ADVERTISEMENT

ಪುತ್ರನ ಅಂಗಾಂಗ ದಾನ ಮಾಡಿ, ಎಂಟು ಜೀವಗಳಿಗೆ ನೆರವಾದ  ತಂದೆ-ತಾಯಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 8:39 IST
Last Updated 30 ಸೆಪ್ಟೆಂಬರ್ 2022, 8:39 IST
   

ಅಥಣಿ (ಬೆಳಗಾವಿ ಜಿಲ್ಲೆ): ಕಾಲು ಜಾರಿ ಬಿದ್ದು ಉಂಟಾದ ಪೆಟ್ಟಿನಿಂದಾಗಿ ಮಿದುಳು ನಿಷ್ಕ್ರಿಯಗೊಂಡಿದ್ದ ಯುವಕನ ಬಹು ಅಂಗಾಂಗಗಳನ್ನು ಗುರುವಾರ ರಾತ್ರಿ, ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಆಸ್ಪತ್ರೆಗೆ ದಾನ ಮಾಡುವ ಮೂಲಕ ತಂದೆ– ತಾಯಿ ಎಂಟು ಮಂದಿಯ ಜೀವ ಉಳಿಸಲು ನೆರವಾದರು.

ಪ್ರಶಾಂತ

ಅಥಣಿ ಪಟ್ಟಣದ ನಿವಾಸಿ ವಿಠ್ಠಲ ಹಾಗೂ ಜಯಶ್ರೀ ಮಲ್ಲೇವಾಡಿ (ಪೂಜಾರಿ) ಅವರ ಹಿರಿಯ ಪುತ್ರ ಪ್ರಶಾಂತ (30) ಅವರ ಅಂಗಾಂಗಳನ್ನು ದಾನ ಮಾಡಲಾಗಿದೆ.

ಗುರುವಾರ ಬೆಳಿಗ್ಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಾಗ ಪ್ರಶಾಂತ ತಲೆಗೆ ಪೆಟ್ಟಾಗಿತ್ತು. ಸ್ಥಳೀಯ ಅನ್ನಪೂರ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಅವರ ಮಿದುಳು ನಿಷ್ಕ್ರಿಯವಾಗಿದೆ ಎಂದು ವೈದ್ಯರು ತಿಳಿಸಿದರು.

ADVERTISEMENT

ಈ ನೋವಿನ ನಡುವೆಯೂ ಅವರ ತಂದೆ- ತಾಯಿ ಪುತ್ರನ ಅಂಗಾಂಗ ದಾನ ಮಾಡಲು ಒಪ್ಪಿದರು. ಆಸ್ಪತ್ರೆಯ ವೈದ್ಯರು ಹಾಗೂ ಆಪ್ತರು ಅಂಗಾಂಗ ದಾನಕ್ಕೆ ಪ್ರೇರೇಪಿಸಿದರು.

ಸ್ಥಳಕ್ಕೆ ಬಂದ ಬೆಳಗಾವಿಯ ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯ ಡಾ.ಸಂತೋಷ ಪಾಟೀಲ ಹಾಗೂ ಸಿಬ್ಬಂದಿ ಆಂಬುಲೆನ್ಸ್‌ ಮೂಲಕ ಯುವಕನನ್ನು ಆಸ್ಪತ್ರೆಗೆ ಕರೆತಂದರು.

ಪ್ರಶಾಂತ ಅವರ ಹೃದಯ, ಕಿಡ್ನಿ, ಲಿವರ್, ಕಣ್ಣು ಮತ್ತು ಚರ್ಮ ಸೇರಿದಂತೆ ಇತರ ಅಂಗಾಂಗಗಳು ಇನ್ನೊಬ್ಬರಿಗೆ ಕಸಿ ಮಾಡುವಷ್ಟು ಆರೋಗ್ಯವಾಗಿವೆ. ಸದ್ಯ ಅವರನ್ನು ಕೆಎಲ್‌ಇಎಸ್‌ ಆಸ್ಪತ್ರೆಯಲ್ಲಿ ದಾಖಲಿಸಲಾಗುವುದು. ಅಂಗಾಂಗಗಳನ್ನು ಹೊರತೆಗೆದು ಅಗತ್ಯವಿರುವ ವ್ಯಕ್ತಿಗಳಿಗೆ ರವಾನಿಸಲಾಗುವುದು. ನಂತರ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ವೈದ್ಯರು ತಿಳಿಸಿದರು.

ಅನ್ನಪೂರ್ಣ ಆಸ್ಪತ್ರೆಯ ಡಾ.ಎ.ಎ. ಪಾಂಗಿ, ಡಾ.ರವಿ ಪಾಂಗಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ, ಡಾ.ಅವಿನಾಶ ನಾಯಿಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.