ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಸತತ ಎರಡು ಸಲ ಗೆದ್ದಿರುವ ಪಿ.ಸಿ.ಮೋಹನ್ ಅವರು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಸಲ (1999–2008) ಗೆಲುವು ಸಾಧಿಸಿದ್ದರು.
**
*ನಿಮ್ಮನ್ನು ಏಕೆ ಆಯ್ಕೆ ಮಾಡಬೇಕು?
10 ವರ್ಷಗಳಿಂದ ಸಂಸದನಾಗಿ ಕೆಲಸ ಮಾಡಿದ್ದೇನೆ. ಏಳೆಂಟು ವರ್ಷಗಳಿಂದ ಉಪನಗರ ರೈಲು ಯೋಜನೆಯ ಬಗ್ಗೆ ಸತತವಾಗಿ ಹೋರಾಟ ಮಾಡಿ ಅನುಮೋದನೆ ಕೊಡಿಸಿದ್ದೇನೆ. ಕೇಂದ್ರ ಸರ್ಕಾರ ಕಳೆದ ಬಜೆಟ್‌ನಲ್ಲಿ ಈ ಯೋಜನೆಗೆ ₹17 ಸಾವಿರ ಕೋಟಿ ಮೀಸಲಿಟ್ಟಿತು. ಇಷ್ಟಾದ ಬಳಿಕವೂ ರಾಜ್ಯ ಘಟಕ ಎಸ್‌ಪಿವಿ (ವಿಶೇಷ ಉದ್ದೇಶದ ಘಟಕ) ಸ್ಥಾಪನೆಗೆ ವಿಳಂಬ ಮಾಡಿತು. ಹೀಗಾಗಿ, ಕೇಂದ್ರ ರೈಲ್ವೆ ಸಚಿವ ಪೀಯೂಷ್ ಗೋಯೆಲ್ ಅವರನ್ನು ಮುಖ್ಯಮಂತ್ರಿ ಗೃಹ ಕಚೇರಿಗೆ ಕರೆದುಕೊಂಡು ಹೋದೆ.
ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ 19 ಷರತ್ತುಗಳನ್ನು ಹಾಕಿತ್ತು. ಅವುಗಳನ್ನು ತೆಗೆದು ಹಾಕುವಂತೆ ಕೇಂದ್ರ ಸಚಿವರ ಮೂಲಕ ಒತ್ತಡ ಹೇರಿದ್ದೇನೆ. ಇದರಿಂದಾಗಿ, ಯೋಜನೆಗೆ ವೇಗ ಸಿಕ್ಕಿದೆ. ₹17 ಸಾವಿರ ಕೋಟಿ ಬಳಸಿ ಮುಂದಿನ ಐದು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಬೇಕು ಎಂಬುದು ನನ್ನ ಸಂಕಲ್ಪ. ಉಪನಗರ ರೈಲಿನಲ್ಲಿ 35 ಲಕ್ಷ ಜನರು ಪ್ರಯಾಣ ಮಾಡಬಹುದು. ಇದರಿಂದಾಗಿ ಬಸ್‌ಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ನಗರಾಭಿವೃದ್ಧಿ ಇಲಾಖೆಯಿಂದ ಅಮೃತ್ ಯೋಜನೆಯಡಿ ನಗರದ ಕೆರೆಗಳ ಅಭಿವೃದ್ಧಿಗೆ ಸಾಕಷ್ಟು ಹಣ ಕೊಡಿಸಿದ್ದೇನೆ. ಉಪನಗರ ರೈಲು ಹಾಗೂ ‘ನಮ್ಮ ಮೆಟ್ರೊ’ ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು ನಮ್ಮ ಉದ್ದೇಶ.
* ಉಪನಗರ ರೈಲು ಯೋಜನೆ ವಿಳಂಬಕ್ಕೆ ಕೇಂದ್ರ ಸರ್ಕಾರದ ಅಸಹಕಾರ ಕಾರಣ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸುತ್ತಿದ್ದಾರಲ್ಲ?
ಉಪನಗರ ರೈಲು ಯೋಜನೆಗೆ ಮೊದಲು ಬೇಡಿಕೆ ಇರಲಿಲ್ಲ. ಈಗ ಎಲ್ಲ ನಗರಗಳು ಬೇಡಿಕೆ ಇಟ್ಟಿವೆ. ‘ಯೋಜನೆಗೆ ಶೇ 60ರಷ್ಟು ಬ್ಯಾಂಕ್ ಸಾಲ ಪಡೆಯಬೇಕು, ಶೇ 20 ಮೊತ್ತವನ್ನು ರಾಜ್ಯ ಸರ್ಕಾರ ಭರಿಸಬೇಕು ಹಾಗೂ ಉಳಿದ ಮೊತ್ತವನ್ನು ಕೇಂದ್ರ ಸರ್ಕಾರ ಭರಿಸಬೇಕು’ ಎಂದು ಪ್ಯಾನ್ ಇಂಡಿಯಾ ನೀತಿ ರೂಪಿಸಿದೆ. ಇದಕ್ಕೆ ರಾಜ್ಯ ಸರ್ಕಾರ ಒಪ್ಪಲಿಲ್ಲ. ಕೇಂದ್ರ ಸರ್ಕಾರ ಶೇ 50 ಮೊತ್ತ ಭರಿಸಬೇಕು ಎಂದು ರಾಜ್ಯ ಸರ್ಕಾರ ಪಟ್ಟು ಹಿಡಿಯಿತು.
ನಗರದ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಕೂಡಲೇ ಒಪ್ಪಿಗೆ ಸೂಚಿಸಿತು. ಇಷ್ಟೆಲ್ಲ ಆದ ಮೇಲೂ ರಾಜ್ಯ ಸರ್ಕಾರ ಷರತ್ತುಗಳನ್ನು ವಿಧಿಸಿತು. ರಾಜ್ಯ ಸರ್ಕಾರಕ್ಕೆ ಯೋಜನೆ ಅನುಷ್ಠಾನ ಮಾಡುವ ಮನಸ್ಸಿದ್ದಂತೆ ಕಾಣುತ್ತಿಲ್ಲ.
* ಚುನಾವಣಾ ನಿಧಿ ಸಂಗ್ರಹಕ್ಕೆ ವೈಟ್‌ಟಾಪಿಂಗ್‌ನಂತಹ ದೊಡ್ಡ ದೊಡ್ಡ ಯೋಜನೆಗಳನ್ನು ರಾಜ್ಯ ಸರ್ಕಾರ ಅನುಷ್ಠಾನ ಮಾಡುತ್ತಿದೆ ಎಂದು ನೀವೇ ಆರೋಪಿಸಿದ್ದೀರಲ್ಲ?
ಹಿಂದಿನ ಕಾಂಗ್ರೆಸ್ ಸರ್ಕಾರ ಹಾಗೂ ಈಗಿನ ಸಮ್ಮಿಶ್ರ ಸರ್ಕಾರದ ಯೋಜನೆಗಳು ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ಕಾರ್ಯಕ್ರಮಗಳು. ಚುನಾವಣೆ ಬಂದಾಗ ಅವರಿಗೆ ಉಕ್ಕಿನ ಮೇಲ್ಸೇತುವೆ ಯೋಜನೆ ನೆನಪಾಗುತ್ತದೆ. ನಗರದಲ್ಲಿ ರಸ್ತೆ ಅಭಿವೃದ್ಧಿಪಡಿಸಲು ಕಿ.ಮೀ.ಗೆ ₹30 ಲಕ್ಷದಿಂದ ₹40 ಲಕ್ಷ ಅಗತ್ಯವಿದೆ. ಆದರೆ, ಪ್ರತಿ ಕಿ.ಮೀ.ಗೆ ₹12 ಕೋಟಿ ಖರ್ಚು ಮಾಡಿ ವೈಟ್‌ಟಾಪಿಂಗ್ ಮಾಡುವ ಅಗತ್ಯ ಇದೆಯಾ. ನಮ್ಮಲ್ಲಿ ಅಷ್ಟು ಹೆಚ್ಚುವರಿ ಹಣ ಇದೆಯಾ. ನಗರದ ಬಹುತೇಕ ರಸ್ತೆಗಳು ಸರಿ ಇಲ್ಲ. ಅವುಗಳ ಅಭಿವೃದ್ಧಿ ಪ್ರಥಮ ಪ್ರಾಶಸ್ತ್ಯ ನೀಡಬೇಕಿತ್ತು ಅಲ್ಲವೇ.
* ಇಂತಹ ಯೋಜನೆಗಳ ವಿರುದ್ಧ ಬಿಜೆಪಿ ಯಾವತ್ತೂ ಧ್ವನಿ ಎತ್ತಿಲ್ಲವಲ್ಲ?
ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಆಡಳಿತ ನಡೆಸುವವರು ದಪ್ಪ ಚರ್ಮದವರು. ನಾವು ಎಷ್ಟೇ ಕಿರುಚಿಕೊಂಡರೂ ಅವರು ಕೇಳಿಸಿಕೊಳ್ಳುವುದಿಲ್ಲ. ಉಕ್ಕಿನ ಮೇಲ್ಸೇತುವೆ ಯೋಜನೆ ವಿರೋಧಿಸಿ ನಾನು, ಸಂಸದ ರಾಜೀವ್ ಚಂದ್ರಶೇಖರ್ ಹಾಗೂ ಶಾಸಕ ಎಸ್.ಸುರೇಶ್ ಕುಮಾರ್ ಹೋರಾಟ ಮಾಡಿದ್ದೇವೆ.
* ಎಲಿವೇಟೆಡ್ ಕಾರಿಡಾರ್ ಬಗ್ಗೆ ನಿಮ್ಮ ನಿಲುವು ಏನು?
ರಾಜ್ಯ ಸರ್ಕಾರ ಕದ್ದು ಮುಚ್ಚಿ ಯೋಜನೆ ಅನುಷ್ಠಾನ ಮಾಡಲು ಹೊರಟಿದೆ. ಜನರ ಅಹವಾಲು ಆಲಿಸಿ ಯೋಜನೆಗೆ ಚಾಲನೆ ನೀಡಬೇಕಿತ್ತು.
* ಗೆದ್ದ ಬಳಿಕ ಕೆಲವು ಬಿಜೆಪಿ ಸಂಸದರು ಕ್ಷೇತ್ರದ ಕಡೆ ತಲೆ ಹಾಕಿಲ್ಲ ಎಂಬ ಆರೋಪ ಇದೆ. ಆದರೆ, ಅವರು ಈಗ ‘ಮೋದಿ ಅಲೆಯಲ್ಲಿ ಗೆಲ್ಲುತ್ತೇವೆ’ ಎನ್ನುತ್ತಿದ್ದಾರಲ್ಲ?
ನಾನು ಮೋದಿ ಅವರ ಸಾಧನೆ ಹಾಗೂ ನನ್ನ ಸಾಧನೆ ಹೇಳಿಕೊಂಡು ಮತ ಕೇಳುತ್ತಿದ್ದೇನೆ. ಉಳಿದ ಸಂಸದರ ವಿಷಯ ನನಗೆ ಗೊತ್ತಿಲ್ಲ.
* ನಟ ಪ್ರಕಾಶ್ ರೈ ಅವರು ಪಿ.ಸಿ. ಮೋಹನ್ ಅವರ ಜತೆಗೆ ಒಳ ಒಪ್ಪಂದ ಮಾಡಿಕೊಂಡು ಕಣಕ್ಕೆ ಇಳಿದಿದ್ದಾರೆ ಎಂದು ಕಾಂಗ್ರೆಸ್‌ನವರು ಪ್ರಚಾರ ಮಾಡುತ್ತಿದ್ದರಲ್ಲ?
ಇದು ಪಾಲಿಕೆ ಸದಸ್ಯರ, ಅದು ಶಾಸಕರ ಕೆಲಸ ಎಂದು ಭೇದವೆಣಿಸದೆ ಕ್ಷೇತ್ರದ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಅಭಿವೃದ್ಧಿ ಕಾರ್ಯದಲ್ಲಿ ತಾರತಮ್ಯ ಮಾಡಿಲ್ಲ. ಇದು ನನಗೆ ಶ್ರೀರಕ್ಷೆ ಆಗಲಿದೆ. ನನಗೆ ಯಾರ ಅನುಕಂಪ ಹಾಗೂ ಸಹಕಾರ ಬೇಕಿಲ್ಲ.
* ಬೆಳ್ಳಂದೂರು ಕೆರೆಯಲ್ಲಿ ನೊರೆ ಹಾಗೂ ಬೆಂಕಿ ಕಾಣಿಸಿಕೊಂಡು ಅಂತರರಾಷ್ಟ್ರೀಯ ಮಟ್ಟದ ಸುದ್ದಿಯಾಗಿದೆ. ಈ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಏಕೆ?
ಕೆರೆ ಸಮಸ್ಯೆ ಪರಿಹಾರಕ್ಕೆ ಅಲ್ಪಕಾಲದ ಹಾಗೂ ದೀರ್ಘಕಾಲದ ಯೋಜನೆ ರೂಪಿಸುವಂತೆ ನಾನು ಸಲಹೆ ನೀಡಿದ್ದೆ. ಯೋಜನೆಯ ವಿವರಗಳನ್ನು ಬಿಡಿಎ ವೆಬ್‌ಸೈಟ್‌ನಲ್ಲಿ ಹಾಕುವಂತೆ ಕೋರಿದ್ದೆ. ನಿತ್ಯ 55 ಕೋಟಿ ಲೀಟರ್‌ಗಳಷ್ಟು ಕೊಳಚೆ ನೀರು ಬೆಳ್ಳಂದೂರು ಕೆರೆಗೆ ಸೇರುತ್ತಿದೆ. ಆದರೆ, 5 ಕೋಟಿ ಲೀಟರ್‌ನಷ್ಟು ಕೊಳಚೆ ನೀರನ್ನು ಸಂಸ್ಕರಣೆ ಮಾಡಲಾಗುತ್ತಿದೆ. ಅದು ಸಹ ಕೆರೆಗೆ ಸೇರುತ್ತಿದೆ.
ಸಮಸ್ಯೆಗೆ ಸಮಗ್ರ ಪರಿಹಾರ ಕಂಡುಹಿಡಿಯಲು ಕುಳಿತು ಚರ್ಚೆ ಮಾಡಲು ರಾಜ್ಯದ ಸಚಿವರು ಆಸಕ್ತಿ ತೋರುತ್ತಿಲ್ಲ. ಅವರ ಉದ್ದೇಶವೇ ಕೆಟ್ಟದ್ದು ಇದೆ. ಕೊಳಚೆ ನೀರು ಸಂಸ್ಕರಣ ಘಟಕ ಸ್ಥಾಪನೆಯಿಂದ ಕಮಿಷನ್ ಎಷ್ಟು ಬಂತು ಎಂದು ಆಲೋಚಿಸುತ್ತಾರೆ ಅಷ್ಟೇ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.