ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣದ ಕುರಿತು ಚರ್ಚೆಗೆ ಅವಕಾಶ ನೀಡದೇ ಇರುವುದನ್ನು ಪ್ರತಿಭಟಿಸಿ ವಿಧಾನಮಂಡಲದ ಉಭಯ ಸದನಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಬುಧವಾರ ಅಹೋರಾತ್ರಿ ಧರಣಿ ನಡೆಸಿದರು.
ಇತರ ಎಲ್ಲ ಕಲಾಪಗಳನ್ನು ಬದಿಗೊತ್ತಿ ಮುಡಾ ಹಗರಣವನ್ನು ಚರ್ಚೆಗೆ ಕೈಗೆತ್ತಿಕೊಳ್ಳಬೇಕು ಎಂದು ಉಭಯ ಸದನಗಳಲ್ಲೂ ಆಗ್ರಹಿಸಿದ ಬಿಜೆಪಿ, ನಿಲುವಳಿ ಸೂಚನೆ ಮಂಡಿಸಲು ಮುಂದಾಯಿತು. ವಿಧಾನಸಭೆಯಲ್ಲಿ ಸಭಾಧ್ಯಕ್ಷ ಯು.ಟಿ. ಖಾದರ್ ಮತ್ತು ವಿಧಾನಪರಿಷತ್ತಿನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಬೇಡಿಕೆಯನ್ನು ತಿರಸ್ಕರಿಸಿದರು. ಇದು ಉಭಯ ಸದನಗಳಲ್ಲಿ ಭಾರಿ ಗದ್ದಲಕ್ಕೆ ಕಾರಣವಾಯಿತು. ಪದೇ ಪದೇ ಕಲಾಪ ಮುಂದೂಡಿಕೆಯಾಯಿತು.
ನಿಲುವಳಿ ಸೂಚನೆಯನ್ನು ತಿರಸ್ಕರಿಸಿದ ಕ್ರಮವನ್ನು ಬಲವಾಗಿ ಸಮರ್ಥಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರೂಲಿಂಗ್ ಕೊಟ್ಟ ಮೇಲೆ ಅದನ್ನು ಪಾಲಿಸಬೇಕು ಎಂದು ವಿಪಕ್ಷ ಸದಸ್ಯರನ್ನು ಉದ್ದೇಶಿಸಿ ಹೇಳಿದರು. ನಿಲುವಳಿ ಸೂಚನೆ ಪ್ರಸ್ತಾವಕ್ಕೆ ಅವಕಾಶ ಕೊಡಿ ಎಂದು ಉಭಯ ಸದನಗಳಲ್ಲೂ ವಿರೋಧ ಪಕ್ಷದ ನಾಯಕರು ಪದೇ ಪದೇ ಮನವಿ ಮಾಡಿದರು. ಇಡೀ ದಿನ ಅದಕ್ಕೆ ಅವಕಾಶವನ್ನೇ ಕೊಡಲಿಲ್ಲ. ಇದನ್ನು ಪ್ರತಿಭಟಿಸಿದ ವಿಪಕ್ಷಗಳ ನಾಯಕರು, ಸಂಜೆ ಹೊತ್ತಿಗೆ ಅಹೋರಾತ್ರಿ ಧರಣಿ ನಡೆಸುವುದಾಗಿ ಘೋಷಿಸಿದರು. ಸಭಾಧ್ಯಕ್ಷ ಹಾಗೂ ಸಭಾಪತಿ ಪೀಠದ ಎದುರೇ ಧರಣಿ ನಡೆಸಿದರು.
ಘೋಷಣೆ, ಗದ್ದಲ
ವಿಧಾನಸಭೆಯಲ್ಲಿ ಬಿಜೆಪಿ– ಜೆಡಿಎಸ್ ಸದಸ್ಯರು ಘೋಷಣಾ ಫಲಕಗಳನ್ನು ಪ್ರದರ್ಶಿಸಿ, ಘೋಷಣೆಗಳನ್ನೂ ಕೂಗಿದರು. ‘ದೇಶಕಂಡ ಭ್ರಷ್ಟ ಸರ್ಕಾರ’, ‘ಸಿದ್ದರಾಮಯ್ಯ ಪತ್ನಿಗೆ 14 ಸೈಟು– ಬಡ ಮಹಿಳೆಗೆ ಖಾಲಿ ಸೌಟು’, ‘ಬಂಪರ್ ಲಾಟರಿ ₹ 4,000 ಕೋಟಿ ಲೂಟಿ’ ಇತ್ಯಾದಿ ಘೋಷಣೆಗಳನ್ನು ಕೂಗಿದರು. ಸಿದ್ದರಾಮಯ್ಯ ತಮ್ಮ ಆಸನದಲ್ಲಿ ಕುಳಿತು ಮೌನವಾಗಿ ಆಲಿಸುತ್ತಿದ್ದರು. ಯಾವುದೇ ಪ್ರತಿಕ್ರಿಯೆ ನೀಡದೇ, ಪೂರಕ ಅಂದಾಜಿಗೆ ಒಪ್ಪಿಗೆ ಪಡೆದರು. ಗದ್ದಲದ ಮಧ್ಯೆ ಒಟ್ಟು ಏಳು ಮಸೂದೆಗಳನ್ನು ಮಂಡಿಸಿ ಕೆಲವು ಮಸೂದೆಗಳಿಗೆ ಒಪ್ಪಿಗೆಯನ್ನೂ ಪಡೆಯಲಾಯಿತು.
ಬೆಳಿಗ್ಗೆ ಪ್ರಶ್ನೋತ್ತರ ಕಲಾಪಕ್ಕೂ ಮೊದಲೇ ನಿಲುವಳಿ ಸೂಚನೆ ಮಂಡಿಸಲು ವಿರೋಧ ಪಕ್ಷದ ನಾಯಕ ಆರ್. ಅಶೋಕ ಪಟ್ಟು ಹಿಡಿದರು. ಆದರೆ, ಪ್ರಶ್ನೋತ್ತರದ ಅವಧಿ ಮುಗಿಯದೆ ಈ ಬಗ್ಗೆ ತೀರ್ಮಾನಿಸುವುದಿಲ್ಲ ಎಂದು ಸಭಾಧ್ಯಕ್ಷ ಖಾದರ್ ಹೇಳಿದರು.
‘ಪ್ರಶ್ನೋತ್ತರ ಕಲಾಪ ರದ್ದುಮಾಡಿ ಈ ವಿಚಾರ ತೆಗೆದುಕೊಳ್ಳಿ’ ಎಂದು ಬಿಜೆಪಿಯ ವಿ. ಸುನಿಲ್ ಕುಮಾರ್ ಆಗ್ರಹಿಸಿದರು. ಆಗ ಸಭಾಧ್ಯಕ್ಷರು, ‘ಯಾಕೆ ಇಷ್ಟು ತುರ್ತು? ಇಷ್ಟು ದಿನ ಸುಮ್ಮನಿದ್ದೀರಿ. ಆಯೋಗದ (ಮುಡಾ ವಿಚಾರಣೆಗೆ ರಚಿಸಿದ ನ್ಯಾಯಾಂಗ ಆಯೋಗ) ಬಳಿ ಹೋಗಿ’ ಎಂದರು. ಅದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸುನಿಲ್ ಕುಮಾರ್, ‘ಪೀಠದಲ್ಲಿ ಕುಳಿತು ನೀವು ಈ ಮಾತು ಹೇಳುವುದು ಸರಿಯಲ್ಲ’ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದರು.
ಬಿಜೆಪಿಯ ಆರಗ ಜ್ಞಾನೇಂದ್ರ, ‘ನಗರಾಭಿವೃದ್ಧಿ ಸಚಿವರು ಮುಡಾ ಕಡತಗಳನ್ನು ಹೆಲಿಕಾಪ್ಟರ್‌ನಲ್ಲಿ ತುಂಬಿಕೊಂಡು ಬಂದಿದ್ದಾರೆ’ ಎಂದು ಆರೋಪಿಸಿದರು. ‘ಬಿಜೆಪಿಯವರು ಏನು ಮಾಡಿದ್ದಾರೆ, ಎಷ್ಟು ಎಕರೆ ಪಡೆದಿದ್ದಾರೆ ಎಂಬ ದಾಖಲೆ ಇದೆ. ನಮಗೂ ಅವಕಾಶ ಕೊಡಿ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಸಭಾಧ್ಯಕ್ಷರಿಗೆ ಮನವಿ ಮಾಡಿದರು. ಮಧ್ಯ ಪ್ರವೇಶಿಸಿದ ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ, ‘ಈ ಹಗರಣದಲ್ಲಿ ಎಲ್ಲರೂ ಪಾಲುದಾರರೆಂದು ಹೇಳುತ್ತಿದ್ದಾರೆ. ಮೂರು ಪಕ್ಷದವರದ್ದೂ ಹೊರಗೆ ಬರಲಿ’ ಎಂದು ಆಗ್ರಹಿಸಿದರು. ಗದ್ದಲದ ಮಧ್ಯೆಯೇ ಪ್ರಶ್ನೋತ್ತರ ಕಲಾಪ ಮುಗಿಯಿತು.
ಪ್ರಶ್ನೋತ್ತರ ಮುಗಿಯುತ್ತಿದ್ದಂತೆ ಮುಡಾ ಹಗರಣ ವಿಚಾರ ಪ್ರಸ್ತಾಪಿಸಲು ಅಶೋಕ ಮತ್ತೆ ಮುಂದಾದರು. ಆಗ ಕಾನೂನು ಸಚಿವ ಎಚ್.ಕೆ. ಪಾಟೀಲ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ವಿಧಾನಸಭೆ ಕಾರ್ಯವಿಧಾನ ನಡವಳಿಕೆಯ ಅನ್ವಯ, ನ್ಯಾಯಾಧೀಕರಣ ಅಥವಾ ಆಯೋಗ ಪ್ರಕರಣದ ವಿಚಾರಣೆ ನಡೆಸುವಾಗ ನಿಲುವಳಿ ಮಂಡಳಿಸಲು ಅವಕಾಶ ಇಲ್ಲ’ ಎಂದು ಪಾಟೀಲ ಹೇಳಿದರು.
ಮಧ್ಯಪ್ರವೇಶಿಸಿದ ಬಿಜೆಪಿಯ ಎಸ್. ಸುರೇಶ್ ಕುಮಾರ್, ‘ರಾಜ್ಯದ ಬಹಳ ಮುಖ್ಯವಾದ ವ್ಯಕ್ತಿಯನ್ನು ಕೇಂದ್ರೀಕರಿಸಿರುವ ಪ್ರಕರಣ. ಇದರ ಚರ್ಚೆಗೆ ಅವಕಾಶ ಕೊಡುವುದಿಲ್ಲವೆಂದರೆ ಹೇಗೆ’ ಎಂದು ಪ್ರಶ್ನಿಸಿದರು. ಈ ಹಂತದಲ್ಲಿ ಮಾತಿನ ಚಕಮಕಿ ನಡೆಯಿತು.
ಸಭಾಧ್ಯಕ್ಷರ ವಿರುದ್ಧ ಆಕ್ರೋಶ
ಭೋಜನ ವಿರಾಮದ ಬಳಿಕ ಬಿಜೆಪಿ– ಜೆಡಿಎಸ್ ಸದಸ್ಯರ ಆಕ್ರೋಶ ಸಭಾಧ್ಯಕ್ಷರ ಕಡೆ ತಿರುಗಿತು. ‘ಸಭಾಧ್ಯಕ್ಷರು ಆಡಳಿತ ಪಕ್ಷದ ಪಕ್ಷಪಾತಿಯಾಗಿ ವರ್ತಿಸುತ್ತಿದ್ದಾರೆ. ಈ ಮೂಲಕ ಮುಡಾ ಹಗರಣವನ್ನು ಮುಚ್ಚಿ ಹಾಕಲು ಸಹರಿಸುತ್ತಿದ್ದಾರೆ. ಸಭಾಧ್ಯಕ್ಷ ಪೀಠದ ಘನತೆಯನ್ನೂ ಎತ್ತಿ ಹಿಡಿಯುತ್ತಿಲ್ಲ. ಬೇಕಾಬಿಟ್ಟಿ ರೂಲಿಂಗ್ ಕೊಡುತ್ತಿದ್ದಾರೆ. ಅವರ ನಡವಳಿಕೆ ವಿರೋಧಿಸಿ ಧರಣಿ ಮಾಡುತ್ತೇವೆ’ ಎಂದು ಅಶೋಕ ಅವರ ನೇತೃತ್ವದಲ್ಲಿ ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ಆರಂಭಿಸಿದರು.
‘ಎರಡು ವರ್ಷಗಳ ಹಿಂದಿನ ಪ್ರಕರಣ. ಅದನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲಾಗಿದೆ. ಇಷ್ಟು ದಿನ ಸುಮ್ಮನಿದ್ದು ಈಗ ಏಕೆ ಪ್ರಸ್ತಾಪಿಸುತ್ತಿದ್ದೀರಿ’ ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ಪ್ರಶ್ನಿಸಿದರು. ಬಿಜೆಪಿ–ಕಾಂಗ್ರೆಸ್ ಸದಸ್ಯರ ಮಧ್ಯೆ ಪರಸ್ಪರ ವಾಗ್ವಾದ ನಡೆಯಿತು. ಅದರ ಮಧ್ಯೆಯೇ, ಮಸೂದೆಗಳು ಮತ್ತು ಗಮನಸೆಳೆಯುವ ಸೂಚನೆ ಮುಗಿಯುತ್ತಿದ್ದಂತೆ ಸಭಾಧ್ಯಕ್ಷರು ಕಲಾಪವನ್ನು ಗುರುವಾರಕ್ಕೆ ಮುಂದೂಡಿದರು.
19 ವರ್ಷಗಳ ಅಕ್ರಮಗಳ ವಿಚಾರಣೆ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 2006ರಿಂದ 2024ರ ಜುಲೈ 15ರವರೆಗೂ ನಡೆದಿರುವ ಭೂಸ್ವಾಧೀನ, ಬಡಾವಣೆಗಳ ನಿರ್ಮಾಣ, ನಿವೇಶನ ಹಂಚಿಕೆ, ಪರಿಹಾರ ವಿತರಣೆ ಮತ್ತು ಬದಲಿ ನಿವೇಶನಗಳ ಹಂಚಿಕೆ ಕುರಿತು ನಿವೃತ್ತ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ನೇತೃತ್ವದ ಆಯೋಗ ವಿಚಾರಣೆ ನಡೆಸಲಿದೆ.
ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ (ಎರಡು ಅವಧಿ), ಡಿ.ವಿ. ಸದಾನಂದ ಗೌಡ, ಜಗದೀಶ ಶೆಟ್ಟರ್, ಸಿದ್ದರಾಮಯ್ಯ (ಎರಡು ಅವಧಿ) ಮತ್ತು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಪ್ರಾಧಿಕಾರದಲ್ಲಿ ನಡೆದಿರಬಹುದಾದ ಅವ್ಯವಹಾರಗಳ ಕುರಿತು ವಿಚಾರಣೆ ನಡೆಸಿ, ವರದಿ ಸಲ್ಲಿಸುವ ಜವಾಬ್ದಾರಿಯನ್ನು ಆಯೋಗಕ್ಕೆ ವಹಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮುಡಾದಿಂದ ಬದಲಿ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಬಂದ ಕಾರಣದಿಂದ ವಿಚಾರಣಾ ಆಯೋಗ ನೇಮಿಸಿ ಜುಲೈ 14ರಂದು ಆದೇಶ ಹೊರಡಿಸಲಾಗಿತ್ತು. ಆಯೋಗದ ಕಾರ್ಯವ್ಯಾಪ್ತಿ ಮತ್ತು ಷರತ್ತುಗಳನ್ನು ಸ್ಪಷ್ಟಪಡಿಸಿ ಗೃಹ ಇಲಾಖೆ ಬುಧವಾರ ಅಧಿಸೂಚನೆ ಹೊರಡಿಸಿದೆ.
ತಪ್ಪಿತಸ್ಥರಿಗೆ ಶಿಕ್ಷೆ ಆಗುವವರೆಗೆ ಹೋರಾಟ: ಅಶೋಕ
‘ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮತ್ತು ಮುಡಾ ಹಗರಣದ ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೂ ಅಹೋರಾತ್ರಿ ಧರಣಿ ನಡೆಸಲಾಗುವುದು. ದಲಿತರ ಹಣ ವಾಪಸ್ ಬರಬೇಕು ಮತ್ತು ದಲಿತರಿಗೆ ನ್ಯಾಯ ದೊರೆಯಬೇಕು’ ಎಂದು ವಿರೋಧ ಪಕ್ಷದ ನಾಯಕ ಆರ್.ಆಶೋಕ ಹೇಳಿದರು.
ಮೊಗಸಾಲೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಲೂಟಿಯಾದ ಹಣ ಮರಳಿ ಸರ್ಕಾರದ ಖಜಾನೆಗೆ ಬರಬೇಕು. ಇದಕ್ಕಾಗಿ ಹಗಲು ರಾತ್ರಿ ಧರಣಿ ಮಾಡಿ ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡುತ್ತೇವೆ’ ಎಂದರು.
ಆರು ತಿಂಗಳ ಅವಧಿ
ನ್ಯಾಯಮೂರ್ತಿ ಪಿ.ಎನ್. ದೇಸಾಯಿ ನೇತೃತ್ವದ ಆಯೋಗವು ಬೆಂಗಳೂರಿನಲ್ಲೇ ಕೇಂದ್ರ ಸ್ಥಾನ ಹೊಂದಿರಲಿದ್ದು, ಮುಡಾದಲ್ಲೂ ಕಚೇರಿ ತೆರೆಯಲಿದೆ. ಆರು ತಿಂಗಳೊಳಗೆ ವಿಚಾರಣೆಯನ್ನು ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಆಯೋಗಕ್ಕೆ ಕಾಲಮಿತಿ ವಿಧಿಸಲಾಗಿದೆ.
ಆಯೋಗಕ್ಕೆ ಅಗತ್ಯವಿರುವ ತಾಂತ್ರಿಕ, ಆರ್ಥಿಕ ಮತ್ತು ಭೂಸ್ವಾಧೀನ ಸಲಹೆಗಾರರನ್ನು ಒದಗಿಸುವಂತೆ ನಗರಾಭಿವೃದ್ಧಿ ಇಲಾಖೆಗೆ ಸೂಚಿಸಲಾಗಿದೆ.
ಬಿಜೆಪಿಯವರು ಮಾಡಿರುವ ಅನಾಚಾರಗಳು ಸಾಕಷ್ಟು ಇವೆ. ಸುಳ್ಳು ದಾಖಲೆ ನೀಡಿ ಎಕರೆಗಟ್ಟಲೆ ಜಾಗ ತೆಗೆದುಕೊಂಡಿದ್ದಾರೆ. ಅದನ್ನೂ ಬಯಲು ಮಾಡುತ್ತೇವೆಬೈರತಿ ಸುರೇಶ್, ನಗರಾಭಿವೃದ್ಧಿ ಸಚಿವ
ಜನರ ಸಮಸ್ಯೆಗಳನ್ನು ಚರ್ಚೆ ಮಾಡುವುದು ಬಿಟ್ಟು, 2 ವರ್ಷಗಳ ಹಿಂದಿನ ಪ್ರಕರಣ ಈಗ ಏಕೆ ಚರ್ಚಿಸಲು ಮುಂದಾಗಿದ್ದೀರಿಯು.ಟಿ.ಖಾದರ್,ಸಭಾಧ್ಯಕ್ಷ
ಸಿದ್ದರಾಮಯ್ಯ ಪತ್ನಿಗೆ ನೀಡಿದ ಭೂಮಿ ಪರಿಶಿಷ್ಟರಿಗೆ ಸೇರಿದೆ. ಈ ಸಂಬಂಧ ದೂರು ದಾಖಲಾಗಿದೆ. ಮುಖ್ಯಮಂತ್ರಿ ₹62 ಕೋಟಿ ಕೊಡಿ ಎನ್ನುವುದು ನಾಚಿಕೆಗೇಡುಆರ್.ಅಶೋಕ, ವಿರೋಧ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.