ಬೆಂಗಳೂರು: ‘ಈ ಬಜೆಟ್ ನಂತರ ರಾಜ್ಯದ ಎಲ್ಲ ಪಡಿತರ ಅಂಗಡಿಗಳಲ್ಲಿ ಅಕ್ಕಿ, ಬೇಳೆ, ಎಣ್ಣೆ ಹಾಗೂ ಉಪ್ಪು ಜೊತೆಗೆ ಮೈಸೂರು ಸ್ಯಾಂಡಲ್ ಸೋಪು ವಿತರಿಸುವ ಚಿಂತನೆ ಇದೆ’ ಎಂದುಆಹಾರ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘವು ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂಘದ ನೂತನ ವರ್ಷದ ಕ್ಯಾಲೆಂಡರ್ ಹಾಗೂ ಸಮ್ಮೇಳನ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಏಪ್ರಿಲ್‍ನಿಂದ ಪಡಿತರ ವಿತರಣೆಯ ಪ್ರಮಾಣ ಹೆಚ್ಚಿಸಲು ಯೋಜಿಸಲಾಗಿದೆ. ಮೈಸೂರು ಸ್ಯಾಂಡಲ್ ಸೋಪ್‍ನ ಸಾಂಸ್ಕೃತಿಕ ಹಿರಿಮೆಯನ್ನು ಪ್ರತಿ ಗ್ರಾಮಕ್ಕೆ ತಲುಪಿಸುವ ಉದ್ದೇಶದಿಂದಪಡಿತರದಲ್ಲಿ ಸೋಪ್ ವಿತರಿಸಲುಉದ್ದೇಶಿಸಲಾಗಿದೆ’ ಎಂದು ವಿವರಿಸಿದರು.
‘ಪಡಿತರ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆ ಸೇರಿದಂತೆ ಇನ್ನಿತರ ತಾಂತ್ರಿಕ ತೊಡಕುಗಳನ್ನು ಹಂತ ಹಂತವಾಗಿ ಪರಿಹರಿಸಲಾಗುವುದು. ಪಡಿತರ ವಿತರಕರ ಬೇಡಿಕೆಗಳ ಈಡೇರಿಕೆಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.
ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಎಚ್.ಅನಿಲ್ ಕುಮಾರ್,‘ಪಡಿತರ ವ್ಯವಸ್ಥೆಯಡಿ ಅಧಿಕಾರಿಗಳು, ವಿತರಕರು ಹಾಗೂ ಸಾರ್ವಜನಿಕರ ನಡುವೆ ಸಮನ್ವಯ ಏರ್ಪಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದರು.
‘ಪಡಿತರ ಪ್ರಮಾಣ ಹೆಚ್ಚಳ, ನೈಜ ಮಾರುಕಟ್ಟೆ ಬೆಲೆ, ಪ್ರತಿ ಅಂಗಡಿಗೆ ಒಂದು ಸಾವಿರ ಪಡಿತರ ಕಾರ್ಡ್ ವಿತರಣೆ, ಸರ್ವರ್ ಕೇಂದ್ರಗಳನ್ನು ತೆರೆಯುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು’ ಎಂದುಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ಅವರು ಸಚಿವರಿಗೆ ಮನವಿ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.