ಪಾವಗಡ: ಇಲ್ಲಿನ ಗ್ರೇಡ್ 2 ತಹಶೀಲ್ದಾರ್ ಸುಮತಿ ಅವರ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ಶುಕ್ರವಾರ ದಾಖಲಾಗಿದೆ.
ತಾಲ್ಲೂಕಿನ ಮಂಗಳವಾಡ ಗ್ರಾಮದ ಹನುಮಂತರಾಯ ಎಂಬುವರು ಭೂರಹಿತ ದೃಢೀಕರಣ ಪತ್ರ ಮತ್ತು ಕೃಷಿ ದೃಢೀಕರಣ ಪತ್ರ ಕೋರಿ ತಾಲ್ಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ತಹಶೀಲ್ದಾರ್ ಅವರು ಭೂರಹಿತ ದೃಢೀಕರಣ ಪತ್ರ ನೀಡಲಾಗುವುದಿಲ್ಲ ಎಂದು ಫೆ. 21ರಂದು ಅರ್ಜಿಯನ್ನು ವಜಾಗೊಳಿಸಿದ್ದರು.
ಈ ಬಗ್ಗೆ ತಹಶೀಲ್ದಾರ್ ಅವರನ್ನು ಪ್ರಶ್ನಿಸಿದಾಗ, ‘ನೀನು ವಿಧಾನಸೌಧಕ್ಕಾದರೂ ಹೋಗು; ಎಲ್ಲಿಗಾದರೂ ಹೋಗು. ದೃಢೀಕರಣ ಪತ್ರ ಕೊಡಲು ಬರುವುದಿಲ್ಲ’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಹನುಮಂತರಾಯ ದೂರಿನಲ್ಲಿ ತಿಳಿಸಿದ್ದಾರೆ.
‘ಆದಿ ಕರ್ನಾಟಕ ಸಮುದಾಯಕ್ಕೆ ಸೇರಿದ ಫಲಾನುಭವಿಗಳು ಸರ್ಕಾರಿ ಸೌಲಭ್ಯ ಪಡೆಯಲು ಜಾತಿ ಪ್ರಮಾಣ ಪತ್ರ ಸೇರಿದಂತೆ ವಿವಿಧ ದೃಢೀಕರಣ ಪತ್ರಗಳನ್ನು ಕೋರಿ ಅರ್ಜಿ ಸಲ್ಲಿಸಿದರೂ ನೀಡುತ್ತಿಲ್ಲ. ನನ್ನ ಅರ್ಜಿ ವಜಾ ಮಾಡಿರುವ ಬಗ್ಗೆ ಹಿಂಬರಹ ನೀಡಿ ಅಥವಾ ಸರ್ಕಾರಿ ಆದೇಶ ತೋರಿಸಿ ಎಂದು ಕೇಳಿದ್ದಕ್ಕೆ ತಹಶೀಲ್ದಾರ್ ಕಚೇರಿಯಲ್ಲಿಯೇ ಜಾತಿ ನಿಂದನೆ ಮಾಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.