ಬೆಂಗಳೂರು: ಮಲೆನಾಡು ಮತ್ತು ಗುಡ್ಡಗಾಡು ಪ್ರದೇಶಗಳ ಇತರ ಜಿಲ್ಲೆಗಳ ಮಾದರಿಯಲ್ಲಿ ಕೊಡಗು ಜಿಲ್ಲೆಯಲ್ಲೂ ಪ್ರತಿ 18,000 ಜನಸಂಖ್ಯೆಗೆ ಒಂದು ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಸೃಜಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆ– 2024’ಕ್ಕೆ ವಿಧಾನಸಭೆ ಸೋಮವಾರ ಅಂಗೀಕಾರ ನೀಡಿತು.
ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಮಲೆನಾಡು ಪ್ರದೇಶಗಳಲ್ಲಿ ಪ್ರತಿ 18,000 ಜನಸಂಖ್ಯೆಗೆ ಒಂದು ಜಿಲ್ಲಾ ಪಂಚಾಯಿತಿ ಕ್ಷೇತ್ರವಿದೆ. ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ 18,000ದಿಂದ 25,000 ಜನಸಂಖ್ಯೆಗೆ ಒಂದು ಕ್ಷೇತ್ರಕ್ಕೆ ಅವಕಾಶವಿದೆ. ಈ ತಿದ್ದುಪಡಿ ಮೂಲಕ ಕೊಡಗು ಜಿಲ್ಲೆಯಲ್ಲಿ 18,000 ಜನಸಂಖ್ಯೆಗೆ ಒಂದು ಕ್ಷೇತ್ರ ಸೃಜಿಸಲು ಅವಕಾಶ ನೀಡಲಾಗುತ್ತಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಸೂದೆಯ ಕುರಿತು ವಿವರ ನೀಡಿದರು. ಧ್ವನಿಮತದ ಮೂಲಕ ಮಸೂದೆಗೆ ಅಂಗೀಕಾರ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.