರಿಂದ ಕೂಡ ದೇಣಿಗೆ ಪಡೆದು ಈ ಹೋರಾಟ ಮುನ್ನಡೆಸುತ್ತಿದ್ದಾರೆ. ಆದರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಕುರುಬರ ಎಸ್‌.ಟಿ ಹೋರಾಟದ ಹಿಂದಿದೆ, ಹಣವನ್ನೂ ನೀಡಿದೆ ಎಂದು ಕೆಲವರು ಆರೋಪಿಸಿದ್ದಾರೆ. ಸಮುದಾಯಕ್ಕೆ ಮಾರ್ಗದರ್ಶನ ನೀಡುತ್ತಿರುವ ಸ್ವಾಮೀಜಿ ಬಗ್ಗೆ ಆರೋಪ ಮಾಡುತ್ತಿರುವುದು ನೋವಿನ ಸಂಗತಿ’ ಎಂದರು.

ಅನ್ಯಾಯದ ವಿರುದ್ಧ ಹೋರಾಟ

ಕುರುಬರ ಎಸ್‌.ಟಿ ಹೋರಾಟ ಸಮಿತಿ ಅಧ್ಯಕ್ಷ ಕೆ. ವಿರುಪಾಕ್ಷಪ್ಪ ಮಾತನಾಡಿ, ‘ಯಾರ ವಿರುದ್ಧ ಈ ಹೋರಾಟ ಎಂದು ಕೆಲವರು ಪ್ರಶ್ನೆ ಎತ್ತಿದ್ದಾರೆ. ಕುರುಬರು ಪರಿಶಿಷ್ಟ ಪಂಗಡಕ್ಕೆ ಸೇರುತ್ತಾರೆ ಎಂದು ಬ್ರಿಟಿಷರೇ ಗುರುತಿಸಿ ದ್ದರು. ನಂತರ ಬದಲಾಯಿತು. ಯಾರಿಂದ ಅನ್ಯಾಯವಾಗಿದೆಯೋ ಅವರ ವಿರುದ್ಧ ನಮ್ಮ ಹೋರಾಟ’ ಎಂದು ಹೇಳಿದರು.

ಕಾಡು ಕುರುಬ, ಜೇನು ಕುರುಬ, ಗೊಂಡ, ಕುರುಬ ಸಮುದಾಯಗಳೆಲ್ಲವೂ ಒಂದೇ. ಅದರ ಆಧಾರದಲ್ಲೇ ನ್ಯಾಯ ಕೇಳಲಾಗುತ್ತಿದೆ. ಈ ವಿಚಾರದಲ್ಲಿ ಮತ್ತೆ ಕುಲಶಾಸ್ತ್ರೀಯ ಅಧ್ಯಯನದ ಅಗತ್ಯವೇ ಇಲ್ಲ. ಎಸ್‌.ಟಿ ಮೀಸಲಾತಿ ಪಡೆಯುವ ವಿಷಯ
ದಲ್ಲಿ ಕುರುಬರು ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ ಎಂದು ಹೇಳಿದರು.

ಕುರುಬ ಎಸ್‌.ಟಿ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಕೆ. ಮುಕುಡಪ್ಪ, ಖಜಾಂಚಿ ಕೆ.ಇ. ಕಾಂತೇಶ್‌, ಮಹಾರಾಷ್ಟ್ರದ ರಾಜ್ಯಸಭಾ ಸದಸ್ಯ ಡಾ.ವಿಕಾಸ್ ಮಹಾತ್ಮೆ, ಮಾಜಿ ಸಂಸದ ಮಹಾದೇವ್ ಜಾನ್ಕರ್, ಆಂಧ್ರಪ್ರದೇಶದ ಹಿಂದೂಪುರ ಕ್ಷೇತ್ರದ ಸಂಸದ ಗೋರಂಟ್ಲ
ಮಾಧವ್‌ ಸೇರಿದಂತೆ ಹಲವರು ಮಾತನಾಡಿದರು. ಸಿದ್ದರಾಮಾನಂದಪುರಿ ಸ್ವಾಮೀಜಿ, ವಿಧಾನ ಪರಿಷತ್‌ ಸದಸ್ಯ ರಘುನಾಥ ರಾವ್‌ ಮಲ್ಕಾಪುರೆ, ಮಾಜಿ ಸದಸ್ಯ ಹುಲಿನಾಯ್ಕರ್‌ ಸೇರಿದಂತೆ ಕುರುಬ ಸಮುದಾಯದ ಪ್ರಮುಖ ಮುಖಂಡರು ವೇದಿಕೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.