ADVERTISEMENT

ಸರ್ಕಾರದ ಅಭದ್ರತೆ ಬಗ್ಗೆ ಅಧಿಕಾರಿಗಳು ಚರ್ಚೆ ಮಾಡೋದು ಬೇಡ: ಡಿಸಿಎಂ ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 8:54 IST
Last Updated 12 ಜೂನ್ 2019, 8:54 IST
   

ಬೆಂಗಳೂರು: ರಾಜ್ಯ ಸರಕಾರ ಅಭದ್ರವಾಗಿದೆ ಎಂದು ಅಧಿಕಾರಿಗಳು ತಮಾಷೆಯಾಗಿಯೂ ಸಹ ಚರ್ಚೆ ಮಾಡಬಾರದು ಎಂದುಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.

ಸರಕಾರವನ್ನು ಭದ್ರವಾಗಿ ಇಟ್ಟುಕೊಳ್ಳುವ ಬಗ್ಗೆ ನಾವು ನೋಡಿಕೊಳ್ಳುತ್ತೇವೆ. ಆ ವಿಷಯ ಅಧಿಕಾರಿಗಳಿಗೆ ಬೇಕಿಲ್ಲ. ಈ ಬಗ್ಗೆ ನೀವು ಚರ್ಚೆ ಮಾಡಿದರೆ ಸುಲಲಿತ ಆಡಳಿತ ನೀಡಲು ಸಾಧ್ಯವಾಗುವುದಿಲ್ಲ ಎಂದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿಗಳು ಕರೆದಿದ್ದ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಮ್ಮೇಳನ ಸಭೆಯಲ್ಲಿ ಮಾತನಾಡಿದರು.

ADVERTISEMENT

ಸರಕಾರ ಸುಭದ್ರವಾಗಿಲ್ಲ ಎಂದು ಅಧಿಕಾರಿಗಳು ಚರ್ಚೆ ಮಾಡುತ್ತಿರುವ ಬಗ್ಗೆ ಗಮನಿಸಿದ್ದೇನೆ. ಈ ಬೆಳವಣಿಗೆ ಸರಿಯಲ್ಲ. ಈ ಬಗ್ಗೆ ಅಧಿಕಾರಿಗಳು ತಲೆಕೆಡಿಸಿಕೊಳ್ಳದೇ ಕೆಲಸ ಮಾಡುವಂತೆ ಸೂಚನೆ ನೀಡಿದರು.

ರಾಜ್ಯದಲ್ಲಿ ಶೇ.90 ರಷ್ಟು ಜನ ಬಿಪಿಎಲ್‌ಪಡಿತರ ಚೀಟಿ ಹೊಂದಿದ್ದಾರೆ. ಅಭಿವೃದ್ಧಿಶೀಲ ರಾಜ್ಯವಾದ ಕರ್ನಾಟಕದಲ್ಲಿ ಇಷ್ಟು ಪ್ರಮಾಣದ ಬಡವರು ಇದ್ದಾರಾ? ಐಟಿಬಿಟಿ ಸಿಟಿ ಎಂದೇ ನಮ್ಮ ರಾಜ್ಯ ಖ್ಯಾತಿ ಹೊಂದುತ್ತಿದೆ. ಹೀಗಿರುವಾಗ ಇಷ್ಟು ಪ್ರಮಾಣದ ಬಡವರು ಇರಲು ಹೇಗೆ ಸಾಧ್ಯ? ಇಲಾಖೆ ಯಾವ ಮಾನದಂಡದಲ್ಲಿ ಬಿಪಿಎಲ್‌ ಕಾರ್ಡ್‌ ವಿತರಿಸುತ್ತಿದೆ ಎಂದು ಪ್ರಶ್ನಿಸಿದರು.

ಬಿಪಿಎಲ್‌ ಕಾರ್ಡ್‌ ನೀಡುವ ಮಾನದಂಡ ಹಾಗೂ ಕಾರ್ಡ್‌ ವಿತರಣೆ ಬಗ್ಗೆ ಮರುಪರಿಶೀಲನೆ ಮಾಡುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು.

ರಾಜ್ಯ ಸರಕಾರ ರೈತರ ನೆರವಿಗೆ ಧಾವಿಸಿ ಸಾಲಮನ್ನಾ ಮಾಡಿದೆ. ಈ ಫಲ ರೈತರಿಗೆ ತಲುಪಿಸುವಲ್ಲಿ ಅಧಿಕಾರಿಗಳ ಪಾತ್ರ ದೊಡ್ಡದಿದೆ. ನೀವು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿದರೆ ಮಾತ್ರ ಸರಕಾರದ ಈ ಕ್ರಮ ರೈತರಿಗೆ ಮುಟ್ಟಲು ಸಾಧ್ಯ. ಅದೇ ರೀತಿ ಮನೆ ನಿರ್ಮಾಣ, ಗಂಗಾಕಲ್ಯಾಣ ಯೋಜನೆ ಸೇರಿದಂತೆ ಆದ್ಯತಾ ಯೋಜನೆಗಳು ಶೀಘ್ರವಾಗಿ ಜನರಿಗೆ ತಲುಪುವ ವ್ಯವಸ್ಥೆ ಆಗಬೇಕು ಎಂದು ಹೇಳಿದರು.

ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.