ADVERTISEMENT

ಪಂಚಾಯತ್‌ ರಾಜ್‌ ತಿದ್ದುಪಡಿ ಮಸೂದೆ ಮಂಡನೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2022, 19:59 IST
Last Updated 21 ಮಾರ್ಚ್ 2022, 19:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಶಿಕ್ಷೆಗೊಳಗಾದ ಮತ್ತು ಶಿಸ್ತುಕ್ರಮಕ್ಕೆ ಒಳಗಾದ ಸರ್ಕಾರಿ ನೌಕರರು, ಸಹಕಾರಿ ಸಂಸ್ಥೆಗಳ ನೌಕರರು ಮತ್ತು ಪದಾಧಿಕಾರಿಗಳು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸುವ ಪ್ರಸ್ತಾವವುಳ್ಳ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ತಿದ್ದುಪಡಿ ಮಸೂದೆ– 2022 ಅನ್ನು ವಿಧಾನಸಭೆಯಲ್ಲಿ ಸೋಮವಾರ ಮಂಡಿಸಲಾಯಿತು.

ತಾಲ್ಲೂಕಿನ ಒಟ್ಟು ಜನಸಂಖ್ಯೆಯ ಆಧಾರದಲ್ಲಿ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಸಂಖ್ಯೆಯನ್ನು ನಿರ್ಧರಿಸುವ ಅಂಶವೂ ಮಸೂದೆಯಲ್ಲಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಮಸೂದೆ ಮಂಡಿಸಿದರು.

ಕೇಂದ್ರ ಅಥವಾ ರಾಜ್ಯ ಸರ್ಕಾರದ ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಗಾದವರು ಅಥವಾ ಸೇವೆಯಿಂದ ತೆಗೆದು ಹಾಕಿದವರು ಅಥವಾ ವಜಾಗೊಂಡಿರುವ ವ್ಯಕ್ತಿಗಳು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವುದನ್ನು ಈ ತಿದ್ದುಪಡಿ ನಿರ್ಬಂಧಿಸುತ್ತದೆ. ಸಹಕಾರ ಸಂಘಗಳ ನೌಕರರಿಗೂ ಈ ನಿರ್ಬಂಧ ಅನ್ವಯವಾಗುತ್ತದೆ. ಸಹಕಾರ ಸಂಸ್ಥೆಗಳ ಅಧ್ಯಕ್ಷ ಅಥವಾ ಸದಸ್ಯ ಸ್ಥಾನದಿಂದ ವಜಾಗೊಂಡವರು ಕೂಡ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶವಿರುವುದಿಲ್ಲ.

ADVERTISEMENT

ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ: ಎರಡು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ತಾಲ್ಲೂಕುಗಳಲ್ಲಿ ಪ್ರತಿ 12,000 ಜನರಿಗೆ ಒಬ್ಬ ತಾಲ್ಲೂಕು ಪಂಚಾಯಿತಿ ಸದಸ್ಯ ಇರಬೇಕು. ಒಂದು ಲಕ್ಷದಿಂದ ಎರಡು ಲಕ್ಷದವರೆಗಿನ ಜನಸಂಖ್ಯೆ ಇರುವ ತಾಲ್ಲೂಕುಗಳಲ್ಲಿ ಪ್ರತಿ 10,000 ಜನರಿಗೆ ಒಬ್ಬ ತಾಲ್ಲೂಕು ಪಂಚಾಯಿತಿ ಸದಸ್ಯರಿರಬೇಕು. ಒಟ್ಟು ಸದಸ್ಯರ ಕನಿಷ್ಠ ಸಂಖ್ಯೆ ಇರಬೇಕು ಎಂಬ ತಿದ್ದುಪಡಿಯನ್ನೂ ಈ ಮಸೂದೆ ಒಳಗೊಂಡಿದೆ.

50,000 ದಿಂದ ಒಂದು ಲಕ್ಷ ಜನಸಂಖ್ಯೆ ಹೊಂದಿರುವ ತಾಲ್ಲೂಕು ಪಂಚಾಯಿತಿಗಳಲ್ಲಿ ಕನಿಷ್ಠ ಒಂಬತ್ತು ಮತ್ತು 50,000ಕ್ಕಿಂತ ಕಡಿಮೆ ಜನಸಂಖ್ಯೆ ಇರುವ ತಾಲ್ಲೂಕು ಪಂಚಾಯಿತಿಗಳಲ್ಲಿ ಕನಿಷ್ಠ ಏಳು ಸದಸ್ಯರಿರಬೇಕು ಎಂಬ ಅಂಶವೂ ಇದೆ.

ತರೀಕೆರೆ, ಕಡೂರು ಮತ್ತು ಅಜ್ಜಂಪುರ ತಾಲ್ಲೂಕುಗಳನ್ನು ಹೊರತುಪಡಿಸಿದಂತೆ ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಪ್ರತಿ 18,000ದಿಂದ 25,000 ಜನಸಂಖ್ಯೆಗೆ ಒಬ್ಬ ತಾಲ್ಲೂಕು ಪಂಚಾಯಿತಿ ಸದಸ್ಯನ ಆಯ್ಕೆಗೆ ಅವಕಾಶ ಕಲ್ಪಿಸುವ ತಿದ್ದುಪಡಿಯೂ ಸೇರಿದೆ.

ಜಿಲ್ಲಾ ಯೋಜನಾ ಸಮಿತಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಅಧ್ಯಕ್ಷರನ್ನಾಗಿ, ಜಿಲ್ಲಾ ಕೇಂದ್ರದಲ್ಲಿನ ನಗರಪಾಲಿಕೆ ಮೇಯರ್‌ ಅಥವಾ ಪುರಸಭೆಗಳ ಅಧ್ಯಕ್ಷರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲು ಅವಕಾಶ ಕಲ್ಪಿಸುವ ತಿದ್ದುಪಡಿಯೂ ಮಸೂದೆಯಲ್ಲಿದೆ. ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರನ್ನು ವಿಶೇಷ ಆಹ್ವಾನಿತರಾಗಿ ಆಹ್ವಾನಿಸಲು ಅವಕಾಶ ನೀಡುವ ಅಂಶವೂ ಇದೆ.

ಎರಡು ಮಸೂದೆಗಳಿಗೆ ಅಂಗೀಕಾರ
ಭೂಸ್ವಾಧೀನ, ಪರಿಹಾರ ಮತ್ತು ಪುನರ್ವಸತಿ ಕಾಯ್ದೆ–2013ರ ಪ್ರಕಾರವೇ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲೂ ಭೂಸ್ವಾಧೀನ ಪ್ರಕ್ರಿಯೆ ನಡೆಸುವುದನ್ನು ಕಡ್ಡಾಯಗೊಳಿಸುವ ‘ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ತಿದ್ದುಪಡಿ ಮಸೂದೆ–2022’ಕ್ಕೆ ವಿಧಾನಸಭೆ ಸೋಮವಾರ ಅಂಗೀಕಾರ ನೀಡಿತು.

ಬಂದೀಖಾನೆಗಳಲ್ಲಿ ಮೊಬೈಲ್‌ ಮತ್ತು ಇತರ ಸಂಪರ್ಕ ಸಾಧನಗಳನ್ನು ನಿಷೇಧಿಸುವ ಹಾಗೂ ಪರೋಲ್‌ ಮೇಲೆ ಹೊರ ಬಂದು ನಾಪತ್ತೆಯಾಗುವವರ ಶಿಕ್ಷೆ ಪ್ರಮಾಣ ಹೆಚ್ಚಿಸುವ ಮತ್ತು ಜಾಮೀನು ನೀಡಿದವರಿಗೂ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ಬಂದೀಖಾನೆಗಳ ತಿದ್ದುಪಡಿ ಮಸೂದೆ–2022’ಕ್ಕೂ ವಿಧಾನಸಭೆಯ ಅಂಗೀಕಾರ ದೊರಕಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.