ಮೈಸೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ 17 ಮಂದಿಯ ಫೋನ್ ಕರೆಗಳು ಕದ್ದಾಲಿಕೆ ಆಗಿದ್ದು, ಸಮಗ್ರ ತನಿಖೆ ನಡೆಸಬೇಕೆಂದು ಮಾಜಿ ಸಚಿವ ಎಚ್.ವಿಶ್ವನಾಥ್ ಆಗ್ರಹಿಸಿದರು.
‘ಹಿಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕಚೇರಿಯಿಂದಲೇ ನಮ್ಮ ಫೋನ್ ಕದ್ದಾಲಿಕೆ ಮಾಡಲು ಸೂಚನೆ ಹೋಗಿದೆ. ಇದೊಂದು ನೀಚ ಕೆಲಸ' ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
‘ರಾಜೀನಾಮೆ ನೀಡಿದ ನಮಗೆ ಕರೆ ಮಾಡಿ ನಿಮ್ಮ ದಾಖಲೆಗಳೆಲ್ಲ ಸಿಕ್ಕಿವೆ, ವಾಪಸ್ ಬನ್ನಿ ಎನ್ನುತ್ತಿದ್ದರು. ಮುಖ್ಯಮಂತ್ರಿ ಕಚೇರಿಯಿಂದ ಕರೆ ಬರುತ್ತಿತ್ತು. ಇದರ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರ ಕೂಡ ಇದರ ಬಗ್ಗೆ ಯೋಚನೆ ಮಾಡಬೇಕು,’ ಎಂದು ವಿನಂತಿಸಿದರು.
'ಹಿಂದಿನ ಗೃಹ ಸಚಿವರು, ಐಪಿಎಸ್ ಅಧಿಕಾರಿಗಳು ಸೇರಿದಂತೆ ಸುಮಾರು 300 ಮಂದಿಯ ಫೋನ್ ಕದ್ದಾಲಿಕೆ ಆಗಿದೆ. ಆರು ತಿಂಗಳಿಂದ ಈ ಕೆಲಸ ನಡೆಯುತ್ತಿದೆ' ಎಂದೂ ಅವರು ದೂರಿದರು.
ಸುದ್ದಿಗೋಷ್ಠಿಗೆ ಬಿಗಿ ಭದ್ರತೆ
ಸುದ್ದಿಗೋಷ್ಠಿ ವೇಳೆ ಗಲಾಟೆಯಾಗುವ ಸಾಧ್ಯತೆಯಿಂದ ಬಿಗಿ ಭದ್ರತೆ ಒದಗಿಸಲಾಗಿತ್ತು. ಒಂದು ತುಕಡಿ ಸಿಎಆರ್, ಕೆಎಸ್ಆರ್‌ಪಿ ಹಾಗೂ 20ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಕಳೆದ ಬಾರಿಯೂ ಸುದ್ದಿಗೋಷ್ಠಿ ವೇಳೆ ಬಿಗಿ ಭದ್ರತೆ ನೀಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.