ಪಾವಗಡ: ‘ಲೋಕಸಭೆ ಸದಸ್ಯರಿಗೆ ಗೊಲ್ಲರಹಟ್ಟಿಗೆ ಪ್ರವೇಶಿಸದಂತೆ ಅಡ್ಡಿಪಡಿಸಿಲ್ಲ. ಇಲ್ಲಿನ ಸಂಪ್ರದಾಯವನ್ನು ಅವರಿಗೆ ವಿವರಿಸಿದ್ದೇವೆ. ಮುಂದಿನ ದಿನಗಳಲ್ಲಿ ಗ್ರಾಮಕ್ಕೆ ನಾವೇ ಆಹ್ವಾನ ನೀಡುತ್ತೇವೆ’.
ಹಟ್ಟಿಯ ಸಂಪ್ರದಾಯದ ನೆಪವನ್ನು ಹೇಳಿ ಸಂಸದ ಎ.ನಾರಾಯಣಸ್ವಾಮಿ ಅವರಿಗೆ ಹಟ್ಟಿಯನ್ನು ಪ್ರವೇಶಿಸದಂತೆ ನಿರ್ಬಂಧ ವಿಧಿಸಿದ್ದ ಸಮೀಪದ ಪೆಮ್ಮನಹಳ್ಳಿಯ ಗೊಲ್ಲರಹಟ್ಟಿ ಗ್ರಾಮಸ್ಥರ ಪ್ರತಿಕ್ರಿಯೆ ಇದು.
ಸಂಸದರಿಗೆ ಹಟ್ಟಿಗೆ ಪ್ರವೇಶಿಸಲು ಸೋಮವಾರ ಗ್ರಾಮಸ್ಥರು ಅಡ್ಡಿಪಡಿಸಿದರು ಎಂಬ ಹಿನ್ನೆಲೆಯಲ್ಲಿ ಮಂಗಳವಾರ ಗ್ರಾಮಕ್ಕೆ ಅಧಿಕಾರಿಗಳ ದಂಡೇ ಭೇಟಿ ನೀಡಿತ್ತು. ಆಗ ಗ್ರಾಮಸ್ಥರು ಅಧಿಕಾರಿಗಳಿಗೆ ಮೇಲಿನಂತೆ ಭರವಸೆ ನೀಡಿದರು. ‘ಹಟ್ಟಿ ಅಭಿವೃದ್ಧಿಗೆ ಸಂಸದರ ನೆರವೂ ಕೋರುತ್ತೇವೆ’ ಎಂದು ಹೇಳಿದರು.
ಗ್ರಾಮಕ್ಕೆ ಭೇಟಿ ನೀಡಿದ್ದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ರಮಾ
ಅವರು, ‘ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದೇವೆ. ಸಂಸದರಿಗೆ ಪ್ರವೇಶಿಸಲು ಅಡ್ಡಿಪಡಿಸಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ವಸ್ತುಸ್ಥಿತಿ ಕುರಿತು ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ’ ಎಂದು ತಿಳಿಸಿದರು.
ತಹಶೀಲ್ದಾರ್ ವರದರಾಜು, ‘ಯಾವುದೇ ಗೊಲ್ಲರಹಟ್ಟಿಗಳಲ್ಲಿ ದಲಿತರ ಪ್ರವೇಶಕ್ಕೆ ನಿರ್ಬಂಧ ಹೇರಬಾರದು. ಇಂತಹ ಕೃತ್ಯಗಳು ನಡೆದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ತಾಕೀತು ಮಾಡಿದರು.
ಇದನ್ನೂ ಓದಿ: ಉದಿ ಬಾಗಿಲು ದಾಟಿದರೆ ಹಟ್ಟಿಗೆ ಮೈಲಿಗೆ
ಇನ್‌ಸ್ಪೆಕ್ಟರ್ ವೆಂಕಟೇಶ್ ಮಾತನಾಡಿ, ಸಂವಿಧಾನದ ಪ್ರಕಾರ ಯಾರನ್ನೂ ನಿರ್ಬಂಧಿಸುವಂತಿಲ್ಲ ಎಂಬುದನ್ನು ಗ್ರಾಮಸ್ಥರ ಗಮನಕ್ಕೆ ತಂದರು.
ಸಂಪ್ರದಾಯ ಹೇಗೆ ಬಂತು?:ಪ್ರಾಧ್ಯಾಪಕ ಚಿತ್ತಯ್ಯ ಪೂಜಾರ್ ಮಾತನಾಡಿ, ‘ಹಿಂದೆ ದೇವರ ಉತ್ಸವ, ಮೆರವಣಿಗೆ ನಡೆಸುವಾಗದಲಿತರು ಪಂಜು ಹಿಡಿದು ಉತ್ಸವದ ಮುಂದೆ ಬರುತ್ತಿದ್ದರು. ಆಗಿನ ಕಾಲದಲ್ಲಿ ಗುಡಿಸಲುಗಳು ಹೆಚ್ಚಿದ್ದರಿಂದ ಪಂಜಿನಿಂದ ಗುಡಿಸಲಿಗೆ ಅನಾಹುತ ಸಂಭವಿಸಬಹುದು ಎಂಬ ಕಾರಣಕ್ಕೆ ಪಂಜು ಹಿಡಿದವರು ಹಟ್ಟಿಯ ಹೊರಗೆ ನಿಲ್ಲುತ್ತಿದ್ದರು. ಅದು ಸಂಪ್ರದಾಯವಾಗಿ ಮುಂದುವರೆದಿದೆ’ ಎಂದರು.
‘ದಲಿತರು ಹಾಗೂ ಗೊಲ್ಲ ಸಮುದಾಯದವರು ಅಣ್ಣ ತಮ್ಮಂದಿರಿದ್ದಂತೆ. ಅನಗತ್ಯವಾಗಿ ಕಿತ್ತಾಡಬಾರದು’ ಎಂದು ಇದೇ ಸಂದರ್ಭದಲ್ಲಿ ಗ್ರಾಮಸ್ಥರಿಗೆ ತಿಳಿ ಹೇಳಿದರು.
ಕಾಡುಗೊಲ್ಲರ ಸಂಘದ ವಿಷಾದ: ಸಂಸದರಿಗೆ ಹಟ್ಟಿಗೆ ಪ್ರವೇಶ ನಿರಾಕರಣೆಗೆ ರಾಜ್ಯ ಕಾಡುಗೊಲ್ಲರ ಸಂಘದಪ್ರಧಾನ ಕಾರ್ಯದರ್ಶಿ ಸಿ.ಶಿವು ಯಾದವ್ ವಿಷಾದ ವ್ಯಕ್ತಪಡಿಸಿದ್ದಾರೆ.
‘ಈ ಪ್ರಸಂಗ ಹಟ್ಟಿಯಲ್ಲಿನ ಜನರ ಮೌಢ್ಯದಿಂದ ನಡೆದಿದೆಯೇ ಹೊರತು ಉದ್ದೇಶಪೂರ್ವಕವಾಗಿ ನಡೆದಿಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.