ಪಾವಗಡ: ತಾಲ್ಲೂಕಿನಲ್ಲಿ ಇನ್ನೂ ಹೆಚ್ಚುವರಿಯಾಗಿ 10 ಸಾವಿರ ಎಕರೆ ಪ್ರದೇಶದಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ತಾಲ್ಲೂಕಿನ ತಿರುಮಣಿ ಸುತ್ತಮುತ್ತಲಿನ ಸೋಲಾರ್ ಪಾರ್ಕ್‌ಗೆ ಬುಧವಾರ ಇಂಧನ ಸಚಿವ ಕೆ.ಜೆ.ಜಾರ್ಜ್ ಜತೆ ಭೇಟಿನೀಡಿ ಪರಿಶೀಲಿಸಿದ ನಂತರ ಮಾತನಾಡಿದರು.
ಈಗಾಗಲೇ ನಿರ್ಮಿಸಿರುವ ಸೋಲಾರ್ ಪಾರ್ಕ್‌ನಲ್ಲಿ 2,400 ಮೆಗಾ ವಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ. ವಿದ್ಯುತ್ ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸಲು ಹೆಚ್ಚುವರಿಯಾಗಿ 10 ಸಾವಿರ ಎಕರೆ ಪ್ರದೇಶದಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗುವುದು. ಪ್ರಸ್ತುತ ಎಕರೆಗೆ ವರ್ಷಕ್ಕೆ ₹25 ಸಾವಿರ ಬಾಡಿಗೆ ನೀಡಲಾಗುತ್ತಿದೆ. ರೈತರು ಮುಂದೆ ಬಂದು ಹಿಂದಿನ ನಿಯಮದಂತೆ ಜಮೀನು ಕೊಟ್ಟರೆ ವಿಸ್ತರಣೆಗೆ ಅನುಕೂಲವಾಗುತ್ತದೆ. ಗುಲರ್ಗಾ ಸೇರಿದಂತೆ ಇತರೆಡೆಗಳಲ್ಲೂ ಸಹ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಬೇಡಿಕೆ ಬಂದಿದೆ ಎಂದು ಹೇಳಿದರು.
ಕೃಷಿ ಪಂಪ್‌ಸೆಟ್‌ಗಳಿಗೆ ರೈತರೇ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳುವ ಕುಸುಮ ಯೋಜನೆಯನ್ನು (ಸೋಲಾರ್ ಪಂಪ್‌ಸೆಟ್) ರಾಜ್ಯದ ಉದ್ದಗಲಕ್ಕೂ ವಿಸ್ತರಿಸಲಾಗುವುದು ಎಂದರು.
ಇಂಧನ ಸಚಿವ ಕೆ.ಜೆ.ಜಾರ್ಜ್, ‘ಯೋಜನೆ ಆರಂಭವಾದ ಕಡಿಮೆ ಅವಧಿಯಲ್ಲೇ 2,400 ಮೆಗಾ ವಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದ್ದು, ಇದೊಂದು ದೊಡ್ಡ ಸಾಧನೆ. ಬರದ ನಾಡಿನಲ್ಲಿ ಭೂಮಿ ನೀಡಿದ ರೈತರಿಗೂ ಆದಾಯ ಬರುವಂತಾಗಿದೆ. ಸೋಲಾರ್ ಪಾರ್ಕ್ ಯೋಜನೆಯನ್ನು ಮತ್ತಷ್ಟು ಪ್ರದೇಶಕ್ಕೆ ವಿಸ್ತರಿಸಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.