ADVERTISEMENT

'ನಮ್ಮ ಭಿಕ್ಷೆಯಿಂದಲೇ ಮುಖ್ಯಮಂತ್ರಿಯಾದ ಯಡಿಯೂರಪ್ಪ ಮಾತಿಗೆ ತಪ್ಪಿದರು'

ಬಿಎಸ್‌ವೈ ವಿರುದ್ಧ ವಿಶ್ವನಾಥ್‌, ಸತೀಶ್‌ ರೆಡ್ಡಿ ಕಿಡಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 14:02 IST
Last Updated 13 ಜನವರಿ 2021, 14:02 IST
ಎಚ್‌.ವಿಶ್ವನಾಥ್‌
ಎಚ್‌.ವಿಶ್ವನಾಥ್‌   

ಬೆಂಗಳೂರು:ಸಂಪುಟ ವಿಸ್ತರಣೆಯ ಪಟ್ಟಿ ಹೊರಬೀಳುತ್ತಿದ್ದಂತೆ ಬಿಜೆಪಿಯಲ್ಲಿ ಆಕ್ರೋಶ ಭುಗಿಲೆದ್ದಿದೆ. ವಿಧಾನಪರಿಷತ್‌ ಎಚ್‌.ವಿಶ್ವನಾಥ್‌, ಶಾಸಕ ಸತೀಶ್‌ ರೆಡ್ಡಿ, ಬಳ್ಳಾರಿಯ ರೆಡ್ಡಿ ಸಹೋದರರು ಗರಂ ಆಗಿದ್ದಾರೆ. ಮುನಿರತ್ನ ಮುನಿಸಿಕೊಂಡು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.

ಮೈಸೂರಿನಿಂದ ಹೇಳಿಕೆ ನೀಡಿರುವ ವಿಶ್ವನಾಥ್‌, ‘ನಮ್ಮ ಭಿಕ್ಷೆಯಿಂದಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾತಿಗೆ ತಪ್ಪಿದ್ದಾರೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ನಲ್ಲಿ ನಾಯಕತ್ವದ ಬಗ್ಗೆ ಅಸಮಾಧಾನಗೊಂಡು ಬಂಡೆದ್ದು ಬಂದ ಎಲ್ಲ 17 ಮಂದಿಗೂ ಸಚಿವ ಸ್ಥಾನ ನೀಡುವುದು ಆದ್ಯತೆ ಆಗಿತ್ತು. ನಾವು ಬಂಡೇಳದಿದ್ದರೆ, ಬಿಜೆಪಿ ಸರ್ಕಾರ ರಚನೆ ಆಗಲು ಅವಕಾಶವೇ ಇರಲಿಲ್ಲ’ ಎಂದು ಕಿಡಿ ಕಾರಿದ್ದಾರೆ.

‘ನನ್ನನ್ನು ಬಿಟ್ಟು ಸೈನಿಕ (ಸಿ.ಪಿ.ಯೋಗೇಶ್ವರ್)ನಿಗೆ ಸಚಿವ ಸ್ಥಾನ ಕೊಡುವ ಅಗತ್ಯ ಏನಿತ್ತು. ಆತನೊಬ್ಬ ಫ್ರಾಡ್‌, ರಿಯಲ್‌ ಎಸ್ಟೇಟ್‌ನಲ್ಲಿ ಸಾವಿರಾರು ಜನರಿಗೆ ವಂಚಿಸಿರುವ ಪ್ರಕರಣ ಇದೆ. ಅಂತಹ ವ್ಯಕ್ತಿಗೆ ಕರೆದು ಮಂತ್ರಿ ಸ್ಥಾನ ಕೊಟ್ಟಿದ್ದಾರೆ ಎಂದರೆ ಬಲವಾದ ಕಾರಣ ಏನೋ ಇರಲೇಬೇಕು. ಬ್ಲಾಕ್‌ಮೇಲ್‌ ಏನಾದರೂ ಇರಬಹುದು’ ಎಂದು ವಿಶ್ವನಾಥ್‌ ಹೇಳಿದ್ದಾರೆ.

ADVERTISEMENT

ದಲಿತ ವರ್ಗಕ್ಕೆ ಸೇರಿದ ಎಚ್‌.ನಾಗೇಶ್ ಅವರನ್ನು ಕೈಬಿಡುವ ಅಗತ್ಯ ಏನಿತ್ತು. ಮಂತ್ರಿ ಸ್ಥಾನಕ್ಕೆ ತ್ಯಾಗ ಕೊಟ್ಟು ಬಂದ ವ್ಯಕ್ತಿ. ಆತನಿಂದ ರಾಜೀನಾಮೆ ಕೇಳುತ್ತಿರುವುದು ಅನ್ಯಾಯ. ಏಕೆ ಕಿತ್ತುಕೊಂಡಿದ್ದೀರಿ ಎಂಬುದನ್ನು ಹೇಳಬೇಕು ಎಂದಿದ್ದಾರೆ.

‘ನಿಮ್ಮ ನಾಲಿಗೆ ಯಾರು ಕಿತ್ತುಕೊಂಡು ಹೋಗಿದ್ದಾರೆ, ನಿಮ್ಮ ಮಗನಾ, ಇನ್ಯಾರಾದರೂ ಕಿತ್ತುಕೊಂಡರೋ. ಇವತ್ತು ಮಾತಿಗೆ ನಿಲ್ಲುವ ನಾಯಕ ಯಡಿಯೂರಪ್ಪ ಎನ್ನುವ ಮಾತು ಇವತ್ತು ಇಲ್ಲ. ನಾಶ ಆಗಿ ಹೋಯಿತು’ ಎಂದು ಗುಡುಗಿದರು.

‘ಬಿಜೆಪಿ ಬಗ್ಗೆ ಮಾತನಾಡಲ್ಲ. ಒಳ್ಳೆ ಪಕ್ಷವೇ ನಡೆಸುವ ನಾಯಕರು ಅವರ ವಿರುದ್ಧ ನಿಂತಿದ್ದು. ಕೆಲವು ನಾಯಕರು ಸರಿ ಇಲ್ಲ. ಎಲ್ಲರನ್ನೂ ಅಲ್ಲ. ಯಡಿಯೂರಪ್ಪ ನಂಬಿ ಬಂದವರು. ವಿಜಯೇಂದ್ರ ಮತ್ತು ಯಡಿಯೂರಪ್ಪ ಜತೆ ಮಾತುಕತೆ ಆಗಿದ್ದು. ಎಲ್ಲ ಪಕ್ಷಗಳ ನಾಯಕರೂ ಒಂದೇ ಕೃತಜ್ಞತೆ ಇಲ್ಲ ಕುಮಾರಸ್ವಾಮಿ, ಸಿದ್ದರಾಮಯ್ಯ, ಯಡಿಯೂರಪ್ಪ ಎಲ್ಲ ಒಂದೇ’ ಎಂದು ವಿಶ್ವನಾಥ್‌ ಅಸಮಾಧಾನ ವ್ಯಕ್ತಪಡಿಸಿದರು.

ಸತೀಶ್‌ ರೆಡ್ಡಿ ಬೆಳಿಗ್ಗೆಯೇ ಟ್ವೀಟ್‌ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.‘ಯಡಿಯೂರಪ್ಪನವರೇ ಮಂತ್ರಿ ಮಂಡಲ ವಿಸ್ತರಣೆಯಲ್ಲಿ ಸಚಿವ ಸ್ಥಾನದ ಆಯ್ಕೆ ಪ್ರಕ್ರಿಯೆಯ ಮಾನದಂಡವೇನು? ನಿಮಗೆ ನಮ್ಮ ರಾಜ್ಯ ಮತ್ತು ರಾಷ್ಟ್ರ ನಾಯಕರಿಗೆ ನಿಷ್ಠಾವಂತ ಯುವ ನಾಯಕರು ಕಾಣುವುದಿಲ್ಲವೇ? ನಮ್ಮ ಕಷ್ಟ ಆಲಿಸುತ್ತಿದ್ದ ಅನಂತಕುಮಾರ್‌ಜೀ ಇಲ್ಲದಿರುವುದು ಎದ್ದು ಕಾಣುತ್ತಿದೆ’ ಎಂದಿದ್ದಾರೆ.

ಬಳ್ಳಾರಿಯ ರೆಡ್ಡಿ ಸಹೋದರರಾದ ಸೋಮಶೇಖರ ರೆಡ್ಡಿ ಮತ್ತು ಕರುಣಾಕರ ರೆಡ್ಡಿ ಅವರು ಮುನಿಸಿಕೊಂಡು ಹೊಸಪೇಟೆಯಲ್ಲಿ ನಡೆದ ಜನಸೇವಕ ಸಮಾವೇಶ ಬಹಿಷ್ಕರಿಸಿದ್ದಾರೆ.

ಸಂಜೆ ವೇಳೆಗೆ ಇನ್ನಷ್ಟು ಜನ ಬೇಗುದಿಯನ್ನು ಹೊರ ಹಾಕುವ ಸಾಧ್ಯತೆ ಇದೆ. ಸಚಿವ ಸ್ಥಾನದ ಮೇಲೆ ಕಣ್ಣಿಟ್ಟವರು,ನಿರ್ಲಕ್ಷ್ಯಕ್ಕೆ ಒಳಗಾದವರ ಸಿಟ್ಟು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.