ADVERTISEMENT

ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವುದೇ ನಿಜವಾದ ಪೂಜೆ: ಪೇಜಾವರಶ್ರೀ ಅಭಿಮತ

ಮನೋನಂದನ ಕೇಂದ್ರದ ರಜತ ಮಹೋತ್ಸವ ಸಮಾರಂಭ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2022, 21:34 IST
Last Updated 13 ಮಾರ್ಚ್ 2022, 21:34 IST
ನಗರದಲ್ಲಿ ಭಾನುವಾರ ನಡೆದ ಮನೋನಂದನ ಕೇಂದ್ರದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಮಕ್ಕಳು ಯಕ್ಷಗಾನ ಪ್ರಸ್ತುತ ಪಡಿಸಿದರು.  – ಪ್ರಜಾವಾಣಿ ಚಿತ್ರ
ನಗರದಲ್ಲಿ ಭಾನುವಾರ ನಡೆದ ಮನೋನಂದನ ಕೇಂದ್ರದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಮಕ್ಕಳು ಯಕ್ಷಗಾನ ಪ್ರಸ್ತುತ ಪಡಿಸಿದರು.  – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮಾನವೀಯ ಕಾರ್ಯಗಳಿಗೆ ನೆರವಾಗುವುದೇ ನಿಜವಾದ ಪೂಜೆ. ನೆರವಿನ ಹಸ್ತ ಚಾಚುವ ಮೂಲಕ ದುರ್ಬಲರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ಪ್ರಯತ್ನಿಸಬೇಕು’ ಎಂದು ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಸಲಹೆ ನೀಡಿದರು.

ಹಿಂದೂ ಸೇವಾ ಪ್ರತಿಷ್ಠಾನದ ಮನೋನಂದನ ಕೇಂದ್ರದ ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ’ಸಾಮಾಜಿಕ ಚಟುವಟಿಕೆಗಳಿಗೆ ಎಲ್ಲರೂ ಬೆಂಬಲ ನೀಡಬೇಕು. ಸಂಕಷ್ಟದಲ್ಲಿರುವವರಿಗೆ ಮಾನವೀಯತೆಯಿಂದ ನೆರವು ಕಲ್ಪಿಸಬೇಕು. ವಿಶೇಷ ಮಕ್ಕಳ ಆರೈಕೆಯಲ್ಲಿ ತೊಡಗಿರುವ ಮನೋನಂದನ ಕೇಂದ್ರದ ಕಾರ್ಯ ಶ್ಲಾಘನೀಯ’ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್‌ ಮಾತನಾಡಿ, ‘ವಿಶೇಷ ಮಕ್ಕಳ ಸೇವೆಯಲ್ಲಿ ತೊಡಗಿರುವ ಮನೋನಂದನ ಕೇಂದ್ರಕ್ಕೆ ಎಲ್ಲ ರೀತಿಯ ನೆರವು ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

ಮನೋನಂದನ ಕೇಂದ್ರದ ಅಧ್ಯಕ್ಷ ಮಿಲಿಂದ್‌ ಎಸ್‌. ಗೋಖಲೆ ಮಾತನಾಡಿ, ‘ಹಲವು ದಾನಿಗಳು ಮತ್ತು ಹಲವು ಕಂಪನಿಗಳು ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ನೀಡಿದ ದೇಣಿಗೆಯಿಂದ ವಿಶೇಷ ಮಕ್ಕಳ ಸೇವೆ ಕೈಗೊಳ್ಳಲು ಸಾಧ್ಯವಾಗಿದೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ವಿಶೇಷ ಮಕ್ಕಳಿಗಾಗಿ ಶೀಘ್ರದಲ್ಲೇ ಮತ್ತೊಂದು ಹೊಸ ಕೇಂದ್ರವನ್ನು ಆರಂಭಿಸಲಾಗುವುದು. ಈ ಕೇಂದ್ರದಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ಪ್ರಕಟಿಸಿದರು.

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ‘ಮನೋನಂದನ ಕೇಂದ್ರವು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ. ಕೇಂದ್ರ ಸರ್ಕಾರವು ವಿಶೇಷ ಮಕ್ಕಳ ಕಲ್ಯಾಣಕ್ಕಾಗಿ ರೂಪಿಸಿರುವ ಹಲವು ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಯುವ ಸಮುದಾಯ ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಸ್ವಯಂ ಸೇವಕರಾಗಿ ದುಡಿಯುವ ಮೂಲಕ ಸಮಾಜದಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕು. ಈ ರೀತಿಯ ಕಾರ್ಯಗಳಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ’ ಎಂದು ಹೇಳಿದರು.

ಸಂಸ್ಥಾಪಕ ನಿರ್ದೇಶಕಿ ಡಾ. ಕುಸುಮಾ ಭಟ್ಟ ಅವರನ್ನು ಈ ಸಂದರ್ಭದಲ್ಲಿಸನ್ಮಾನಿಸಲಾಯಿತು. ಇನ್‌ಫರ್‌ ಇಂಡಿಯಾ ಕಂಪನಿಯ ವ್ಯವಸ್ಥಾಪಕ ವಿ. ಕಾರ್ತಿಕ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.