ಬೆಂಗಳೂರು: ಮುಖ್ಯಮಂತ್ರಿಯವರ ಅನುಮೋದನೆಗಾಗಿ ಸಲ್ಲಿಸಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ವರ್ಗಾವಣೆ ಪಟ್ಟಿಯನ್ನು ಇ–ಆಫೀಸ್ ತಂತ್ರಾಂಶದಿಂದಲೇ ಕದ್ದು, ಸೋರಿಕೆ ಮಾಡಿರುವ ಶಂಕೆ ಬಲವಾಗುತ್ತಿದೆ. ಸತ್ಯಾಂಶ ಪತ್ತೆಗೆ ಎನ್‌ಐಸಿಯಿಂದ ಕಡತದ ಚಲನೆಯ ವರದಿ ಪಡೆಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
‘ಪಂಚಾಯತ್ ರಾಜ್ ಆಯುಕ್ತಾಲಯದ ಕಂಪ್ಯೂಟರ್‌ಗಳನ್ನು ಹ್ಯಾಕ್ ಮಾಡಿ ವರ್ಗಾವಣೆ ಪಟ್ಟಿಗಳನ್ನು ಸೋರಿಕೆ ಮಾಡಲಾಗಿದೆ’ ಎಂದು ಆಯುಕ್ತಾಲಯದ ಆಡಳಿತ ವಿಭಾಗದ ಉಪ ನಿರ್ದೇಶಕಿ ಭಾಗ್ಯಶ್ರೀ ಎಚ್.ಎಸ್. ದೂರಿನಲ್ಲಿ ತಿಳಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯದರ್ಶಿ ಎನ್. ಜಯರಾಂ ಬಳಿ ಬಾಕಿ ಇರುವ ಪಿಡಿಒಗಳ ವರ್ಗಾವಣೆ ಪಟ್ಟಿಗಳು ಸೋರಿಕೆಯಾಗಿರುವ ಮೂಲ ಪತ್ತೆಗೆ ಬೆಂಗಳೂರು ಕೇಂದ್ರ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ದೂರಿನಲ್ಲಿ ಹೆಸರಿಸಿದ್ದ ಪಿಡಿಒಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ವಾಟ್ಸ್ ಆ್ಯಪ್ ಗುಂಪುಗಳಲ್ಲಿ ವರ್ಗಾವಣೆ ಪಟ್ಟಿಗಳನ್ನು ಹಂಚಿಕೊಂಡಿದ್ದ ಇನ್ನೂ ಕೆಲವು ಪಿಡಿಒಗಳ ವಿಚಾರಣೆ ನಡೆಸಲಾಗಿದೆ. ಅಧಿಕಾರಿಗಳ ಮೂಲಕ ತಮಗೆ ಪಟ್ಟಿ ಲಭ್ಯವಾಗಿತ್ತು ಎಂಬ ಮಾಹಿತಿಯನ್ನು ಅವರು ತನಿಖಾ ತಂಡದ ಬಳಿ ಹಂಚಿಕೊಂಡಿದ್ದಾರೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಯವರಿಗೆ ಕಡತ ರವಾನಿಸಿದ ಕೆಲವು ದಿನಗಳಲ್ಲೇ ಪಿಡಿಒಗಳ ವರ್ಗಾವಣೆ ಪಟ್ಟಿಗಳು ಸೋರಿಕೆಯಾಗಿದ್ದವು ಎಂಬ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ. ದೂರಿನಲ್ಲಿ ಹೆಸರಿರುವವರು ಮತ್ತು ವಿಚಾರಣೆ ನಡೆಸಿರುವ ಪಿಡಿಒಗಳನ್ನು ತಲುಪುವ ಮೊದಲೇ ಈ ಪಟ್ಟಿಗಳು ಹಲವು ವ್ಯಕ್ತಿಗಳಿಗೆ ವಿನಿಮಯವಾಗಿದ್ದವು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಮೂಲಗಳು ಹೇಳಿವೆ.
ದತ್ತಾಂಶ ಪಡೆಯಲು ಕೋರಿಕೆ: ಉಪ ನಿರ್ದೇಶಕಿ ಭಾಗ್ಯಶ್ರೀ ಅವರು ಇ– ಆಫೀಸ್ ತಂತ್ರಾಂಶದಲ್ಲಿ ಪಿಡಿಒಗಳ ವರ್ಗಾವಣೆ ಕಡತಗಳನ್ನು ಆರಂಭಿಸಿದ್ದರು. ಅದೇ ವಿಭಾಗದ ಇಬ್ಬರು ನಿರ್ದೇಶಕರು, ಪಂಚಾಯತ್ ರಾಜ್ ಆಯುಕ್ತರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಕಚೇರಿಗಳ ಮಾರ್ಗವಾಗಿ ಮುಖ್ಯಮಂತ್ರಿ ಕಚೇರಿಗೆ ಕಡತಗಳನ್ನು ರವಾನಿಸಲಾಗಿತ್ತು. ಈ ಮಧ್ಯದಲ್ಲಿ ಇ–ಆಫೀಸ್‌ನಿಂದಲೇ ಕಡತಗಳನ್ನು ಕಳವು ಮಾಡಲಾಗಿತ್ತೇ ಎಂಬುದನ್ನು ತಿಳಿಯಲು ತನಿಖಾ ತಂಡ ಮುಂದಾಗಿದೆ.
‘ಇ–ಆಫೀಸ್ ತಂತ್ರಾಂಶದಲ್ಲಿ ಕಡತದ ಚಲನೆಯ ದತ್ತಾಂಶಗಳನ್ನು ಪಡೆದು ವಿಶ್ಲೇಷಣೆ ನಡೆಸಬೇಕು. ಆಗ ಯಾವ ಲಾಗಿನ್‌ನಿಂದ ಮತ್ತು ಯಾವ ಐಪಿ ವಿಳಾಸದಿಂದ ಕಡತವನ್ನು ಡೌನ್‌ಲೋಡ್ ಮಾಡಲಾಗಿತ್ತು ಎಂಬುದನ್ನು ತಿಳಿಯಲು ಸಾಧ್ಯವಿದೆ. ರಾಜ್ಯ ಸರ್ಕಾರವು ಬಳಸುತ್ತಿರುವ ಇ–ಆಫೀಸ್ ತಂತ್ರಾಂಶವನ್ನು ಕೇಂದ್ರ ಸರ್ಕಾರದ ನ್ಯಾಷನಲ್ ಇನ್‌ಫಾರ್ಮ್ಯಾಟಿಕ್ಸ್ ಸೆಂಟರ್ (ಎನ್‌ಐಸಿ) ನಿರ್ವಹಿಸುತ್ತಿದೆ. ಕಡತದ ಚಲನೆಯ ದತ್ತಾಂಶ ಮತ್ತು ಲಾಗಿನ್ ವಿವರಗಳನ್ನು ಒದಗಿಸುವಂತೆ ಎನ್‌ಐಸಿಗೆ ಕೋರಿಕೆ ಸಲ್ಲಿಸಲಾಗುವುದು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.