ಬೆಂಗಳೂರು: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ 23 ವರ್ಷದ ಯುವಕ (ವಿಚಾರಣಾಧೀನ ಕೈದಿ), ಸಂತ್ರಸ್ತೆಯನ್ನು ಮದುವೆಯಾಗಲು ನಿಶ್ಚಯಿಸಿರುವುದರಿಂದ ಆರೋಪಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.
ಈ ಸಂಬಂಧ ಜಾಮೀನು ಕೋರಿ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮನ್ನಿಸಿದ್ದು, ‘ಈ ಪ್ರಕರಣದಲ್ಲಿ ಮಗು, ಸಂತ್ರಸ್ತೆಯ ಹಿತ ರಕ್ಷಿಸಬೇಕಿರುವ ಕಾರಣ ಮತ್ತು ಮಗುವಿಗೆ ಭವಿಷ್ಯದಲ್ಲಿ ಯಾವುದೇ ರೀತಿಯ ತೊಂದರೆ ಆಗಬಾರದು’ ಎಂಬ ಅಭಿಪ್ರಾಯದೊಂದಿಗೆ ಜಾಮೀನು ಮಂಜೂರು ಮಾಡಿದೆ.
‘ಆರೋಪಿಯು ಸಂತ್ರಸ್ತೆಯನ್ನು ಮದುವೆಯಾಗಿ ಜುಲೈ 3ರ ಸಂಜೆ ಹಿಂದಿರುಗಬೇಕು. ಜುಲೈ 4ರಂದು ವಿವಾಹ ನೋಂದಣಿ ಪತ್ರವನ್ನು ಕೋರ್ಟ್‌ಗೆ ಸಲ್ಲಿಸಬೇಕು. ಈ ನಡುವೆ ಸಂಬಂಧಿಸಿದ ಪೊಲೀಸ್ ಠಾಣೆಗೆ ವಾರಕ್ಕೊಮ್ಮೆ ಹಾಜರಾಗಬೇಕು. 2024ರ ಜೂನ್ 17ರಿಂದ ಅನ್ವಯವಾಗುವಂತೆ ಜುಲೈ 3ರವರೆಗೆ ಬಿಡುಗಡೆ ಮಾಡಬೇಕು’ ಎಂದು ಜೈಲಿನ ಅಧಿಕಾರಿಗಳಿಗೆ ಆದೇಶಿಸಿದೆ.
ಪ್ರಕರಣವೇನು?
‘ಆರೋಪಿಯು 2023ರಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ’ ಎಂದು ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಇದರ ಅನುಸಾರ ಯುವಕನ ವಿರುದ್ಧ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ದೂರು ದಾಖಲಿಸಿದ ದಿನದಿಂದ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದು ವಿಚಾರಣೆ ಎದುರಿಸುತ್ತಿದ್ದಾರೆ. ಏತನ್ಮಧ್ಯೆ, ಪ್ರಕರಣ ವಿಚಾರಣಾ ಕೋರ್ಟ್‌ನಲ್ಲಿ ವಿಚಾರಣೆಗೆ ಬಂದಾಗ ಪೋಷಕರು, ‘ಯುವಕ ಬಂಧನಕ್ಕೆ ಒಳಗಾಗುವ ದಿನದಂದು ಸಂತ್ರಸ್ತೆಗೆ 18 ವರ್ಷ ತುಂಬಿರಲಿಲ್ಲ. ಈಗ 18 ವರ್ಷ ತುಂಬಿದೆ. ಅವರಿಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆ. ಇದಕ್ಕೆ ನಮ್ಮ ಸಮ್ಮತಿಯೂ ಇದೆ. ಹೀಗಾಗಿ, ರಾಜಿ ಸಂಧಾನ ಪರಿಗಣಿಸಿ ಪ್ರಕರಣವನ್ನು ಮುಕ್ತಾಯಗೊಳಿಸಬೇಕು’ ಎಂದು ಕೋರಿದ್ದರು.
ಪೋಷಕರ ಮನವಿಯನ್ನು ಪರಿಗಣಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠವು, ‘ಬಾಲಕಿಯ ಮಗುವಿನ ಜೈವಿಕ ತಂದೆ ಬಗ್ಗೆ ಡಿಎನ್‌ಎ ವರದಿ ಸ್ಪಷ್ಟಪಡಿಸುತ್ತದೆ. ಸಂಕಷ್ಟದಲ್ಲಿರುವ ತಾಯಿ ಮತ್ತು ಮಗುವಿನ ಪರಿಸ್ಥಿತಿಯನ್ನು ಪರಿಗಣಿಸಿದರೆ, ಸಂತ್ರಸ್ತೆಯನ್ನು ಮದುವೆಯಾಗಲು ಯುವಕನಿಗೆ ಅನುಮತಿ ನೀಡಿ ಅವರಿಬ್ಬರ ಕುಟುಂಬಗಳ ಕಷ್ಟ ಪರಿಹರಿಸುವುದು ಸೂಕ್ತವಾಗಿದೆ. ಹಾಗಾಗಿ, ಈ ಮಧ್ಯಂತರ ಜಾಮೀನು ನೀಡಿ ಸಂತ್ರಸ್ತೆಯನ್ನು ಮದುವೆಯಾಗಲು ಅನುಮತಿ ನೀಡಲಾಗುತ್ತಿದೆ’ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.