ಉಡುಪಿ: ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರವನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳಬೇಕು ಎಂಬ ಸುಪ್ರೀಂಕೋರ್ಟ್ ಸಲಹೆಗೆ ನನ್ನಲ್ಲಿ ಎರಡು ರೀತಿಯ ಅಭಿಪ್ರಾಯಗಳು ಮೂಡಿವೆ’ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಹೇಳಿದರು.
ಶನಿವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಸಮಿತಿಯ ಸಂಧಾನ ಸಂಘರ್ಷವಿಲ್ಲದೆ ಯಶಸ್ವಿಯಾಗಲಿ. ಆದರೆ, ದೇವರು ಇದ್ದಾನೋ ಇಲ್ಲವೋ ಎಂಬ ವಿಚಾರದಲ್ಲಿ ಸಂಧಾನದ ಅವಶ್ಯಕತೆ ಇತ್ತೇ? ಅಯೋಧ್ಯೆಯಲ್ಲಿ ರಾಮಮಂದಿರ ಇದ್ದಿದ್ದು ದೇವರಿದ್ದಷ್ಟೇ ನಿಶ್ಚಿತ ಎಂದಾದ ಮೇಲೆ ಸಂಧಾನ ಏಕೆ’ ಎಂದು ಶ್ರೀಗಳು ಪ್ರಶ್ನಿಸಿದರು.
ಚುನಾವಣೆಗೂ ರಾಮಮಂದಿರಕ್ಕೂ ಸಂಬಂಧವಿಲ್ಲ. ಸಂಧಾನ ಎರಡೂ ಸಮುದಾಯಗಳಿಗೂ ಸಮ್ಮತವಾಗಿರಲಿ. ಆದರೆ, ಸಮ್ಮತವಾಗುವ ಸಂಶಯವಿದೆ. ಸಮಸ್ಯೆ ಬಗೆಹರಿಯದಿದ್ದರೆ ಕೋರ್ಟ್ ತೀರ್ಮಾನ ತೆಗೆದುಕೊಳ್ಳಲಿ. ನ್ಯಾಯದ ರೀತಿಯಲ್ಲಿ ರಾಮಮಂದಿರ ನಿರ್ಮಾಣ ಆಗಲಿ ಎಂದು ಶ್ರೀಗಳು ಸಲಹೆ ನೀಡಿದರು.
ಸುಪ್ರೀಂಕೋರ್ಟ್ ಅಧಿಕೃತವಾಗಿ ರವಿಶಂಕರ್ ಗುರೂಜಿ ಅವರನ್ನು ಸಂಧಾನಕಾರರಾಗಿ ನೇಮಿಸಿದೆ. ಅವರ ಪ್ರಯತ್ನಕ್ಕೆ ಸಂಪೂರ್ಣ ಬೆಂಬಲ ಇದೆ. ರಾಮಮಂದಿರ ನಿರ್ಮಾಣ ವಿಳಂಬವಾಗಬಾರದು ಎಂದು ಪೇಜಾವರ ಶ್ರೀಗಳು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.