ADVERTISEMENT

ದೀರ್ಘಾವಧಿ ಠಿಕಾಣಿ: ಪಿಡಿಒಗಳ ಎತ್ತಂಗಡಿ

ಒಂದು ತಾಲ್ಲೂಕಿನ ವ್ಯಾಪ್ತಿಯ ಸೇವೆಗೆ ಗರಿಷ್ಠ ಏಳು ವರ್ಷಗಳ ಮಿತಿ

ಚಂದ್ರಹಾಸ ಹಿರೇಮಳಲಿ
Published 13 ಸೆಪ್ಟೆಂಬರ್ 2024, 22:19 IST
Last Updated 13 ಸೆಪ್ಟೆಂಬರ್ 2024, 22:19 IST
ಉಮಾ ಮಹದೇವನ್
ಉಮಾ ಮಹದೇವನ್   

ಬೆಂಗಳೂರು: ಒಂದೇ ಗ್ರಾಮ ಪಂಚಾಯಿತಿ ಅಥವಾ ತಾಲ್ಲೂಕಿನಲ್ಲಿ ಸಚಿವರು, ಶಾಸಕರ ಶಿಫಾರಸು ಬಳಸಿಕೊಂಡು ಹಲವು ವರ್ಷಗಳಿಂದ ಠಿಕಾಣಿ ಹೂಡಿದ್ದ ಎಲ್ಲ ಪಿಡಿಒ, ಕಾರ್ಯದರ್ಶಿಗಳನ್ನು ಎತ್ತಂಗಡಿ ಮಾಡಲು ಗ್ರಾಮೀಣಾಭಿವೃದ್ಧಿ ಇಲಾಖೆ ಸಿದ್ಧತೆ ನಡೆಸಿದೆ.

ಗ್ರಾಮೀಣ ಆಡಳಿತದಲ್ಲಿ ತ್ವರಿತ ಸೇವೆ ಒದಗಿಸುವುದು, ಪಂಚಾಯಿತಿಗಳಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು, ಅಧಿಕಾರಿಗಳು ಮತ್ತು ಸಿಬ್ಬಂದಿಯ ದಕ್ಷತೆ ಹೆಚ್ಚಿಸುವ ಉದ್ದೇಶ ಇಟ್ಟುಕೊಂಡು ಪಿಡಿಒ (ಪಂಚಾಯಿತಿ ಅಭಿವೃದ್ಧಿ ಅಧಿಕಾರಿ), ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್‌–1,  ಕಾರ್ಯದರ್ಶಿ ಗ್ರೇಡ್‌–2,  ದ್ವಿತೀಯ ದರ್ಜೆ ಲೆಕ್ಕ ಸಹಾಯಕರನ್ನು ಇದೇ ಮೊದಲ ಬಾರಿ ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಮಾಡಲು ಗ್ರಾಮೀಣಾಭಿವೃದ್ಧಿ ಇಲಾಖೆ ಜೂನ್‌ 25ರಂದು ಆದೇಶ ಹೊರಡಿಸಿತ್ತು. 

ಆಯಾ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಎಲ್ಲ ಅಧಿಕಾರಿ, ಸಿಬ್ಬಂದಿಯ ದಾಖಲಾತಿ ಪರಿಶೀಲನಾ ಕಾರ್ಯವನ್ನೂ ಈಗಾಗಲೇ ಪೂರ್ಣಗೊಳಿಸಲಾಗಿತ್ತು. ಸರ್ಕಾರದ ಹೇಳಿಕೆಯಂತೆ ಆಗಸ್ಟ್‌ 10ರೊಳಗೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕಿತ್ತು. ಈಗ ಕೌನ್ಸೆಲಿಂಗ್‌ ಪ್ರಕ್ರಿಯೆ ಆರಂಭಿಸಿರುವ ಮಧ್ಯದಲ್ಲೇ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ವರ್ಗಾವಣೆ ನಿಯಂತ್ರಣ ನಿಯಮಗಳಿಗೆ ತಿದ್ದುಪಡಿ ತರಲು ಕರಡು ಪ್ರಕಟಿಸಲಾಗಿದೆ. ಒಂದೇ ತಾಲ್ಲೂಕಿನಲ್ಲಿ ಗರಿಷ್ಠ ಏಳು ವರ್ಷ ಕೆಲಸ ಮಾಡಿರುವ ಎಲ್ಲ ಪಿಡಿಒ, ಕಾರ್ಯದರ್ಶಿಗಳನ್ನು ಅದೇ ತಾಲ್ಲೂಕು ವ್ಯಾಪ್ತಿಯ ಯಾವುದೇ ಪಂಚಾಯಿತಿಗಳ ಖಾಲಿ ಹುದ್ದೆಗಳಿಗೆ ಪರಿಗಣಿಸದಂತೆ ನಿರ್ಬಂಧಿಸುವ ಅಂಶವನ್ನು ಸೇರಿಸಲಾಗಿದೆ.

ADVERTISEMENT

ಪಿಡಿಒ, ಕಾರ್ಯದರ್ಶಿಗಳ ವಿರೋಧ: ಏಳು ವರ್ಷಕ್ಕಿಂತ ಮೇಲ್ಪಟ್ಟು ಒಂದೇ ತಾಲ್ಲೂಕಿನಲ್ಲಿ ಕೆಲಸ ಮಾಡು
ತ್ತಿರುವವನ್ನು ಹೊರಗೆ ಕಳುಹಿಸುವ ಗ್ರಾಮೀಣಾಭಿವೃದ್ಧಿ ಇಲಾಖೆ ನಡೆಗೆ ಗ್ರಾಮ ಪಂಚಾಯಿತಿ ಪಿಡಿಒ, ಕಾರ್ಯದರ್ಶಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

‘ಎಲ್ಲ ಇಲಾಖೆಗಳಲ್ಲೂ ವರ್ಗಾವಣೆ ನೌಕರ ಸ್ನೇಹಿಯಾಗಿರುತ್ತದೆ. ಗ್ರಾಮೀಣಾಭಿವೃದ್ಧಿ ಇಲಾಖೆ ಮಾತ್ರ ನೌಕರರ ಬದುಕಿನ ಜೊತೆ ಚೆಲ್ಲಾಟವಾಡುವ ನಿರ್ಧಾರ ಕೈಗೊಂಡಿದೆ. ಒಂದು ತಾಲ್ಲೂಕಿನಲ್ಲಿ ಕೆಲಸ ಮಾಡುತ್ತಿರುವ ಪಿಡಿಒಗಳನ್ನು ಸಾಮೂಹಿಕವಾಗಿ ಹೊರಹಾಕುವ ಪ್ರಕ್ರಿಯೆಯನ್ನು ಪ್ರಾರಂಭಿಸಿರುವುದು ಅವೈಜ್ಞಾನಿಕ ಕ್ರಮ. ತಕ್ಷಣ ತಿದ್ದುಪಡಿ ಕರಡು ಹಿಂಪಡೆಯಬೇಕು. ಅಲ್ಲಿಯವರೆಗೂ ಹೋರಾಟ ನಡೆಸಲು ಸಂಘದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎನ್ನುತ್ತಾರೆ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜು ವಾರದ.

ಶೇ 30 ವರ್ಗಾವಣೆ, ತಾಲ್ಲೂಕು ತೊರೆದವರು ಕಡಿಮೆ 

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ 2023-24ನೇ ಸಾಲಿನಲ್ಲಿ ಸಾರ್ವತ್ರಿಕ ವರ್ಗಾವಣೆ ನಡೆಸಲಾಗಿತ್ತು. ಪಿಡಿಒಗಳ ವೃಂದಬಲದ ಶೇ 6ರಷ್ಟು ಮಂದಿಯನ್ನು ವರ್ಗಾವಣೆ ಮಾಡುವ ಅಧಿಕಾರವನ್ನು ಗ್ರಾಮೀಣಾಭಿವೃದ್ಧಿ ಸಚಿವರಿಗೆ ನೀಡಲಾಗಿತ್ತು. ನಿಯಮದಂತೆ 312 ಪಿಡಿಒಗಳ ವರ್ಗಾವಣೆಗೆ ಮಾತ್ರ ಅವಕಾಶವಿತ್ತು. ಆದರೆ, 1,562 ಪಿಡಿಒಗಳನ್ನು (ಶೇ 30.07) ವರ್ಗಾವಣೆ ಮಾಡಲಾಗಿತ್ತು.

ವಿಧಾನಸಭೆಯಲ್ಲಿ ಶಾಸಕರ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಈ ಮಾಹಿತಿ ಹಂಚಿಕೊಂಡಿದ್ದರು.

ಶೇ 30.07ರಷ್ಟು ವರ್ಗಾವಣೆ ನಡೆದರೂ ತಾವು ಕೆಲಸ ಮಾಡುತ್ತಿರುವ ತಾಲ್ಲೂಕು ತೊರೆದು ಹೊರ ಹೋದವರು ಶೇ 10ರಷ್ಟು ಮಾತ್ರ. ಅದು ಸ್ವಯಂ ಇಚ್ಛೆಯಿಂದ. ಶೇ 60ಕ್ಕಿಂತ ಹೆಚ್ಚು ಪಿಡಿಒ, ಕಾರ್ಯದರ್ಶಿಗಳು ಒಂದೇ ತಾಲ್ಲೂಕಿನಲ್ಲಿ 15–20 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. 

ಶಾಲೆಗಳು ಆರಂಭವಾಗಿವೆ. ಒತ್ತಡದ ವಾತಾವರಣದ ನಡುವೆ ಕೆಲಸ ಮಾಡುವ ಪಿಡಿಒಗಳಿಗೆ ಆಘಾತ ತಂದಿದೆ.
–ರಾಜು ವಾರದ, ಅಧ್ಯಕ್ಷ, ಕರ್ನಾಟಕ ರಾಜ್ಯ ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘ 
ಸಾರ್ವಜನಿಕ ಹಿತಾಸಕ್ತಿಯಿಂದ ನಿರ್ಧಾರ ಕೈಗೊಳ್ಳಲಾಗಿದೆ. ಆಕ್ಷೇಪಣೆ ಪರಿಗಣಿಸಿ, 7 ದಿನದ ನಂತರ ಅಧಿಸೂಚನೆ ಹೊರಡಿಸಲಾಗುವುದು.
–ಉಮಾ ಮಹಾದೇವನ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಇಲಾಖೆ
  • 5,189: ಕೆಲಸ ಮಾಡುತ್ತಿರುವ ಪಿಡಿಒಗಳು

  • 1,590: ಪಂಚಾಯಿತಿ ಕಾರ್ಯದರ್ಶಿ ಗ್ರೇಡ್‌–1

  • 3,108: ಪಂಚಾಯಿತಿ ಕಾರ್ಯದರ್ಶಿ ಗ್ರೇಡ್‌–2

  • 2,234: ದ್ವಿತೀಯ ದರ್ಜೆ ಲೆಕ್ಕ ಸಹಾಯಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.