ADVERTISEMENT

ದೇವೇಗೌಡ ಸ್ಪರ್ಧೆಗೆ ತೀವ್ರ ವಿರೋಧ: ಪರಮೇಶ್ವರ ತುರ್ತು ಸಭೆ

ದೇವೇಗೌಡರು ಸ್ಪರ್ಧಿಸಿದರೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾದರೂ ಸರಿ ನಾನೂ ನಾಮಪತ್ರ ಸಲ್ಲಿಸುತ್ತೇನೆ: ರಾಜಣ್ಣ

​ಪ್ರಜಾವಾಣಿ ವಾರ್ತೆ
Published 2 ಮೇ 2019, 10:41 IST
Last Updated 2 ಮೇ 2019, 10:41 IST
ಎಚ್‌.ಡಿ. ದೇವೇಗೌಡ(ಎಡಚಿತ್ರ). ಸಂಸದ ಮುದ್ದಹನುಮೇಗೌಡ ಅವರು ತೋಟದ ಮನೆಯಲ್ಲಿ ಕರೆದ ಹಿತೈಷಿಗಳ ಸಭೆಯಲ್ಲಿ ಮಾತನಾಡಿದರು– ಪ್ರಜಾವಾಣಿ ಚಿತ್ರ
ಎಚ್‌.ಡಿ. ದೇವೇಗೌಡ(ಎಡಚಿತ್ರ). ಸಂಸದ ಮುದ್ದಹನುಮೇಗೌಡ ಅವರು ತೋಟದ ಮನೆಯಲ್ಲಿ ಕರೆದ ಹಿತೈಷಿಗಳ ಸಭೆಯಲ್ಲಿ ಮಾತನಾಡಿದರು– ಪ್ರಜಾವಾಣಿ ಚಿತ್ರ   

ತುಮಕೂರು: ತುಮಕೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದರಿಂದ ಹಾಲಿ ಸಂಸದ ಎಸ್.ಪಿ ಮುದ್ದಹನುಮೇಗೌಡ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಜಿಲ್ಲೆಯ ಕಾಂಗ್ರೆಸ್ ಮುಖಂಡರ ಜೊತೆ ತುರ್ತು ಸಭೆ ನಡೆಸಿದರು.

ಪಕ್ಷದ ಕಚೇರಿ ಬದಲು ಖಾಸಗಿ ಹೊಟೇಲ್‌ನಲ್ಲಿ ನಡೆದ ಸಭೆಗೆ ಮುದ್ದಹನುಮೇಗೌಡರು ಭಾಗಿಯಾಗಿಲ್ಲ. ಬದಲಾಗಿ ಪರಮೇಶ್ವರ ಕ್ಷೇತ್ರವಾದ ಕೊರಟಗೆರೆಯಲ್ಲಿ ಅವರು ಬೆಂಬಲಿಗರ ಸಭೆ ನಡೆಸುತ್ತಿದ್ದಾರೆ.ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರೂ ಸಭೆಗೆ ಗೈರಾಗಿದ್ದರು.

ಮಾಜಿ ಸಚಿವ ಟಿ.ಬಿ ಜಯಚಂದ್ರ, ಮಾಜಿ ಶಾಸಕರಾದ ಕೆ.ಷಡಕ್ಷರಿ, ರಫೀಕ್ ಅಹಮ್ಮದ್, ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಕೆ.ಇ.ರಾಧಾಕೃಷ್ಣ, ಷಫೀ ಅಹಮ್ಮದ್, ಸಂತೋಷ ಜಯಚಂದ್ರ, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ರಾಮಕೃಷ್ಣ ಸೇರಿದಂತೆ ಇತರರು ಭಾಗವಹಿಸಿದ್ದಾರೆ.

ADVERTISEMENT

ಬಿಜೆಪಿ ವಿರುದ್ಧ ಹೋರಾಟಕ್ಕೆ ದೇವೇಗೌಡ ಬೆಂಬಲಿಸಿ: ಡಾ.ಪರಮೇಶ್ವರ
ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಎಚ್.ಡಿ.ದೇವೇಗೌಡ ಅವರು ಸೋಮವಾರ ನಾಮಪತ್ರ ಸಲ್ಲಿಸಲಿದ್ದು, ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಸ್ಪರ್ಧಿಸದೇ ಇದ್ದಿದ್ದರೆ ಈ ಕ್ಷೇತ್ರ ನಮಗೆ ಬಿಟ್ಟುಕೊಡಿ ಎಂದು ಕೇಳುತ್ತಿದ್ದೇವು. ಈಗಾಗಲೇ ಮುದ್ದಹನುಮೇಗೌಡರೊಂದಿಗೇ ತೆರಳಿ ದೇವೇಗೌಡರಿಗೆ ಮನವಿ ಮಾಡಿದ್ದೇನೆ. ಆದರೆ, ಕಣಕ್ಕೆ ಇಳಿಯುತ್ತಿರುವುದರಿಂದ ಬೆಂಬಲಿಸುವುದು ಅನಿವಾರ್ಯ. ಒಟ್ಟಾರೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದು ಪ್ರಮುಖ ಗುರಿಯಾಗಿದೆ ಎಂದು ಪರಮೇಶ್ವರ ಸುದ್ದಿಗಾರರಿಗೆ ತಿಳಿಸಿದರು.

ಸಭೆಯಲ್ಲಿ ಡಾ.ಪರಮೇಶ್ವರ ಮಾತನಾಡಿದರು

ಹಾಲಿ ಸಂಸದ ಮುದ್ದಹನುಮೇಗೌಡರಿಗೆ ನೋವಾಗಿದೆ ನಿಜ. ಅದರೆ, ಮೈತ್ರಿ ಧರ್ಮ ಪಾಲನೆಗೆ ಸಹಕಾರ ಅನಿವಾರ್ಯ. ಅವರನ್ನು ಪಕ್ಷ ಕಡೆಗಣಿಸಿಲ್ಲ. ಅವರಿಗೆ ಸೂಕ್ತ ಸ್ಥಾನಮಾನ ನೀಡಿ ಗೌರವದಿಂದ ನಡೆಸಿಕೊಳ್ಳಲಿದೆ ಎಂದು ಹೇಳಿದರು.

ಮುದ್ದಹನುಮೇಗೌಡರು ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ. ಕೆ.ಎನ್.ರಾಜಣ್ಣ ಅವರೂ ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ. ಅವರ ಮನವೊಲಿಸುತ್ತೇನೆ ಎಂದರು.

ಮುದ್ದಹನುಮೇಗೌಡರ ಬೆಂಬಲಿಗರ ಆಕ್ರೋಶ
ಎಚ್.ಡಿ.ದೇವೇಗೌಡ ನಾಮಪತ್ರ ಸಲ್ಲಿಕೆ ವೇಳೆ ಎಲ್ಲರೂ ಪಾಲ್ಗೊಂಡು ಬೆಂಬಲಿಸಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಮಾಡಿದ ಮನವಿಗೆ ಹಾಲಿ ಸಂಸದರ ಬೆಂಬಲಿಗರು ಅಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಯುವ ಮುಖಂಡ ರಾಯಸಂದ್ರ ರವಿಕುಮಾರ ಸೇರಿದಂತೆ ಇತರರು ಸಭೆಯಿಂದ ಹೊರ ನಡೆದರು. ಹಾಲಿ ಸಂಸದರಿಗೆ ಟಿಕೆಟ್ ತಪ್ಪಿಸಲಾಗಿದೆ. ಕಾರಣವಿಲ್ಲದೆ ಕ್ಷೇತ್ರ ಬಿಟ್ಟುಕೊಡಲಾಗಿದೆ. ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಈ ಕ್ಷೇತ್ರದಲ್ಲಿ ಬಿಜೆಪಿ ಸೋಲಿಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಮುದ್ದಹನುಮೇಗೌಡರಿಗೆ ಟಿಕೆಟ್ ಕೊಡಬೇಕು. ಅವರೇ ಅಭ್ಯರ್ಥಿಯಾಗಬೇಕು ಎಂದು ಆಗ್ರಹಿಸಿದರು.

ನಾಳೆ ಕೆ.ಎನ್.ರಾಜಣ್ಣ ನಾಮಪತ್ರ ಸಲ್ಲಿಕೆ
ದೇವೇಗೌಡರು ಸ್ಪರ್ಧಿಸಿದರೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾದರೂ ಸರಿ ನಾನೂ ನಾಮಪತ್ರ ಸಲ್ಲಿಸುತ್ತೇನೆ ಎಂದು ಚುನಾವಣೆ ಘೋಷಣೆ ಮುನ್ನವೇ ಹೇಳಿಕೆ ನೀಡಿದ್ದ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಭಾನುವಾರ ಆ ಹೇಳಿಕೆ ಪುನರುಚ್ಛರಿಸಿದ್ದಾರೆ.

ಶನಿವಾರವಷ್ಟೇ ಸಂಸದ ಮುದ್ದಹನುಮೇಗೌಡರ ಹಿತೈಷಿಗಳ ಸಭೆಯಲ್ಲಿ ಭಾಗವಹಿಸಿದ್ದ ರಾಜಣ್ಣ ಅವರು ಮುದ್ದಹನುಮೇಗೌಡರಿಗೆ ಬೆಂಬಲ ಸೂಚಿಸಿದ್ದರು. ನಾನು ನಿಂತರೂ ಅಷ್ಟೇ. ಮುದ್ದಹನುಮೇಗೌಡರು ನಿಂತರೂ ಅಷ್ಟೇ. ಅವರಿಗೆ ಬೆಂಬಲಿಸುತ್ತೇನೆ ಎಂದಿದ್ದರು. ಭಾನುವಾರ ಬೆಳಿಗ್ಗೆ ಮತ್ತೆ ನೀಡಿದ ಹೇಳಿಕೆಯಲ್ಲಿ ಸೋಮವಾರ ಬೆಳಿಗ್ಗೆ 11ಕ್ಕೆ ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ.

ಹೈಕಮಾಂಡ್ ಒಂದು ವೇಳೆ ಒತ್ತಡ ಹೇರಿ ಮುದ್ದಹನುಮೇಗೌಡರು ನಾಮಪತ್ರ ಸಲ್ಲಿಕೆಯಿಂದ ಹಿಂದೆ ಸರಿದರೂ ದೇವೇಗೌಡರಿಗೆ ಸ್ಪರ್ಧಿಯಾಗಿ ಕಣದಲ್ಲಿರುವುದು ರಾಜಣ್ಣ ಅವರ ಉದ್ದೇಶ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.