ದಾವಣಗೆರೆ: ಚನ್ನಗಿರಿಯ ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಈಚೆಗೆ ಸುದ್ದಿಯಲ್ಲಿದ್ದಾರೆ. 13 ವರ್ಷಗಳ ಕಾಲ ಸಿದ್ಧಗಂಗಾ ಶ್ರೀಗಳ ಸೇವೆ ಸಲ್ಲಿಸಿದ ಹೆಮ್ಮೆ ಅವರದ್ದು. ಸಿದ್ಧಗಂಗಾ ಶ್ರೀಗಳ ಕ್ಷೌರ ಮಾಡುವುದರೊಂದಿಗೆ ಅವರ ಬಟ್ಟೆಯನ್ನೂ ಒಗೆದಿದ್ದರು. ಶ್ರೀಗಳಿಂದ ಧಾರ್ಮಿಕ ಸಂಸ್ಕಾರದ ಜತೆಗೆ ವಿದ್ಯೆ ದಾನವನ್ನೂ ಪಡೆದ ಹೆಗ್ಗಳಿಕೆ ಗುರುಬಸವ ಸ್ವಾಮೀಜಿ ಅವರದ್ದು.
ಸಿದ್ಧಗಂಗಾ ಶ್ರೀ ನಿಧನದ ನಂತರ ಅವರಿಗೆ ‘ಭಾರತ ರತ್ನ’ ಕೊಡಬೇಕೆಂಬ ಒತ್ತಾಯ, ಒತ್ತಡಗಳು ಹೆಚ್ಚಾಗಿದ್ದವು. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಘೋಷಿಸಿದ ಗೌರವ, ಪುರಸ್ಕಾರಗಳಲ್ಲಿ ಸಿದ್ಧಗಂಗಾ ಶ್ರೀಗಳ ಹೆಸರು ಇಲ್ಲ. ಈ ಹಿನ್ನೆಲೆಯಲ್ಲಿ ಗುರುಬಸವ ಸ್ವಾಮೀಜಿ ‘ಪ್ರಜಾವಾಣಿ’ ಜತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
* ಸಿದ್ಧಗಂಗಾ ಶ್ರೀಗಳಿಗೆ ಸರ್ಕಾರ ‘ಭಾರತ ರತ್ನ’ ಕೊಡಬೇಕಾಗಿತ್ತು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?
–ಶ್ರೀಗಳಿಗೆ ‘ಭಾರತ ರತ್ನ’ ಕೊಡಬೇಕು, ನಿಜ. ಆದರೆ, ಅದನ್ನು ಕಾಡಿ, ಬೇಡಿ ತೆಗೆದುಕೊಳ್ಳುವುದರಲ್ಲಿ ಅರ್ಥವಿಲ್ಲ. ಸಹಜವಾಗಿಯೇ ಅದು ಬರಬೇಕು. ಸಿದ್ಧಗಂಗಾ ಶ್ರೀಗಳು ಎಂತಹ ಸೇವೆ ಮಾಡಿದ್ದಾರೆ ಎಂಬುದು ಇಡೀ ದೇಶಕ್ಕೆ ಗೊತ್ತಿರುವಂತಹದ್ದು. ಪ್ರತಿಭಟನೆಗಳನ್ನು ಮಾಡಿ, ಒತ್ತಡ ಹೇರಿ ಪಡೆಯುವುದರಲ್ಲಿ ಅರ್ಥವೇ ಇಲ್ಲ. ಅವರು ‘ಭಾರತ ರತ್ನ’ ಅಷ್ಟೇ ಅಲ್ಲ, ಇಡೀ ವಿಶ್ವಕ್ಕೆ ರತ್ನ. ವಿಶ್ವದಲ್ಲಿ ಯಾರಿಗೂ ಕಡಿಮೆ ಇಲ್ಲದಂತಹ ಸೇವೆ ಮಾಡಿದ್ದಾರೆ.
ಕೊಡಬೇಕಾಗಿತ್ತು ಎನ್ನುವುದು ಜನಗಳ ಅಪೇಕ್ಷೆ. ಆದರೆ, ಅದು ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರ. 25 – 30 ವರ್ಷಗಳಿಂದ ಅವರಿಗೆ ‘ಭಾರತ ರತ್ನ’ ಕೊಡಬೇಕು ಎಂಬ ಕೂಗು ಇತ್ತು. ಲಕ್ಷಾಂತರ ಜನ ಹಕ್ಕೊತ್ತಾಯ ಮಾಡಿದ್ದರು. ಹೋರಾಟ, ಪ್ರತಿಭಟನೆ, ಜಾಥಾ ನಡೆಸಿದ್ದರು. ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳು ಆಂದೋಲನ ಮಾಡಿದ್ದವು.
ಸಿದ್ಧಗಂಗಾ ಶ್ರೀಗಳು ಪ್ರಶಸ್ತಿ, ಗೌರವಗಳನ್ನು ಮೀರಿ ಬೆಳೆದಿದ್ದಾರೆ. ‘ಭಾರತ ರತ್ನ’ ಕೊಟ್ಟರೆ, ಆ ‘ಭಾರತ ರತ್ನ’ಕ್ಕೇ ಗೌರವ ಬಿಟ್ಟರೆ ಇವರಿಗೆ ಗೌರವ ಅಲ್ಲ. ಸ್ವಾಮೀಜಿ ಇಷ್ಟೆಲ್ಲಾ ಕೆಲಸ ಮಾಡಿದ್ದಾರೆ, ಸರ್ಕಾರ ಗುರುತಿಸಿಲ್ಲ ಎಂಬ ಭಾವನೆ ಭಕ್ತರಲ್ಲಿ ಸಹಜವಾಗಿ ಇರುತ್ತದೆ. ಆದರೆ, ಈಗಿನ ವಾತಾವರಣ ನೋಡಿದರೆ ಗೌರವಕ್ಕಾಗಿ ನಾವು ಬೇಡುತ್ತಿದ್ದೇವೆನೋ ಅನ್ನಿಸುತ್ತಿದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಕೊಟ್ಟರೆ ಎಲ್ಲರಿಗೂ ಖುಷಿ. ಈಗ ಗುರುತಿಸುವಲ್ಲಿ ನಿಧಾನ ಆಗಿರಬಹುದು. ಒಂದಲ್ಲ, ಒಂದು ದಿವಸ ಬರುತ್ತದೆ.
* ಧಾರ್ಮಿಕ ಬೋಧನೆ ಜತೆಗೆ ಸಮಾಜ ಸೇವೆ ಏಕೆ ಮಾಡಬೇಕು ಅನ್ನಿಸಿತು ನಿಮಗೆ?
–ಜಗತ್ತಿಗೆ ಬಂದ ಎಲ್ಲರೂ ಬದುಕುತ್ತಾರೆ, ಹೋಗುತ್ತಾರೆ. ಆದರೆ, ನಾನು ಏನು ಎಂಬ ಪ್ರಶ್ನೆ ಬಂದಾಗ, ಈ ಜಗತ್ತಿಗೆ ನನ್ನಿಂದ ಯಾವುದೋ ಒಂದು ಸೇವೆ ಕೊಡಬೇಕು ಎನ್ನುವ ದೃಷ್ಟಿಯಿಂದ ಸಮಾಜಸೇವೆಗೆ ಬಂದೆ. ನಮ್ಮ ಮಿತಿ ಒಳಗೆ ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯ ಕೆಲಸಗಳನ್ನು ಪ್ರತಿಯೊಬ್ಬ ಮನುಷ್ಯನೂ ಮಾಡಬೇಕು.
* ರಾಜ್ಯದಲ್ಲಿ ಸಾಕಷ್ಟು ಮಠ, ಮಾನ್ಯಗಳಿವೆ. ಆದರೆ, ಸ್ವಾಮೀಜಿ ಆಗಲು ಸ್ವಯಂ ಇಚ್ಛೆಯಿಂದ ಬರುವವರ ಸಂಖ್ಯೆ ಕಡಿಮೆಯಾಗಿದೆಯೇ?
–ಒಳ್ಳೆಯವರು ಸಿಗುವುದಿಲ್ಲ ಎನ್ನುವುದಕ್ಕಿಂತಲೂ, ಒಳ್ಳೆಯವರನ್ನು ನಾವು ಆಯ್ಕೆ ಮಾಡುತ್ತಿಲ್ಲ ಎಂದು ಹೇಳುವುದು ಹೆಚ್ಚು ಸೂಕ್ತ. ಎಂತಹ ವ್ಯವಸ್ಥೆಯಲ್ಲೂ ಒಳ್ಳೆಯವರು ಇದ್ದೇ ಇರುತ್ತಾರೆ. ಆಯ್ಕೆ ಮಾಡುವ ವಿಧಾನದಲ್ಲಿ ಏರುಪೇರು ಆಗಿರುತ್ತವೆ. ಯಾರೋ ಒಬ್ಬರು ಮಠಾಧೀಶರು ಅವ್ಯವಸ್ಥೆ ಮಾಡಿದಾಕ್ಷಣ ಇಡೀ ಸ್ವಾಮೀಜಿಗಳ ಸಮೂಹವನ್ನು ಒಂದೇ ತಕ್ಕಡಿಯಲ್ಲಿ ತೂಗುವುದು ತಪ್ಪಾಗುತ್ತದೆ. ಎಲ್ಲರೂ ತಮ್ಮ ತಮ್ಮ ವೈಯಕ್ತಿಕ ಗೌರವ, ಸ್ಥಾನ–ಮಾನಗಳನ್ನು ಕಾಪಾಡಿಕೊಳ್ಳಲು ಸಹಜವಾಗಿಯೇ ಪ್ರಯತ್ನಿಸುತ್ತಿರುತ್ತಾರೆ. ಒಬ್ಬರು–ಇಬ್ಬರು ಆ ರೀತಿ ಇರಬಹುದು.
* ಮನುಷ್ಯ ಹೆಚ್ಚು, ಹೆಚ್ಚು ಆಧುನಿಕವಾಗುತ್ತಲೇ ಜಾತಿ, ಧರ್ಮಗಳ ಸಂಕೋಲೆಗಳಲ್ಲಿ ಸಿಲುಕುವ ಅನಿವಾರ್ಯತೆ ಸೃಷ್ಟಿಯಾಗಿದೆಯೇ?
–ಮಾರ್ಗ ಯಾವುದೇ ಇರಲಿ ಹೇಗಾದರೂ ಮಾಡಿ ಬೆಳೆಯಬೇಕೆಂಬ ದುರಾಸೆ. ಸ್ವಾರ್ಥ ಹೆಚ್ಚಾಗಿದೆ. ಸಂಸ್ಕಾರದ ಕೊರತೆಯಿಂದ ಜಾತಿಯ ಭಾವನೆ ಮನುಷ್ಯನಿಗೆ ಸಹಜವಾಗಿ ಬರುತ್ತದೆ. ಧರ್ಮದ ಮುಖಂಡ ತಾನು ಯಾವುದೇ ಧರ್ಮಕ್ಕೆ ಸೇರಿದ್ದರೂ ಎಲ್ಲರನ್ನು ಸಮಾನವಾಗಿ ಕಾಣುವ ದೃಷ್ಟಿಕೋನ ಹೊಂದಿರಬೇಕು. ಅಂತಹವರು ಮಾತ್ರ ಧಾರ್ಮಿಕ ನೇತಾರರಾಗಲು ಆಗಲು ಸಾಧ್ಯ. ಜಾತಿ, ಕೋಮು, ವರ್ಗಕ್ಕೆ ಸೀಮಿತರಾಗದೆ; ಗಾಳಿ ಎಲ್ಲರಿಗೂ ಹೇಗೆ ಬೀಸುತ್ತದೆಯೋ ಹಾಗೆ, ಬೆಳಕು ಹೇಗೆ ಬೆಳಗುತ್ತದೆಯೋ ಹಾಗೆ, ಧಾರ್ಮಿಕ ಮುಖಂಡರು ಎಲ್ಲರಿಗೂ ಮಾರ್ಗದರ್ಶನ ಮಾಡಿದರೆ ಅವರೇ ನಾಯಕರು, ನೇತಾರರು ಆಗುತ್ತಾರೆ.
* ಆಹಾರ ಪದ್ಧತಿಯಿಂದಲೇ ಮನುಷ್ಯನನ್ನು ದ್ವೇಷಿಸುವ, ದೂರ ಇಡುವ ಪ್ರಕರಣಗಳು ಈಗ ಹೆಚ್ಚುತ್ತಿರುವ ಬಗ್ಗೆ?
–ಮನುಷ್ಯ ಹುಟ್ಟುತ್ತಲೇ ಯಾವುದೇ ಆಹಾರ ಪದ್ಧತಿಯನ್ನು ಅನುಸರಿಸುತ್ತ ಬಂದಿರುವುದಿಲ್ಲ. ಅವರವರ ಅನುಕೂಲಕ್ಕಾಗಿ ತಕ್ಕ ಹಾಗೆ ಅದನ್ನು ರೂಢಿಸಿಕೊಂಡು ಬರಲಾಗುತ್ತದೆ. ಮನುಷ್ಯನನ್ನು ಗೌರವಿಸಲು ಅವನ ನೀತಿ, ನಿಯಮ, ಪ್ರೀತಿಗಳೇ ನಮಗೆ ಮುಖ್ಯವಾಗಬೇಕೇ ವಿನಾ ಆಹಾರ ಪದ್ಧತಿ ಅಲ್ಲ. ಮನುಷ್ಯನಿಗೆ ವಿವೇಚನೆ ಇರುವುದರಿಂದ ತಾನು ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಅರಿವು ಅವನಿಗಿರಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.