ಬೆಂಗಳೂರು: ಪದ್ಮಶ್ರೀ ಪುರಸ್ಕೃತೆ, ಕರ್ನಾಟಕ ಸರ್ಕಾರದ ಪರಿಸರ ರಾಯಭಾರಿಯಾಗಿರುವ ಸಾಲು ಮರದ ತಿಮ್ಮಕ್ಕ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅಪೋಲೊ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
‘ಸುಸ್ತು ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಸಾಲು ಮರದ ತಿಮ್ಮಕ್ಕ ಅವರಿಗೆ ಶ್ವಾಸಕೋಶದ ಸಾಮರ್ಥ್ಯ ಕಡಿಮೆಯಾಗಿದೆ. ಜತೆಗೆ ಆಸ್ತಮಾದ ತೀವ್ರತೆ ಹೆಚ್ಚಿರುವ ಕಾರಣ ಉಸಿರಾಡಲು ಕಷ್ಟವಾಗುತ್ತಿದೆ. ಸದ್ಯ ಅವರಿಗೆ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಮುಂದುವರಿಸಲಾಗಿದೆ’ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ಡಾ. ರವೀಂದ್ರ ಮೆಹ್ತಾ ತಿಳಿಸಿದ್ದಾರೆ.
ಸದ್ಯ ತಿಮ್ಮಕ್ಕ ಅವರ ಆರೋಗ್ಯ ಸ್ಥಿರವಾಗಿದೆ. ಅವರಿಗೆ ಆಸ್ತಮಾದ ಲಕ್ಷಣಗಳಿರುವ ಕಾರಣ ಇನ್ನೂ 2-3 ದಿನಗಳವರೆಗೆ ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಲಾಗುವುದು. ಅವರ ವಯಸ್ಸಿನ ಕಾರಣದಿಂದಾಗಿ ಕಾಯಿಲೆಗೆ ಸಂಬಂಧಿಸಿ ಶಿಫಾರಸು ಮಾಡಲಾದ ಪೂರ್ಣ ಪ್ರಮಾಣದ ಔಷಧಿಗಳನ್ನು ನೀಡಲು ಸಾಧ್ಯವಿಲ್ಲ ಎಂದು ವೈದ್ಯರು ವಿವರಿಸಿದ್ದಾರೆ.
ಸೆಪ್ಟೆಂಬರ್ 26ರಂದು ಅವರ ಉಸಿರಾಟದಲ್ಲಿ ಏರುಪೇರಾಗಿದ್ದರಿಂದ ಬೇಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಸೋಮವಾರ ರಾತ್ರಿಯಿಂದ ಉಸಿರಾಟದಲ್ಲಿ ತೀವ್ರ ಏರು ಪೇರಾಗಿದ್ದರಿಂದ ಅವರನ್ನು ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.