ADVERTISEMENT

ಭಾರತದ ಭಾಗವನ್ನು ಪಾಕಿಸ್ತಾನ ಎನ್ನುವಂತಿಲ್ಲ: ಸುಪ್ರೀಂ ಕೋರ್ಟ್ ಚಾಟಿ

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಯ ಆಕ್ಷೇಪಾರ್ಹ ಹೇಳಿಕೆಗೆ ಸುಪ್ರೀಂ ಕೋರ್ಟ್ ಚಾಟಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2024, 16:16 IST
Last Updated 25 ಸೆಪ್ಟೆಂಬರ್ 2024, 16:16 IST
ನರೇಗಾ ಹಣ ನೀಡದ ಕೇಂದ್ರಕ್ಕೆ ಸುಪ್ರೀಂ ಚಾಟಿ
ನರೇಗಾ ಹಣ ನೀಡದ ಕೇಂದ್ರಕ್ಕೆ ಸುಪ್ರೀಂ ಚಾಟಿ   

ನವದೆಹಲಿ: ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ವಿ.ಶ್ರೀಶಾನಂದ ಆಕ್ಷೇಪಾರ್ಹ ಹೇಳಿಕೆಗಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠವು, ‘ಭಾರತದ ಭೂಪ್ರದೇಶದ ಯಾವುದೇ ಭಾಗವನ್ನು ಪಾಕಿಸ್ತಾನ ಎಂದು ಕರೆಯುವಂತಿಲ್ಲ. ಏಕೆಂದರೆ, ಅಂತಹ ಹೇಳಿಕೆ ಮೂಲಭೂತವಾಗಿ ರಾಷ್ಟ್ರದ ಪ್ರಾದೇಶಿಕ ಸಮಗ್ರತೆಗೆ ವಿರುದ್ಧ’ ಎಂದು ಅಭಿಪ್ರಾಯಪಟ್ಟಿತು. 

ವೈಯಕ್ತಿಕ ಪೂರ್ವಗ್ರಹಗಳು ತಮ್ಮ ಕರ್ತವ್ಯದಲ್ಲಿ ಪ್ರತಿಫಲಿಸದಂತೆ ವಕೀಲರು ಮತ್ತು ನ್ಯಾಯಮೂರ್ತಿಗಳು ಎಚ್ಚರ ವಹಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್. ಗವಾಯಿ, ಸೂರ್ಯಕಾಂತ್ ಹಾಗೂ ಹೃಷಿಕೇಶ್ ರಾಯ್ ಅವರಿದ್ದ ಪೀಠವು ಕಿವಿಮಾತು ಹೇಳಿತು.

ಸ್ತ್ರೀ ದ್ವೇಷ ಹರಡುವ ಅಥವಾ ನಿರ್ದಿಷ್ಟ ಲಿಂಗ ಅಥವಾ ಸಮುದಾಯಗಳ ಕುರಿತು ಪೂರ್ವಗ್ರಹ ಪೀಡಿತ ಹೇಳಿಕೆಗಳನ್ನು ನೀಡಬಾರದು ಎಂದೂ ತಾಕೀತು ಮಾಡಿತು. ಆದರೆ, ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಶ್ರೀಶಾನಂದ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ ಎಂಬುದನ್ನು ಗಮನಿಸಿದ ನ್ಯಾಯಪೀಠವು ಪ್ರಕರಣದ ಸ್ವಯಂಪ್ರೇರಿತ ವಿಚಾರಣೆಯನ್ನು ಮುಕ್ತಾಯಗೊಳಿಸಿತು.  

ADVERTISEMENT

‘ಇದು ಸಾಮಾಜಿಕ ಮಾಧ್ಯಮದ ಯುಗ. ಈ ಕಾಲಘಟ್ಟದಲ್ಲಿ ನ್ಯಾಯಾಧೀಶರ ಯಾವುದೇ ಅಭಿಪ್ರಾಯ ಅಥವಾ ಹೇಳಿಕೆ ವ್ಯಾಪಕ ಪರಿಣಾಮ ಬೀರುತ್ತದೆ. ನಕಾರಾತ್ಮಕ ಪ್ರಚಾರವು ನ್ಯಾಯಾಂಗ ವ್ಯವಸ್ಥೆ ಮೇಲೂ ಪರಿಣಾಮ ಬೀರುತ್ತದೆ. ಈ ಬಗ್ಗೆ ನ್ಯಾಯಾಧೀಶರು ಎಚ್ಚರಿಕೆ ವಹಿಸಬೇಕು. ಅವರು ತಮ್ಮ ಮನೋಧರ್ಮ ಅರಿತು ಕಾರ್ಯನಿರ್ವಹಿಸಬೇಕು. ಇದರಿಂದ ಅವರು ನಿಷ್ಪಕ್ಷಪಾತವಾಗಿ ನ್ಯಾಯ ನೀಡಬಹುದು’ ಎಂದು ಪೀಠ ತಿಳಿಸಿತು.

‘ಕಲಾಪವು ನ್ಯಾಯಾಲಯದ ಭೌತಿಕ ಎಲ್ಲೆ ಮೀರಿದ ಪ್ರೇಕ್ಷಕರನ್ನು ತಲುಪುತ್ತದೆ ಎಂಬುದನ್ನು ಎಲ್ಲ ಕಕ್ಷಿದಾರರು, ನ್ಯಾಯಾಧೀಶರು, ವಕೀಲರು ತಿಳಿದಿರಬೇಕು. ತಮ್ಮ ಅವಲೋಕನ ಅಥವಾ ಅಭಿಪ್ರಾಯದಿಂದ ಸಮಾಜದ ಮೇಲೆ ಬೀರುವ ವ್ಯಾಪಕ ಪ್ರಭಾವದ ಬಗ್ಗೆ ಎಲ್ಲರೂ ಅರಿತು ಕಾರ್ಯನಿರ್ವಹಿಸಬೇಕು’ ಎಂದು ಪೀಠ ಕಿವಿಮಾತು ಹೇಳಿತು. 

ಪ್ರಕರಣದ ಸಂಬಂಧ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ ಸಲ್ಲಿಸಿರುವ ವರದಿಯನ್ನು ಗಮನಿಸಿದ ಪೀಠವು, ‘ಹೈಕೋರ್ಟ್‌ ನ್ಯಾಯಮೂರ್ತಿ ಅವರು ಈ ಪ್ರಕರಣದಲ್ಲಿ ಪ್ರತಿವಾದಿಯಾಗಿಲ್ಲ. ಜತೆಗೆ, ಅವರು ತಮ್ಮ ಹೇಳಿಕೆ ಉದ್ದೇಶಪೂರ್ವಕ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಈ ವಿಷಯದಲ್ಲಿ ಪೀಠವು ಇನ್ನಷ್ಟು ಅಭಿಪ್ರಾಯಗಳನ್ನು ನೀಡುವುದಿಲ್ಲ. ನ್ಯಾಯದ ಹಿತಾಸಕ್ತಿ ಹಾಗೂ ನ್ಯಾಯಾಲಯದ ಘನತೆಯನ್ನು ಪರಿಗಣಿಸಿ ಈ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಲು ಒಲವು ಹೊಂದಿದೆ’ ಎಂದು ಹೇಳಿತು. 

ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ, ‘ನ್ಯಾಯಮೂರ್ತಿಯವರು ಕ್ಷಮೆಯಾಚಿಸಿರುವ ಕಾರಣ ಈ ಪ್ರಕರಣವನ್ನು ಇನ್ನಷ್ಟು ವಿಸ್ತರಿಸುವುದು ಬೇಡ. ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.