ADVERTISEMENT

ಉದ್ಯಮಿ ಸೀತಾರಾಮ್‌ ಜಿಂದಾಲ್‌ ಸೇರಿದಂತೆ ರಾಜ್ಯದ 9 ಸಾಧಕರಿಗೆ ಪದ್ಮ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2024, 21:23 IST
Last Updated 25 ಜನವರಿ 2024, 21:23 IST
   

ನವದೆಹಲಿ: ಕೇಂದ್ರ ಸರ್ಕಾರವು ಈ ಸಾಲಿನ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪುರಸ್ಕೃತರ ಹೆಸರುಗಳನ್ನು ಗುರುವಾರ ರಾತ್ರಿ ಪ್ರಕಟಿಸಿದೆ. ಉದ್ಯಮಿ ಸೀತಾರಾಮ್‌ ಜಿಂದಾಲ್‌ ಸೇರಿದಂತೆ ಕರ್ನಾಟಕದ ಒಂಬತ್ತು ಸಾಧಕರು ಪದ್ಮ ಪ್ರಶಸ್ತಿಗಳಿಗೆ ಆಯ್ಕೆಯಾಗಿದ್ದಾರೆ. 

ಅನನ್ಯ ಸಾಧನೆ ಮಾಡಿದ ಐವರಿಗೆ ಪದ್ಮವಿಭೂಷಣ, 17 ಮಂದಿಗೆ ಪದ್ಮಭೂಷಣ ಮತ್ತು 110 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ. ಮಾರ್ಚ್‌ ಅಥವಾ ಏಪ್ರಿಲ್‌ ತಿಂಗಳಿನಲ್ಲಿ ರಾಷ್ಟ್ರಪತಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಟೆನಿಸ್ ಆಟಗಾರ ರೋಹನ್‌ ಬೋಪಣ್ಣ ಸೇರಿದಂತೆ ರಾಜ್ಯದ ಎಂಟು ಮಂದಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

200 ದೇಸಿ ಭತ್ತದ ತಳಿಗಳನ್ನು ಬೆಳೆಸಿ ಅವುಗಳ ಬೀಜಗಳನ್ನು ಸಂರಕ್ಷಿಸಿದ ಕಾಸರಗೋಡಿನ ಕೃಷಿಕ ಬೆಳೇರಿ ಸತ್ಯನಾರಾಯಣ ಅವರೂ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ.

ADVERTISEMENT

ವೈದ್ಯಕೀಯ ಕ್ಷೇತ್ರದಲ್ಲಿನ ಸಾಧನೆಗಾಗಿ ಬೆಂಗಳೂರಿನ ಪ್ರೇಮಾ ಧನರಾಜ್‌ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿ ಪುರಸ್ಕೃತರಲ್ಲಿ ಮಾಜಿ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ನಟ ಚಿರಂಜೀವಿ, ವಿಜಯಕಾಂತ್‌ ಮತ್ತಿತರರು ಸೇರಿದ್ದಾರೆ.‌

ಪ್ರಶಸ್ತಿ ಪುರಸ್ಕೃತರಲ್ಲಿ ಹಲವಾರು ಬುಡಕಟ್ಟು ಜನಾಂಗದವರು, ಸಾಂಪ್ರದಾಯಿಕ ಔಷಧಿ ನೀಡುವವರು, ಕಲಾ ಸಾಧಕರು ಸೇರಿದ್ದಾರೆ. ಪ್ರಶಸ್ತಿ ಪುರಸ್ಕೃತರಲ್ಲಿ ಮೂವತ್ತು ಮಹಿಳೆಯರು ಮತ್ತು ಎಂಟು ಮಂದಿ ವಿದೇಶಿಗರು, ಅನಿವಾಸಿ ಭಾರತೀಯರು ಸೇರಿದ್ದಾರೆ. ಬಿಂದೇಶ್ವರ ಪಾಠಕ್‌ ಸೇರಿದಂತೆ ಒಂಬತ್ತು ಮಂದಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗಿದೆ. 

ಸಂಕಟ ಮೆಟ್ಟಿ ನಿಂತ ಪ್ರೇಮಾ

ಸುಟ್ಟ ಗಾಯಗಳಿಂದಾಗಿ ಜರ್ಝರಿತರಾಗಿದ್ದ ಪ್ರೇಮಾ ಧನರಾಜ್ ಅವರು, ವೈಯಕ್ತಿಕ ನೋವನ್ನು ಮೀರಿ ನಿಂತರು. ಸುಟ್ಟ ಗಾಯಗಳಿಂದ ತೊಂದರೆಗೆ ಒಳಗಾದವರಿಗಾಗಿ ತಮ್ಮ ಜೀವನ ಮೀಸಲಿಟ್ಟರು. ಬೆಂಗಳೂರು ಮೂಲದ ಪ್ರೇಮಾ ಅವರು ಪ್ಲಾಸ್ಟಿಕ್ ಸರ್ಜನ್, ಸಾಮಾಜಿಕ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ದಾರೆ. ನೀತಿ ನಿರೂಪಣೆಗಳಲ್ಲಿ ಸುಧಾರಣೆಗಳನ್ನು ತರುವ ವಿಚಾರವಾಗಿಯೂ ಅವರು ಕೆಲಸ ಮಾಡಿದ್ದಾರೆ.

‘ಅಗ್ನಿ ರಕ್ಷಾ’ ಎನ್‌ಜಿಒ ಸ್ಥಾಪಿಸಿದ ಪ್ರೇಮಾ, ಸುಟ್ಟ ಗಾಯಗಳಿಂದ ತೊಂದರೆಗೆ ಒಳಗಾದ 25 ಸಾವಿರಕ್ಕೂ ಹೆಚ್ಚಿನ ಜನರಿಗೆ ಉಚಿತ ಶಸ್ತ್ರಚಿಕಿತ್ಸೆಯ ಸೇವೆ ಒದಗಿಸಿದ್ದಾರೆ. ಪ್ಲಾಸ್ಟಿಕ್ ಸರ್ಜರಿ ಬಗ್ಗೆ ಮೂರು ಪುಸ್ತಕಗಳನ್ನು ಬರೆದಿದ್ದಾರೆ. ಕೆನ್ಯಾ, ತಾಂಜಾನಿಯಾ, ನಾರ್ವೆ ಮತ್ತು ಇಥಿಯೋಪಿಯಾ ದೇಶಗಳ ವೈದ್ಯರಿಗೆ ಮಾಹಿತಿ ನೀಡುವ ಕೆಲಸ ಮಾಡಿದ್ದಾರೆ.

ಎಂಟನೆಯ ವಯಸ್ಸಿನಲ್ಲಿ ಅಡುಗೆ ಮನೆಯಲ್ಲಿ ಸ್ಟೌ ಸ್ಫೋಟಗೊಂಡ ಪರಿಣಾಮವಾಗಿ ಸುಟ್ಟ ಗಾಯಗಳಿಗೆ ತುತ್ತಾದ ಪ್ರೇಮಾ, ನಂತರದಲ್ಲಿ ತಮಗಾದ ನೋವನ್ನು ಮೆಟ್ಟಿನಿಂತರು. ಬದಲಾವಣೆಯ ಚಾಲಕಶಕ್ತಿಯಾಗಿ ಬೆಳೆದರು. ವೆಲ್ಲೋರ್‌ನ ಕ್ರಿಶ್ಚಿಯನ್ ಮೆಡಿಕಲ್‌ ಕಾಲೇಜಿನಲ್ಲಿ 14 ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾದ ಅವರು ನಂತರ ಅಲ್ಲಿಯೇ ಸರ್ಜನ್ ಆಗಿ, ವಿಭಾಗದ ಮುಖ್ಯಸ್ಥೆಯಾಗಿ ಕರ್ತವ್ಯ ನಿರ್ವಹಿಸಿದರು.

ಕೃಷಿಯಲ್ಲಿ ಖುಷಿ ಕಂಡ ಸತ್ಯನಾರಾಯಣ ಬೆಳೇರಿ

ಮಂಗಳೂರು: ಗಡಿ ಪ್ರದೇಶ ಕಾಸರಗೋಡಿನ ನಾಟೆಕಲ್ಲು ಸಮೀಪದ ಬೆಳೇರಿಯಲ್ಲಿ ಭತ್ತದ ತಳಿಗಳ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಕನ್ನಡಿಗ ಸತ್ಯನಾರಾಯಣ ಅವರು ಕೃಷಿ ಋಷಿ. ಕೃಷಿಭೂಮಿ ಇಲ್ಲದೇ ಇದ್ದರೂ 25 ಸೆಂಟ್ ಗುಡ್ಡ ಪ್ರದೇಶದಲ್ಲಿ ಇವರು ಅಭಿವೃದ್ಧಿಪಡಿಸಿದ ತಳಿಗಳ ಬೀಜಗಳು ದೇಶದ ವಿವಿಧ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಪ್ರಯೋಗವಾಗಿವೆ.

ನೂರಾರು ತಳಿಗಳನ್ನು ಉಳಿಸಲು ಪ್ರಯತ್ನಿಸಿರುವ ಅವರ ‘ರಾಜಕಯಮೆ’ ತಳಿ ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ ರೈತರಿಗೆ ಅದ್ಭುತ ಇಳುವರಿ ನೀಡಿ ಪ್ರಸಿದ್ಧಿ ಪಡೆದಿದೆ. 15 ವರ್ಷಗಳಿಂದ ಸಂಶೋಧನೆಯಲ್ಲಿ ತೊಡಗಿರುವ ಅವರ ‘ಪಾಲಿಬ್ಯಾಗ್’ ಮಾದರಿಯೂ ಗಮನ ಸೆಳೆದಿದೆ. ಭತ್ತ ಮಾತ್ರವಲ್ಲದೆ ಅಡಿಕೆ, ಜಾಯಿಕಾಯಿ ಮತ್ತು ಕರಿಮೆಣಸು ತಳಿಗಳನ್ನು ಕೂಡ ಕಾಣಿಕೆ ನೀಡಿದ್ದಾರೆ. ಅಭಿವೃದ್ಧಿಪಡಿಸಿದ ತಳಿಗಳ ಬೀಜಗಳನ್ನು ಉಚಿತವಾಗಿ ಹಂಚಿದ್ದಾರೆ.

‘ಇಷ್ಟು ದೊಡ್ಡ ಪುರಸ್ಕಾರಕ್ಕೆ ಭಾಜನನಾಗುವ ನಿರೀಕ್ಷೆ ಇರಲಿಲ್ಲ. ಅದೆಷ್ಟೋ ತಳಿಗಳು ಈಗ ಅವಸಾನದ ಅಂಚಿನಲ್ಲಿವೆ. ಆ ತಳಿಗಳನ್ನು ಉಳಿಸುವ ಕೆಲಸ ಮಾಡಿದ್ದೇನೆ. ಹೀಗಾಗಿ ಈ ಪುರಸ್ಕಾರ ನೀಡುವ ಮೂಲಕ ಸರ್ಕಾರ ತಳಿಗಳನ್ನು ಉಳಿಸುವ ಕಾರ್ಯಕ್ಕೆ ಪರೋಕ್ಷವಾಗಿ ಪ್ರೋತ್ಸಾಹ ನೀಡಿದೆ’ ಎಂದು ‘ಪ್ರಜಾವಾಣಿ’ ಜೊತೆ ಮಾತನಾಡಿದ ಸತ್ಯನಾರಾಯಣ ಅಭಿಪ್ರಾಯಪಟ್ಟರು.

ಸೋಮಣ್ಣಗೆ ಒಲಿದ ಗೌರವ

ಮೈಸೂರು: ಬುಡಕಟ್ಟು ಜನರ ಶ್ರೇಯೋಭಿವೃದ್ಧಿಗೆ ನಾಲ್ಕು ದಶಕಗಳಿಂದ ಅವಿರತವಾಗಿ ಶ್ರಮಿಸುತ್ತಿರುವ ಜಿಲ್ಲೆಯ ಎಚ್‌.ಡಿ. ಕೋಟೆ ತಾಲ್ಲೂಕಿನ ಮೊತ್ತ ಹಾಡಿಯ ಸೋಮಣ್ಣ ಅವರಿಗೆ ‘ಪದ್ಮಶ್ರೀ’ ಗೌರವ ದೊರೆತಿದೆ.

ರಾಜ್ಯ ಸರ್ಕಾರ 2016ನೇ ಸಾಲಿನಲ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿತ್ತು. ಮರು ದಿನ ಅವರ ಹೆಸರನ್ನು ಪಟ್ಟಿಯಿಂದ ತೆಗೆಯಲಾಗಿತ್ತು. ಇದನ್ನು ಖಂಡಿಸಿ ನಾಡಿನ ಪ್ರಗತಿಪರರು–ಚಿಂತಕರು ಸೇರಿಕೊಂಡು ಸಾಹಿತಿ ದೇವನೂರ ಮಹಾದೇವ ಅವರ ಸಮ್ಮುಖದಲ್ಲಿ ಅವರಿಗೆ ₹1 ಲಕ್ಷ ನಗದು ಒಳಗೊಂಡ ‘ಜನ ರಾಜ್ಯೋತ್ಸವ ಪ್ರಶಸ್ತಿ’ಯನ್ನು ಪ್ರದಾನ ಮಾಡಿ ವಿಶೇಷವಾಗಿ ಗೌರವಿಸಿದ್ದರು. ಜನರಿಂದ ದೇಣಿಗೆ ಸಂಗ್ರಹಿಸಿ ನೀಡಿದ್ದರು.

ಈಚೆಗೆ ರಾಜ್ಯ ಸರ್ಕಾರದಿಂದ ನೀಡಲಾಗುವ ವಾಲ್ಮೀಕಿ ಪ್ರಶಸ್ತಿಗೆ ಅವರು ಭಾಜನವಾಗಿದ್ದರು. ₹5 ಲಕ್ಷ, 20 ಗ್ರಾಂ. ಚಿನ್ನದ ಪದಕ ಒಳಗೊಂಡ ಪ್ರಶಸ್ತಿ ಅವರನ್ನು ಅರಸಿ ಬಂದಿತ್ತು. ಪ್ರಶಸ್ತಿ ಪ್ರದಾನ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಆಗ ರಾಜ್ಯೋತ್ಸವ ಮಿಸ್ ಆಗಿತ್ತು ಕಣಯ್ಯ, ಈಗ ವಾಲ್ಮೀಕಿ ಪ್ರಶಸ್ತಿ ಕೊಟ್ಟಿದ್ದೇವೆ’ ಎಂದು ತಬ್ಬಿಕೊಂಡು ಖುಷಿ ವ್ಯಕ್ತಪಡಿಸಿದ್ದರು. ಈಗ, ದೇಶದ 4ನೇ ಅತ್ಯುನ್ನತ ನಾಗರಿಕ ಗೌರವವಾದ ‘ಪದ್ಮಶ್ರೀ’ಯೂ ಸೋಮಣ್ಣ ಅವರನ್ನು ಹುಡುಕಿಕೊಂಡು ಬಂದಿದೆ.

ಆಲತ್ತಾಳಹುಂಡಿಯ ಜೇನುಕುರುಬರಾದ ಅವರು ತಳ ಸಮುದಾಯದವರ ಅದರಲ್ಲೂ ಬುಡಕಟ್ಟು ಜನರ ಸಾಕ್ಷಿಪ್ರಜ್ಞೆ. ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಲ್ಲಿ ಆದಿವಾಸಿಗಳನ್ನು ಮುಖ್ಯವಾಹಿನಿಗೆ ತರಲು ಹೋರಾಡುತ್ತಿದ್ದಾರೆ. ನಾಗರಹೊಳೆ, ಕಾಕನಕೋಟೆ ಅಭಯಾರಣ್ಯದಿಂದ ಮೂಲನಿವಾಸಿಗಳನ್ನು ಒಕ್ಕಲೆಬ್ಬಿಸಿದಾಗ ಬುಡಕಟ್ಟು ಹಾಡಿಗಳಿಗೆ ಕಾಲ್ನಡಿಗೆಯಲ್ಲಿ ಸಂಚರಿಸಿ ಅವರ ಕಷ್ಟ–ಸುಖದಲ್ಲಿ ಭಾಗಿಯಾದವರು. ಆದಿವಾಸಿಗಳಿಗೆ ಹಕ್ಕು ಕಲ್ಪಿಸಲು ನ್ಯಾಯಾಲಯದ ಮೆಟ್ಟಲೇರಿ ಹೋರಾಟವನ್ನೂ ನಡೆಸಿದವರು.

ಬಡತನದ ಕಾರಣದಿಂದ ಅವರು ಶಾಲೆಗೆ ಹೋದವರಲ್ಲ. ಆದರೆ, ಲೋಕಜ್ಞಾನ ಪಡೆದು ಸಣ್ಣ ಭೂರಹಿತ ಆದಿವಾಸಿಗಳನ್ನು ಸಂಘಟಿಸಿದ್ದಾರೆ. ಪ್ರಗತಿಪರ ಹೋರಾಟಗಾರರ ಜೊತೆಗೂಡಿ ಕಟ್ಟಿದ ‘ರಾಜ್ಯ ಮೂಲ ನಿವಾಸಿ ವೇದಿಕೆ’ಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಸಂಘಟಿತ ಪ್ರಯತ್ನದಿಂದ ಆದಿವಾಸಿಗಳಿಗೆ ಅರಣ್ಯ ಪ್ರದೇಶದಿಂದ ಆರು ಸಾವಿರ ಎಕರೆ ಕೃಷಿ ಭೂಮಿ ದೊರಕಿಸಿಕೊಟ್ಟು ಗಮನಸೆಳೆದಿದ್ದಾರೆ.

ಆರಂಭದಲ್ಲಿ ಜೀತದಾಳಾಗಿದ್ದ ಅವರು ಅದರಿಂದ ಹೊರಬಂದು, ತನ್ನವರಾದ ಜೇನುಕುರುಬ, ಬೆಟ್ಟಕುರುಬ, ಎರವ ಮತ್ತು ಸೋಲಿಗರನ್ನು ಸಂಘಟಿಸಿ ಪುನರ್ವಸತಿಗಾಗಿ ಹೋರಾಡುತ್ತಲೇ ಬಂದಿದ್ದಾರೆ.

ಕಾಡಂಚಿನಲ್ಲಿ ಹೋಟೆಲ್‌ ನಿರ್ಮಾಣಕ್ಕೆ ಮುಂದಾದ ಬಂಡವಾಳಶಾಹಿಗಳ ವಿರುದ್ಧವೂ ಹೋರಾಟ ನಡೆಸಿದ್ದರು. ಅದರಲ್ಲಿ ಯಶಸ್ಸನ್ನೂ ಕಂಡಿದ್ದರು. ‘ನರ್ಮದಾ ಬಚಾವೋ’ ಹೋರಾಟದಲ್ಲಿ ಮೇಧಾ ಪಾಟ್ಕರ್ ಜೊತೆ ಪಾಲ್ಗೊಂಡಿದ್ದರು. 2008ರಿಂದ ಜಾರಿಗೆ ಬಂದ ಅರಣ್ಯವಾಸಿಗಳ ಪಾರಂಪರಿಕ ಹಕ್ಕುಗಳ ಸಮಿತಿಯಲ್ಲಿ ಸಕ್ರಿಯರಾಗಿದ್ದಾರೆ. 1991ರಲ್ಲಿ ಫಿಲಿಪ್ಪೀನ್ಸ್ ದೇಶದಲ್ಲಿ ನಡೆದ ಆದಿವಾಸಿಗಳ ಮೇಳದಲ್ಲಿ ಕರ್ನಾಟಕದ ಬುಡಕಟ್ಟು ಪ್ರತಿನಿಧಿಯಾಗಿ ಭಾಗವಹಿಸಿದ್ದರು. 

66 ವರ್ಷದ ಸೋಮಣ್ಣ ಪುತ್ರ ಕಾಳಸ್ವಾಮಿ ಜೊತೆ ಮೊತ್ತ ಹಾಡಿಯಲ್ಲಿ ವಾಸವಾಗಿದ್ದಾರೆ. ಈಚೆಗೆ ‘ಕನ್ಹೇರಿ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

‘ಪತ್ನಿ (ರಾಜಮ್ಮ) ಜ.7ರಂದು ನಿಧನರಾದರು. ಆ ನೋವಿನಲ್ಲಿದ್ದ ನನಗೆ ಪದ್ಮಶ್ರೀ ಸಿಕ್ಕಿದ್ದು ಚೈತನ್ಯ ತುಂಬಿದಂತಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.