ಬೆಂಗಳೂರು: ಬಹುಭಾಷೆಗಳಲ್ಲಿ ಬಿಡುಗಡೆ ಆಗಿರುವ ನಟ ಸುದೀಪ್ ಅಭಿನಯದ ‘ಪೈಲ್ವಾನ್’ ಸಿನಿಮಾ ಪೈರಸಿ ಪ್ರಕರಣ ಸಂಬಂಧ ಎನ್. ರಾಕೇಶ್ (19) ಎಂಬಾತನನ್ನು ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ನೆಲಮಂಗಲ ತಾಲ್ಲೂಕಿನ ಇಮಚೇನಹಳ್ಳಿಯ ರಾಕೇಶ್, ಫೇಸ್ ಬುಕ್‌ನಲ್ಲಿ ‘ರಾಕೇಶ್ ವಿರಾಟ್ (ಯುವ)’ ಹೆಸರಿನಲ್ಲಿ ಖಾತೆ ತೆರೆದಿದ್ದಾನೆ. ‘ಡಿ ಬಾಸ್’ ಅಭಿಮಾನಿ ಎಂದು ಬರೆದು ಕೊಂಡಿದ್ದಾನೆ. ಗುರುವಾರ ಸಂಜೆ ಆತನನ್ನು ಬಂಧಿಸಿ ವಿಚಾರಣೆ ನಡೆಸಿ ದಾಗ ತಪ್ಪೊಪ್ಪಿಕೊಂಡ’ ಎಂದು ಪೊಲೀಸರು ಹೇಳಿದರು.
‘ನಿರ್ಮಾಪಕರ ಅನುಮತಿ ಪಡೆಯದೇ ಪೈಲ್ವಾನ್ ಸಿನಿಮಾದ ಲಿಂಕ್ ಅನ್ನು ಆರೋಪಿ ಫೇಸ್‌ಬುಕ್ ಖಾತೆಯ ಟೈಮ್‌ಲೈನ್‌ನಲ್ಲಿ ಶೇರ್ ಮಾಡಿದ್ದ. ‘ಸಂಪೂರ್ಣ ಸಿನಿಮಾ ವೀಕ್ಷಿಸಬೇಕಾದರೆ ನನಗೆ ಸಂದೇಶ ಕಳುಹಿಸಿ ಲಿಂಕ್ ಕಳುಹಿಸುತ್ತೇನೆ’ ಎಂಬುದಾಗಿಯೂ ಪೋಸ್ಟ್ ಪ್ರಕಟಿಸಿದ್ದ. ಅದೇ ಲಿಂಕ್ ಬಳಸಿ ಹಲವರು ಸಿನಿಮಾ ನೋಡಿದ್ದಾರೆ. ಕೆಲವರು ಸಿನಿಮಾದ ಪೈರಸಿ ಮಾಡಿದ್ದಾರೆ’ ಎಂದರು.
‘ಪೈಲ್ವಾನ್ ಸಿನಿಮಾ ಪೈರಸಿ ಬಗ್ಗೆ ನಿರ್ಮಾಪಕಿ ಸ್ವಪ್ನಾಕೃಷ್ಣ ಸೆ.16ರಂದು ದೂರು ನೀಡಿದ್ದರು. ಕಾಪಿರೈಟ್ ಕಾಯ್ದೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು’. ‘ಲಿಂಕ್ ಶೇರ್ ಮಾಡಿದ್ದ ಆರೋಪದಡಿ ರಾಕೇಶ್‌ನನ್ನು ಬಂಧಿಸಲಾಗಿದೆ. ಚಿತ್ರಮಂದಿರದಲ್ಲಿ ಇಡೀ ಸಿನಿಮಾವನ್ನು ಚಿತ್ರೀಕರಿಸಿ, ಸಾಮಾಜಿಕ ಜಾಲತಾಣ ಗಳಲ್ಲಿ ಅಪ್‌ಲೋಡ್ ಮಾಡಿದ್ದ ಆರೋಪಿಗಳ ಬಂಧನಕ್ಕೆ ಪ್ರಯತ್ನಿಸ ಲಾಗುತ್ತಿದೆ’ ಎಂದರು.
ದರ್ಶನ್, ಕೊಹ್ಲಿ ಅಭಿಮಾನಿ: ಬಂಧಿತ ರಾಕೇಶ್, ನಟ ದರ್ಶನ್ ಹಾಗೂಕ್ರಿಕೆಟಿಗ ವಿರಾಟ್ ಕೊಹ್ಲಿ ಅಭಿಮಾನಿ. ಅವರಿಬ್ಬರಿಗೆ ಸಂಬಂಧಪಟ್ಟ ಕಟೌಟ್, ಫೋಟೊ ಹಾಗೂ ಇತರೆ ಮಾಹಿತಿಯ ಪೋಸ್ಟ್ ಗಳನ್ನು ಆತ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದಾನೆ. ‘ವಿರಾಟಿಯನ್ ಪಕ್ಕಾ ಫ್ಯಾನ್’, ‘ಡಿ ಬಾಸ್ ಫ್ಯಾನ್’ ಎಂದು ಫೇಸ್‌ಬುಕ್‌ನಲ್ಲಿ ಆತ ಬರೆದುಕೊಂಡಿ ದ್ದಾನೆ. ‘ಡಿ ಬಾಸ್’ ಅಕ್ಷರವುಳ್ಳ ಟಿ–ಶರ್ಟ್ ಧರಿಸಿಕೊಂಡು ಫೋಟೊ ತೆಗೆಸಿ ಕೊಂಡಿದ್ದು, ಅದನ್ನೂ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ.
‘ದರ್ಶನ್ ಸಿನಿಮಾಗಳೇ ಬೆಸ್ಟ್’
‘ದರ್ಶನ್ ಅಭಿಮಾನಿ ಆಗಿರುವ ನನಗೆ ಅವರ ಸಿನಿಮಾಗಳೇ ಬೆಸ್ಟ್. ಹಣಕ್ಕಾಗಿ ನಾನು ಪೈಲ್ವಾನ್ ಸಿನಿಮಾ ಲಿಂಕ್ ಶೇರ್ ಮಾಡಿಲ್ಲ’ ಎಂದು ಆರೋಪಿ ರಾಕೇಶ್ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.
‘ಹಣ ಸಂಪಾದಿಸಲು ನಾನು ಈ ರೀತಿ ಮಾಡಿಲ್ಲ. ಮೊದಲಿಗೆ ಸ್ನೇಹಿತರಿಗಷ್ಟೇ ಲಿಂಕ್ ಶೇರ್ ಮಾಡಿದ್ದೆ. ಅವರು ಯಾರ‍್ಯಾರಿಗೆ ಶೇರ್ ಮಾಡಿದ್ದಾರೆ ಎಂಬುದು ಗೊತ್ತಿಲ್ಲ’ ಎಂದಿದ್ದಾನೆ.
ಇಬ್ಬರು ಸ್ನೇಹಿತರಿಂದಲೂ ಲಿಂಕ್ ಶೇರ್
‘ಆರೋಪಿ ರಾಕೇಶ್‌ನ ಇನ್ನಿಬ್ಬರು ಸ್ನೇಹಿತರು ಸಹ ಸಿನಿಮಾದ ಲಿಂಕ್ ಶೇರ್ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಅವರನ್ನೂ ಪತ್ತೆ ಮಾಡುತ್ತಿದ್ದೇವೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.