ಬಾಗಲಕೋಟೆ: ವಿಶ್ವ ಪಾರಂಪರಿಕ ತಾಣ ಪಟ್ಟದಕಲ್ಲಿನಲ್ಲಿ ಬಿರುಕು ಬಿಟ್ಟಿರುವ ಚಾಲುಕ್ಯರ ಕಾಲದ ವಿಜಯಸ್ತಂಭ ಹೋಳಾಗಿ ಕೆಳಗೆ ಬೀಳದಂತೆ ತಡೆಯಲು ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ಹಿತ್ತಾಳೆಯ ಬೃಹತ್ ಉಂಗುರವನ್ನು ಅಳವಡಿಸಿದೆ.
‘ಕಚೇರಿಯ ತಂತ್ರಜ್ಞರೇ ಉಂಗುರ ಅಳವಡಿಸಿದ್ದು, ಈಗ ವಿಜಯ ಸ್ತಂಭ ಬೀಳುವ ಅಪಾಯ ಇಲ್ಲ’ ಎಂದು ಭಾರತೀಯ ಪುರಾತತ್ವ ಇಲಾಖೆ ಧಾರವಾಡ ವೃತ್ತದ ಸೂಪರಿಟೆಂಡೆಂಟ್ ವಿಠ್ಠಲಎಸ್. ಬಡಿಗೇರ ‘ಪ್ರಜಾವಾಣಿ’ ಗೆ ತಿಳಿಸಿದರು.
‘ಮುಂದಿನ ಹಂತದಲ್ಲಿ ಅದಕ್ಕೆ ಕೆಮಿಕಲ್ ಟ್ರೀಟ್‌ಮೆಂಟ್ ಮಾಡಲಾಗುವುದು.ಈ ಕಂಬದ ಅವಧಿಯಲ್ಲಿಯೇ ರೂಪುಗೊಂಡಿರುವ ಕಲ್ಲನ್ನು ಹುಡುಕಿ, ಪುಡಿ ಮಾಡಿ, ಸ್ತಂಭದಲ್ಲಿರುವ ಬಿರುಕುಗಳನ್ನು ಮುಚ್ಚಲು ಬಳಸಲಾಗುವುದು. ಹಿತ್ತಾಳೆ ಉಂಗುರದ ಗುರುತು, ಸ್ತಂಭದ ಮೇಲೆ ಮೂಡದಂತೆ ನೋಡಕೊಳ್ಳಬೇಕಿದೆ. ಇದಕ್ಕೆ ತಾಂತ್ರಿಕ ನೆರವು ನೀಡುವಂತೆ ಹುಬ್ಬಳ್ಳಿಯ ಕೆಎಲ್‌ಇ ಪಾಲಿಟೆಕ್ನಿಕ್ ಕಾಲೇಜು ಆಡಳಿತ ಮಂಡಳಿಗೆ ಮನವಿ ಮಾಡಲಾಗಿದೆ’ ಎಂದು ಬಡಿಗೇರ ಹೇಳಿದರು.
1,200 ವರ್ಷಗಳಷ್ಟು ಹಳೆಯ ಕಂಬ ಅಪಾಯದಂಚಿನಲ್ಲಿರುವ ಬಗ್ಗೆ ಜನವರಿ 7ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.
ಪಲ್ಲವರೊಡನೆ ಯುದ್ಧ ಗೆದ್ದ ನೆನಪಿನ ಉಲ್ಲೇಖ: ವಿಜಯಸ್ತಂಭ ಕ್ರಿ.ಶ.730 ರಿಂದ 742ರ ಅವಧಿಯಲ್ಲಿ ನಿರ್ಮಾಣವಾಗಿದೆ. ಚಾಲುಕ್ಯ ಚಕ್ರವರ್ತಿ 2ನೇ ವಿಕ್ರಮಾದಿತ್ಯ ಕಂಚಿಯ ಪಲ್ಲವರೊಡನೆ ಸತತ ಮೂರನೇ ಬಾರಿಗೆ ಯುದ್ಧದಲ್ಲಿ ಗೆದ್ದ ನೆನಪಿಗೆ ಆತನ ಮಹಾರಾಣಿಯರಾದ ಲೋಕಮಹಾದೇವಿ ಹಾಗೂ ತ್ರೈಲೋಕ ಮಹಾದೇವಿ ಪಟ್ಟದಕಲ್ಲಿನಲ್ಲಿ ಲೋಕೇಶ್ವರ (ಈಗಿನ ವಿರೂಪಾಕ್ಷ ಗುಡಿ) ಹಾಗೂ ತ್ರೈಲೋಕೇಶ್ವರ (ಮಲ್ಲಿಕಾರ್ಜುನ) ದೇವಸ್ಥಾನಗಳನ್ನು ನಿರ್ಮಿಸಿದರು ಎಂಬ ಉಲ್ಲೇಖ ಈ ವಿಜಯಸ್ತಂಭದಲ್ಲಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.