ಬೆಂಗಳೂರು: ‘ರಾಜ್ಯದ ಆರು ರಂಗಾಯಣಗಳಿಗೆ ನಿರ್ದೇಶಕರ ನೇಮಕದಲ್ಲಿ ಪಿತೃಪ್ರಧಾನ ಧೋರಣೆ ಎದ್ದು ಕಾಣುತ್ತಿದೆ’ ಎಂದು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಅಸಮಾಧಾನ ವ್ಯಕ್ತಪಡಿಸಿದೆ.
‘ಈ ಸ್ಥಾನಗಳಿಗೆ ಹಲವು ಮಹಿಳಾ ರಂಗಕರ್ಮಿಗಳೂ ಅರ್ಜಿ ಸಲ್ಲಿಸಿದ್ದರು. ನೇಮಕದಲ್ಲಿ ಮಹಿಳೆಯರಿಗೆ ಅರ್ಧದಷ್ಟು, ಕಡೆಗೆ ಶೇ 33ರಷ್ಟಾದರೂ ಪ್ರಾತಿನಿಧ್ಯ ದೊರೆಯುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ನೇಮಕಾತಿ ಪ್ರಕ್ರಿಯೆಯಲ್ಲಿ ಸರ್ಕಾರ ಲಿಂಗ ಸೂಕ್ಷ್ಮತೆಯನ್ನೇ ಕಳೆದುಕೊಂಡಿದೆ’ ಎಂದು ಒಕ್ಕೂಟದ ಪರವಾಗಿ ವಿಜ್ಞಾನಿ ಇ.ರತಿರಾವ್, ಸಾಹಿತಿಗಳಾದ ಪ್ರೊ.ಸಬಿಹಾ ಭೂಮಿಗೌಡ, ನಾ.ದಿವಾಕರ ಹಾಗೂ ವಕೀಲೆ ಸುಮನ.ಎಂ.ಎನ್ ಹೇಳಿದ್ದಾರೆ.
‘ರಂಗನಿರ್ದೇಶಕಿಯರಿಗೆ ಅವರ ಕ್ಷಮತೆ, ದಕ್ಷತೆ ಮತ್ತು ಪ್ರತಿಭೆಯನ್ನು ತೋರಿಸುವ ಅವಕಾಶವನ್ನು ನೀಡದಿದ್ದರೆ ಹೇಗೆ? ಅವರ ಕೌಶಲ ಮತ್ತು ಸಾಮರ್ಥ್ಯ ಸಮಾಜಕ್ಕೆ ತಿಳಿಯುವುದಾದರೂ ಹೇಗೆ? ಈ ನೇಮಕಾತಿಯಿಂದ ಮಹಿಳಾ ಸಮೂಹಕ್ಕೆ ನಿರಾಸೆಯಾಗಿದೆ. ಇದಕ್ಕೆ ನಮ್ಮ ವಿರೋಧವಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.