ADVERTISEMENT

ಪೆಗಾಸಸ್‌ ಗೂಢಚರ್ಯೆ | ಕಾಂಗ್ರೆಸ್ ಪಕ್ಷದಿಂದ ಸಂಸತ್ತಿನ ದುರ್ಬಳಕೆ: ಬಿಜೆಪಿ ಆರೋಪ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 7:51 IST
Last Updated 7 ಆಗಸ್ಟ್ 2021, 7:51 IST
ಡಿ.ವಿ. ಸದಾನಂದ ಗೌಡ
ಡಿ.ವಿ. ಸದಾನಂದ ಗೌಡ   

ಬೆಂಗಳೂರು: ಪೆಗಾಸಸ್‌ ಗೂಢಚರ್ಯೆ ಆರೋಪವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷವು ಸಂಸತ್ತನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಬಿಜೆಪಿ ಸಂಸದರಾದ ಡಿ.ವಿ. ಸದಾನಂದ ಗೌಡ, ಪಿ.ಸಿ. ಮೋಹನ್ ಮತ್ತು ತೇಜಸ್ವಿ ಸೂರ್ಯ ಆರೋಪಿಸಿದರು.

ಬಿಜೆಪಿ ರಾಜ್ಯ ಘಟಕದ ಕಚೇರಿಯಲ್ಲಿ ಶನಿವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋವಿಡ್ ಸಂಕಷ್ಟದ ನಡುವೆಯೇ ಕೇಂದ್ರ ಸರ್ಕಾರ ಸಂಸತ್ ಅಧಿವೇಶನ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಕಲಾಪಕ್ಕೆ ಅಡ್ಡಿಪಡಿಸುವ ಮೂಲಕ ಕಾಂಗ್ರೆಸ್ ಪಕ್ಷದ ನಾಯಕರು ಸಂಸತ್ತನ್ನೇ ಅವಮಾನಿಸುತ್ತಿದ್ದಾರೆ’ ಎಂದು ದೂರಿದರು.

ಪೆಗಾಸಸ್ ಗೂಢಚರ್ಯೆ ಆರೋಪದಲ್ಲಿ ಹುರುಳಿಲ್ಲ. ಅದು ಕೂಡ ಟೂಲ್ ಕಿಟ್ ನಂತಹ ಪ್ರಯತ್ನದ ಭಾಗ. ಅದನ್ನೆ ಬಳಸಿಕೊಂಡು ಸಂಸತ್ ಕಲಾಪಕ್ಕೆ ಅಡ್ಡಿಪಡಿಸಲು ಕಾಂಗ್ರೆಸ್ ಜುಲೈ 19ರಿಂದಲೇ ಪ್ರಯತ್ನ ಆರಂಭಿಸಿತ್ತು ಎಂದು ಸದಾನಂದಗೌಡ ಆರೋಪಿಸಿದರು.

ADVERTISEMENT

ವಿರೋಧ ಪಕ್ಷಗಳು ಸಂಸತ್ ಅಧಿವೇಶನವನ್ನು ಸರಿಯಾಗಿ ಬಳಸಿಕೊಳ್ಳಬೇಕಿತ್ತು. ಆದರೆ, ಕಾಂಗ್ರೆಸ್ ಪಕ್ಷವು ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸುವ ಮೂಲಕ ಪಲಾಯನವಾದ ಅನುಸರಿಸಿದೆ ಎಂದು ಟೀಕಿಸಿದರು.

ಆಗಸ್ಟ್ 13ರವರೆಗೂ ಸಂಸತ್ ಕಲಾಪ ನಡೆಸುವುದು ನಿಶ್ಚಿತ. ಯಾವುದೇ ರೀತಿಯ ಒತ್ತಡಗಳಿಗೂ ಕೇಂದ್ರ ಸರ್ಕಾರ ಮಣಿಯುವುದಿಲ್ಲ‌ ಜನಪರವಾದ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ ಮುಂದುವರಿಯಲಿದೆ ಎಂದರು.

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒಪ್ಪಿಗೆ ಪಡೆಯಲು ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿಯ ಎಲ್ಲ ಸಂಸದರ ಬೆಂಬಲವಿದೆ. ಎಲ್ಲರೂ ಒಗ್ಗೂಡಿ ಯೋಜನೆಯ ಪರವಾಗಿ ಹೋರಾಟ ನಡೆಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.