ಮಡಿಕೇರಿ: ‘ಉಮ್ಮತ್ತಾಟ್ ರಾಣಿ’ ಎಂದೇ ಖ್ಯಾತರಾದ ಐಮುಡಿಯಂಡ ರಾಣಿ ಮಾಚಯ್ಯ (79) ಅವರು ಹತ್ತು ಸಾವಿರ ಮಕ್ಕಳಿಗೆ ಕೊಡಗಿನ ಸಾಂಪ್ರದಾಯಿಕ ಹಾಗೂ ಅತಿ ವಿಶಿಷ್ಟ ನೃತ್ಯ ಎನಿಸಿದ ಉಮ್ಮತ್ತಾಟ್‌ನ್ನು ಕಲಿಸುವ ಮೂಲಕ ಆ ಕಲೆಯ ರಕ್ಷಣೆಗಾಗಿ ಅಪಾರ ಶ್ರಮಪಟ್ಟಿದ್ದಾರೆ.
1943ರಲ್ಲಿ ಸಿದ್ದಾಪುರದಲ್ಲಿ ಜನಿಸಿದ ಅವರು ಕಲಿತದ್ದು ಪಿಯುಸಿವರೆಗೆ ಮಾತ್ರ. ಆದರೆ, ಉಮ್ಮತ್ತಾಟ್ ಅನ್ನು 1984ರಿಂದ ಹರಡುವ ಪ್ರಯತ್ನ ಆರಂಭಿಸಿದರು. ಕಾವೇರಿ ಕಲಾ ವೃಂದವನ್ನು ಸ್ಥಾಪಿಸಿ ಗೋವಾದಿಂದ ಆರಂಭವಾದ ಅವರ ಕಲಾಯಾತ್ರೆ ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಒಡಿಸ್ಸಾ, ಮಿಜೋರಾಂ, ಮಹಾರಾಷ್ಟ್ರ, ಮಧ್ಯಪ್ರದೇಶ, ಪಂಜಾಬ್ ಸೇರಿದಂತೆ ದೇಶದ ಉದ್ದಗಲಕ್ಕೂ ಸಾಗಿದೆ.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆಯಾಗಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‌ನ ಉಪಾಧ್ಯಕ್ಷೆಯಾಗಿದ್ದ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.
‘ಪದ್ಮಶ್ರೀ ಪ್ರಶಸ್ತಿ ಕುರಿತು ನಾನು ಯೋಚನೆಯನ್ನೇ ಮಾಡಿರಲಿಲ್ಲ. ಯಾರು ನನ್ನನ್ನು ಗುರುತಿಸಿದರೋ ಗೊತ್ತಿಲ್ಲ. ಆಶ್ಚರ್ಯದ ಜತೆಗೆ ಸಂತಸವೂ ಆಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.