ಕಾರವಾರ: ನಗರದ ಕೆಎಚ್‌ಬಿ ಕಾಲೊನಿಯ ಮನೆಯೊಂದರಲ್ಲಿ, ಪಾರ್ಶ್ವವಾಯು ಪೀಡಿತ ವ್ಯಕ್ತಿಯು ತಮ್ಮ ಪತ್ನಿಯ ಮೃತದೇಹದೊಂದಿಗೆ ಐದು ದಿನಗಳನ್ನು ಕಳೆದಿದ್ದಾರೆ!
ಪತಿಯ ಹಾಸಿಗೆ ಪಕ್ಕದ ಕುರ್ಚಿಯಲ್ಲಿ ಕುಳಿತಿದ್ದ ಪತ್ನಿ ಗಿರಿಜಾ ಮಡಿವಾಳ (45) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರ ಪತಿ ಆನಂದು ಮಡಿವಾಳ (60) ಪಾರ್ಶ್ವವಾಯು ಪೀಡಿತರಾಗಿದ್ದು, ಮೇಲೇಳಲೂ ಆಗದು. ಹೀಗಾಗಿ, ಪತ್ನಿಯ ಶವ ಪಕ್ಕದಲ್ಲೇ ಇದ್ದರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿ ಅವರದಾಗಿತ್ತು. ಇದರೊಂದಿಗೆ ಮನೆಯಲ್ಲಿ ಬೇರೆ ಯಾರೂ ಇಲ್ಲದ ಕಾರಣ ವಿಷಯ ಯಾರಿಗೂ ತಿಳಿದಿರಲೇ ಇಲ್ಲ.
‘ಕರೆ ಸ್ವೀಕರಿಸದ ಅಕ್ಕ’: ಗಿರಿಜಾ ಮನೆಗೆಲಸ ಮಾಡಿ ಸಿಗುತ್ತಿದ್ದ ಅಲ್ಪ ಆದಾಯದಲ್ಲೇ ಕುಟುಂಬ ನಿರ್ವಹಿಸಿ, ಪತಿಯ ಆರೈಕೆಯನ್ನೂ ಮಾಡುತ್ತಿದ್ದರು. ಅವರ ತಮ್ಮ ಹೊನ್ನಾವರದ ಸುಬ್ರಹ್ಮಣ್ಯ ಮಡಿವಾಳ ಪ್ರತಿದಿನ ಕರೆಮಾಡಿ ಅವರ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿದ್ದರು. ಆದರೆ, ಮೂರು ದಿನಗಳಿಂದ ಪದೇ ಪದೇ ಕರೆ ಮಾಡಿದರೂ ಅವರ ಅಕ್ಕ ಕರೆ ಸ್ವೀಕರಿಸಿರಲಿಲ್ಲ. ಅದರ ನಂತರ ಮೊಬೈಲ್ ಸ್ವಿಚ್ಡ್ ಆಫ್ ಎಂಬ ಸಂದೇಶ ಬಂದಿದೆ.
ಇದರಿಂದ ಅನುಮಾನಗೊಂಡ ಅವರು, ಭಾನುವಾರ ಬಿಡುವು ಮಾಡಿಕೊಂಡು ನಗರಕ್ಕೆ ಬಂದಿದ್ದರು. ಈ ವೇಳೆ ಮನೆಯ ಬಾಗಿಲು ಮುಚ್ಚಿತ್ತು. ಅಕ್ಕಪಕ್ಕದವರನ್ನು ವಿಚಾರಿಸಿದರೂ ಅಕ್ಕನ ಬಗ್ಗೆ ಸುಳಿವು ಸಿಗದೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದರು.
ನಂತರ ಸ್ಥಳಕ್ಕೆ ಬಂದ ಪೊಲೀಸರು, ಮನೆಯ ಹೆಂಚುಗಳನ್ನು ತೆಗೆದು ಒಳಹೊಕ್ಕಾಗ ಗಿರಿಜಾ ಕುರ್ಚಿಯಲ್ಲೇ ಮೃತಪಟ್ಟಿರುವುದು ಗೊತ್ತಾಯಿತು. ಕುಳಿತ ಸ್ಥಿತಿಯಲ್ಲೇ ಇದ್ದ ಅವರ ಶವ ಕೊಳೆತು ಹುಳಗಳು ಹರಿದಾಡುತ್ತಿದ್ದವು. ಪಕ್ಕದ ಮಂಚದಲ್ಲಿ ಆನಂದು ಮಡಿವಾಳ ಅಸಹಾಯಕರಾಗಿ ಮಲಗಿಕೊಂಡಿದ್ದರು.
ಪತಿಗೆ ಚಿಕಿತ್ಸೆ: ಐದು ವರ್ಷಗಳ ಹಿಂದೆಯೇ ಪಾರ್ಶ್ವವಾಯುವಿಗೀಡಾದ ಆನಂದು, ಎರಡು ವರ್ಷಗಳಿಂದ ಮಾತನಾಡದ ಹಾಗೂ ಎದ್ದು ನಡೆಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ. ಪತ್ನಿಯ ಸಾವಿನಿಂದ ಪತಿ ಆಘಾತಕ್ಕೀಡಾಗಿದ್ದು, ಐದು ದಿನಗಳಿಂದ ಅನ್ನ– ನೀರು ಇಲ್ಲದೇ ನಿತ್ರಾಣಗೊಂಡಿದ್ದಾರೆ. ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು, ಪೌರಕಾರ್ಮಿಕರ ಸಹಾಯದಿಂದ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ನಗರಸಭೆಯ ಕಸ ಸಾಗಿಸುವ ವಾಹನದಲ್ಲಿ ಶವಾಗಾರಕ್ಕೆ ಸಾಗಿಸಲಾಯಿತು.
ಬಡ ಕುಟುಂಬ:ಗಿರಿಜಾ ಹಾಗೂ ಆನಂದು ದಂಪತಿಯದ್ದು ಬಡ ಕುಟುಂಬ. ಕಾರವಾರ ತಾಲ್ಲೂಕಿನ ಕಣಸಗಿರಿಯವರಾಗಿದ್ದ ಆನಂದು, ಹೊನ್ನಾವರದ ಗಿರಿಜಾ ಅವರನ್ನು ಮದುವೆಯಾಗಿದ್ದರು. ಬಳಿಕ ಕೆಲವು ವರ್ಷಗಳಿಂದ ನಗರದ ಕೆಎಚ್‌ಬಿ ಕಾಲೊನಿಯ ಹರಿ ಓಂ ವೃತ್ತದ ಬಳಿಯ ಗುಡಿಸಲಿನಂಥ ಮನೆಯಲ್ಲಿ ವಾಸಿಸುತ್ತಿದ್ದರು. ಅವರಿಗೆ ಮಕ್ಕಳಿಲ್ಲ ಎಂದು ತನಿಖೆ ನಡೆಸುತ್ತಿರುವ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.