1953ರ ಅಕ್ಟೋಬರ್ 29ರಂದು ಆರೆಸ್ಸೆಸ್‌ನ ಅಂದಿನ ಮುಖ್ಯಸ್ಥರಾಗಿದ್ದ ಎಮ್. ಎಸ್. ಗೋಳ್ವಳ್ಕರ್ ಜೊತೆ ಪೇಜಾವರರ ಮೊದಲ ಭೇಟಿ - ಮಾತುಕತೆ ನಡೆಯಿತು. ಆಗ ಪೇಜಾವರರು 22ರ ತರುಣ ಸನ್ಯಾಸಿ. ಉಡುಪಿಯಲ್ಲೇ ನಡೆದ ಈ ಭೇಟಿಯಲ್ಲಿ ಪೇಜಾವರರು ಆರೆಸ್ಸೆಸ್ ಮುಖ್ಯಸ್ಥರಿಗೆ ಕೇಳಿದ ಪ್ರಶ್ನೆ: ‘ನಮ್ಮ ದೇಶ ಒಡೆದು ಹೋಯಿತಲ್ಲ ಏಕೆ? ಮತ್ತೆ ಈ ದೇಶ ಒಂದಾಗಬಹುದೆ?’
ಪೇಜಾವರರಿಗೂ ಆರೆಸ್ಸೆಸ್ ಪ್ರಮುಖರಿಗೂ ನೇರ ಸಂವಹನ ಆ ದಿನಗಳಿಂದಲೇ ಇತ್ತು. 60ರ ದಶಕದಲ್ಲಿ ಆದು ಮತ್ತಷ್ಟು ಗಟ್ಟಿಯಾಯಿತು. ಸಂವಹನ ಮಾತಿಗಷ್ಟೆ ಉಳಿಯದೆ ಕ್ರಿಯೆಗೂ ಇಳಿಯಿತು. 1965ರಲ್ಲಿ ಆರಂಭವಾದ ವಿಶ್ವ ಹಿಂದೂ ಪರಿಷತ್‌ನ ಮೂಲ ಆಧಾರ ಸ್ತಂಭಗಳಲ್ಲಿ ಪೇಜಾವರರು ಒಬ್ಬರು. 1967ರಲ್ಲಿ ಪ್ರಯಾಗದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ತಿನ ಮೊದಲ ಜಾಗತಿಕ ಸಮ್ಮೇಳನದ ಘೋಷವಾಕ್ಯ - ‘ಯಾವ ಹಿಂದುವೂ ಪತಿತನಲ್ಲ’ (ನ ಹಿಂದುಃ ಪತಿತೋ ಭವೇತ್) ಸೂಚಿಸಿದವರು ಪೇಜಾವರರೇ. ನಂತರ ಉಡುಪಿಯಲ್ಲೆ 1969ರಲ್ಲಿ ಪೇಜಾವರರ ಆತಿಥ್ಯದಲ್ಲೇ ಮತ್ತೊಂದು ಸಮ್ಮೇಳನ ಆಯೋಜನೆ ಆಯಿತು. ಈ ಸಮ್ಮೇಳನದ ಉದ್ದೇಶ ‘ಹಿಂದು ಸಮಾಜವನ್ನು ಕಾಡುತ್ತಿರುವ ಅಸ್ಪೃಶ್ಯತೆ ಶಾಸ್ತ್ರ ಸಮ್ಮತವೇ?’ ಎಂಬುವುದನ್ನು ಚರ್ಚಿಸುವುದಾಗಿತ್ತು. ಕರ್ನಾಟಕದ ಸಿದ್ದಗಂಗೆ, ಸುತ್ತೂರು, ಧರ್ಮಸ್ಥಳ, ಶ್ರವಣಬೆಳಗೊಳ ಸೇರಿದಂತೆ ದೇಶದ ಎಲ್ಲೆಡೆಯಿಂದ 600ಕ್ಕೂ ಹೆಚ್ಚು ಧಾರ್ಮಿಕ ನೇತಾರರು ಪಾಲ್ಗೊಂಡಿದ್ದರು. ಆ ಮೂರು ದಿನಗಳ ಸಮ್ಮೇಳನದ ಅಧ್ಯಕ್ಷತೆ ವಹಿಸಿದವರು ಕರ್ನಾಟಕದ ಮೊದಲ ದಲಿತ ಐ. ಎ. ಎಸ್. ಅಧಿಕಾರಿ ಭರಣಯ್ಯನವರು. ಈ ಸಮ್ಮೇಳನದ ಘೋಷವಾಕ್ಯ - ‘ಹಿಂದುಗಳೆಲ್ಲರು ಸೋದರರು’ (ಹಿಂದವಃ ಸೋದರಾಃ ಸರ್ವೇ) ಕೊಟ್ಟವರೂ ಪೇಜಾವರರೇ. ಸಮ್ಮೇಳನ ‘ಹಿಂದು ಧರ್ಮದಲ್ಲಿ ಅಸ್ಪೃಶ್ಯತೆಗೆ ಸ್ಠಾನವಿಲ್ಲ, ಅದೂ ಶಾಸ್ತ್ರ ಸಮ್ಮತವೂ ಅಲ್ಲ, ಅಸ್ಪೃಶ್ಯತೆಯನ್ನು ಬೇರುಸಹಿತ ಕಿತ್ತು ಹಾಕಬೇಕು’ ಎಂಬ ನಿರ್ಣಯ ಘೋಷಿಸಿದಾಗ ಅಧ್ಯಕ್ಷತೆ ವಹಿಸಿದ್ದ ಭರಣಯ್ಯನವರ ಕಣ್ಣುಗಳು ತೇವವಾಗಿದ್ದವು ಎಂದು ಪೇಜಾವರರು ಅನೇಕ ಸಲ ಸ್ಮರಿಸಿದ್ದಾರೆ. ಈ ಸಮ್ಮೇಳನ ಗೋಳ್ವಳ್ಕರ್ ಮತ್ತು ಪೇಜಾವರರನ್ನು ಮತ್ತಷ್ಟು ಹತ್ತಿರಕ್ಕೆ ತಂದಿತು. ‘ಅಸ್ಪೃಶ್ಯತೆ ಸವರ್ಣೀಯ ಸಮಾಜದ ಮನಸ್ಸಿನ ಕಾಯಿಲೆ, ಈ ಕಾಯಿಲೆಯ ನೋವು ತಿನ್ನುತ್ತಿರುವವರು ದಲಿತರು’ - ಎಂದಿದ್ದರು ಗೋಳ್ವಳ್ಕರ್.
ಉಡುಪಿಯ ಈ ಸಮ್ಮೇಳನದ ಎರಡು ವಿದ್ಯಮಾನಗಳಿಗೆ ಕಾರಣವಾಯಿತು.
ಉಡುಪಿ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದವರು ತರುಣವೈದ್ಯ ಡಾ. ವಿ. ಎಸ್. ಆಚಾರ್ಯ. ಬಿಜೆಪಿಯ ಅಂದಿನ ಸ್ವರೂಪವಾದ ಜನಸಂಘ 1971ರಲ್ಲಿ ನೆಡೆದ ಪುರಸಭಾ ಚುನಾವಣೆಯಲ್ಲಿ ಉಡುಪಿಯಲ್ಲಿ ಅಧಿಕಾರಸೂತ್ರ ಹಿಡಿಯಿತು. ಡಾ. ಆಚಾರ್ಯ ಪುರಸಭೆಯ ಅಧ್ಯಕ್ಷರಾದರು. 1971ರಲ್ಲೇ ಉಡುಪಿ ಪುರಸಭೆ ಮಲಹೊರುವ ಪದ್ಧತಿಯನ್ನು ನಿಷೇಧಿಸಿತು; ಇಡೀ ಪಟ್ಟಣದ ಒಳಚರಂಡಿ ವ್ಯವಸ್ಥೆಯನ್ನು ಮಾರ್ಪಡಿಸಿತು. ಎರಡು ವರ್ಷದ ತರುವಾಯ ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿದ್ದ ಬಸವಲಿಂಗಪ್ಪ ಇಡೀ ರಾಜ್ಯದಲ್ಲಿ ಮಲಹೊರುವ ಪದ್ದತಿಯನ್ನು ನಿಷೇಧಿಸಿದರು. ‘ಸವರ್ಣೀಯ ಮನಸ್ಸಿನವರು’ ಎಂಬ ದೂಷಣೆಗೆ ಒಳಗಾಗಿದ್ದ ರಾಜಕೀಯ ಗುಂಪೊಂದು ಉಡುಪಿಯಲ್ಲಿ ಐತಿಹಾಸಿಕ ನಿರ್ಧಾರ ಕೈಗೊಳ್ಳುವುದರ ಹಿಂದೆ ಪೇಜಾವರರ ಒತ್ತಾಸೆ ಕೆಲಸ ಮಾಡಿದೆ. ಈ ಇಡೀ ಘಟನೆಯನ್ನು 1997ರಲ್ಲಿ ನಡೆದ ಸುವರ್ಣ ಸ್ವಾತಂತ್ರ್ಯದ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಸ್ಮರಿಸಿದ್ದಾರೆ .
ಉಡುಪಿ ಸಮ್ಮೇಳನದ ಮತ್ತೊಂದು ಫಲಶ್ರುತಿ ಪೇಜಾವರರ ದಲಿತ ಕೇರಿಗಳಲ್ಲಿನ ಸಾಮರಸ್ಯ ಪಾದಯಾತ್ರೆ. 1970ರಲ್ಲಿ ಬೆಂಗಳೂರಿನ ಮಲ್ಲೇಶ್ವರದ ಗಬ್ಬಾರ ಕಾಲೋನಿಯ ದಲಿತರ ಓಣಿಗಳಲ್ಲಿ ಪೇಜಾವರರು ಪಾದಯಾತ್ರೆ ನಡೆಸಿದರು. ‘ಸಮಾಜದ ನಿಕೃಷ್ಟತೆಗೆ ಒಳಗಾದ ಹರಿಜನರಲ್ಲಿ ಶ್ರೀಕೃಷ್ಣನನ್ನು ಕಂಡೆ’ ಎಂದ್ದಿದ್ದರು. ಆದರೆ ಈ ಯಾತ್ರೆ ಸನಾತನಿಗಳಿಂದ ತೀವ್ರ ಟೀಕೆಗೆ ಒಳಗಾಯಿತು. ಪ್ರಗತಿಪರರೂ ‘ಇದು ಬರೀ ನಾಟಕ’ ಎಂದು ಜರಿದರು. ಆದೇ ಸಮಯದಲ್ಲಿ ಪುರಿ ಸ್ವಾಮೀಜಿಯೊಬ್ಬರು ಅಸ್ಪೃಶ್ಯತೆಯನ್ನು ಸಮರ್ಥಿಸಿ ಮಾತನಾಡಿದ್ದರು.
‘ತಪ್ಪು ಅರ್ಥ ಹಚ್ಚಿ ನನ್ನ ಪ್ರಾಮಾಣಿಕತೆಯನ್ನು ಪ್ರಶ್ನಿಸಲಾಗುತ್ತಿದೆ, ನನಗೆ ತುಂಬಾ ನೋವಾಗಿದೆ. ಇದು ಹೀಗೆ ಮುಂದುವರಿದರೆ ಪೀಠತ್ಯಾಗ ಮಾಡಿ, ಬಿಡಿಸನ್ಯಾಸಿಯಾಗಿ ಈ ಕೆಲಸ ಮುಂದುವರಿಸುವೆ’ ಎಂದು ಹೇಳಿಕೊಂಡಿದ್ದರೆಂದು ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ದಾಖಲಿಸಿದ್ದಾರೆ. ಪೀಠದಲ್ಲಿದ್ದೇ ಇದನ್ನು ನೀವು ಸಾಧಿಸಬೇಕು, ಅಂತಿಮವಾಗಿ ಪರಿವರ್ತನೆ ಬರಬೇಕಾದ್ದು ಸವರ್ಣೀಯ ಸಮಾಜದ ಮಾನಸಿಕತೆಯಲ್ಲಿ ಎಂದು ಆರೆಸ್ಸೆಸ್ ಪ್ರಮುಖರು ಪೇಜಾವರರ ಬೆಂಬಲಕ್ಕೆ ನಿಂತರು. ಅನಂತರ ಅನೇಕ ದಲಿತ ಕೇರಿಗಳಲ್ಲಿ ಸ್ವಾಮೀಜಿ ಪಾದಯಾತ್ರೆ ಮಾಡಿದ್ದಾರೆ. 2006ರಲ್ಲಿ ಗೋಳ್ವಳ್ಕರ್‌ರವರ ಜನ್ಮಶತಮಾನದ ಹಿನ್ನೆಲೆಯಲ್ಲಿ ಈ ಯಾತ್ರೆ ಮತ್ತೂ ವ್ಯಾಪಕತೆ ಪಡೆಯಿತು.
ಬ್ರಾಹ್ಮಣಕೇರಿಯೆನಿಸಿದ ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿ2009ರಲ್ಲಿ ನಡೆದ ಮಾದಾರಚನ್ನಯ್ಯ ಸ್ವಾಮೀಜಿಯವರ ಪಾದಯಾತ್ರೆ ದೊಡ್ಡ ತಿರುವನ್ನೇ ಕೊಟ್ಟಿತು. ಬ್ರಾಹ್ಮಣಕೇರಿಯ ಪಾದಯಾತ್ರೆ ಮಾದಾರಚನ್ನಯ್ಯನವರ ಕೇಂದ್ರಿತವಾಗಿ ನಡೆಯಬೇಕೆಂದು ಪೇಜಾವರರು ತಾವು ಹಿಂದೆ ಉಳಿದರು, ಕೊನೆಯ ಸಭಾ ಕಾರ್ಯಕ್ರಮಕ್ಕೆ ಬಂದು ಸೇರಿಕೊಂಡರು.
ಕೆ. ಜಿ. ಎಫ್.ನ ಪಾದಯಾತ್ರೆ ಬೆಳಗ್ಗೆ 9ಕ್ಕೆ ಆರಂಭವಾದದ್ದು ಮಧ್ಯಾಹ್ನ 3ರವರೆಗೆ ನಡೆದರೂ ಸ್ವಾಮೀಜಿ ಉತ್ಸಾಹದಿಂದಲೇ ಹೆಜ್ಜೆ ಹಾಕಿದ್ದರು. 2009ರ ಸಂದರ್ಭದಲ್ಲಿ ಬೆಂಗಳೂರಿನ ಡಿ. ಎಸ್. ಎಸ್. ಕಾರ್ಯಕರ್ತ ಸೂರನಹಳ್ಳಿ ಶ್ರೀನಿವಾಸ್ ಪೇಜಾವರರಿಗೆ ಪತ್ರ ಬರೆದು ತನ್ನ ಹಳ್ಳಿಗೆ ಬಂದು ದೇವಸ್ಥಾನ ಪ್ರವೇಶ ದೊರಕಿಸಿಕೊಡುವಂತೆ ಸವಾಲು ಹಾಕಿದ್ದರು. ಚಳ್ಳಕೆರೆ ತಾಲೂಕಿನ ಸೂರನಹಳ್ಳಿಗೆ ಬಂದ ಸ್ವಾಮೀಜಿ ತಾವೇ ಗುಡಿಯಲ್ಲಿ ಪೂಜೆ ನೆರವೇರಿಸಿ ಎಲ್ಲರೂ ಪ್ರವೇಶ ಮಾಡುವಂತೆ ಮಾಡಿದರು. ಈಗ ಆ ಹಳ್ಳಿಯಲ್ಲಿ ಪೇಜಾವರರ ಭೇಟಿಯ ನೆನಪಿಗೆ ಉದ್ಯಾನವನವನ್ನು ನಿರ್ಮಿಸಲಾಗಿದೆ.
ಮೈಸೂರಿನ ಜಯಲಕ್ಷ್ಮಿಪುರಂನ ರಾಘವೇಂದ್ರ ಸ್ವಾಮಿ ಮಠದ ಪ್ರಾಂಗಣದಲ್ಲಿನ ದಾನಿಗಳ ಪಟ್ಟಿಯಲ್ಲಿ ಭಾಗ್ಯಲಕ್ಷ್ಮಿ ಶ್ರೀನಿವಾಸಪ್ರಸಾದ್ ಹೆಸರು ಕಂಡ ಸ್ವಾಮೀಜಿ ಹೆಚ್ಚಿನ ವಿವರ ಕೇಳಿ ಪಡೆದರು; ಹತ್ತಿರದಲ್ಲೇ ಹಿರಿಯ ರಾಜಕಾರಿಣಿ ಶ್ರೀನಿವಾಸಪ್ರಸಾದ್ ಮನೆಯಿದೆ ಎಂದು ತಿಳಿದು ತಕ್ಷಣವೇ ದಿಢೀರ್ ಭೇಟಿಕೊಟ್ಟಿದ್ದರು. ದಲಿತ ಕೇರಿಯ ಪಾದಯಾತ್ರೆಗಳ ಬಗ್ಗೆ ಕುತೂಹಲಗೊಂಡ ಕವಿ ಕೆ. ಬಿ. ಸಿದ್ದಯ್ಯ ಸ್ವಾಮೀಜಿಯವರನ್ನು ತಮ್ಮ ತುಮಕೂರಿನ ಮನೆಗೆ ಆಹ್ವಾನಿಸಿ ಬರಮಾಡಿಕೊಂಡಿದ್ದರು.
ಕೆಲವರ್ಷಗಳ ಹಿಂದೆ ರಾಷ್ಟ್ರೋತ್ಥಾನ ಸಾಹಿತ್ಯ ಹೊರತಂದ ‘ಸಾಮಾಜಿಕ ಕ್ರಾಂತಿಸೂರ್ಯ ಡಾ. ಅಂಬೇಡ್ಕರ್’ ಪುಸ್ತಕ ಬಿಡುಗಡೆಗೆ ಮಂಗಳೂರಿನಲ್ಲಿ ಆಗಮಿಸಿದ್ದ ಸ್ವಾಮೀಜಿ - 1935ರಲ್ಲಿ ಡಾ. ಅಂಬೇಡ್ಕರ್‌ರವರ ‘ನಾನು ಹಿಂದುವಾಗಿ ಹುಟ್ಟಿದ್ದೇನೆ ನಿಜ, ಆದರೆ ಹಿಂದುವಾಗಿಯೇ ಸಾಯಲಾರೆ’ ಎಂಬ ಹೇಳಿಕೆಯನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ‘ಒಬ್ಬ ವಿದ್ಯಾವಂತ ಯುವಕನಿಗೆ ಹೀಗೆ ಅನ್ನಿಸಿತಾದರು ಏಕೆ? ನಾನು ಹಿಂದು ಧರ್ಮ ಬಿಟ್ಟು ಹೋಗುತ್ತೇನೆ ಎಂದರೂ ಯಾವೊಬ್ಬ ಮಠಾಧೀಶರೂ ಅಂಬೇಡ್ಕರ್‌ರನ್ನು ಕಂಡು ಸಂತೈಸಲ್ಲಿಲ್ಲವೇಕೆ? ಇದೊಂದು ಪ್ರಮಾದ. ಈ ಪ್ರಮಾದಕ್ಕಾಗಿ ಎಲ್ಲ ಹಿಂದು ಮಠಾಧೀಶರ ಪರವಾಗಿ ನಾನು ಅಂಬೇಡ್ಕರ್‌ರವರ ಕ್ಷಮೆ ಯಾಚಿಸುವೆ’ ಅಂದಿದ್ದರು.
ಕೆಲ ತಿಂಗಳ ಹಿಂದೆ ಒಳಮೀಸಲಾತಿ ಹೋರಾಟಗಾರರ ತಂಡ ಮೈಸೂರಿಗೆ ತೆರಳಿ ಪೇಜಾವರರನ್ನು ಭೇಟಿಮಾಡಿ ಮನವಿ ಸಲ್ಲಿಸಿತು. ಆಗ ಸ್ವಾಮೀಜಿ ‘ಕಳೆದ ತಿಂಗಳು ದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದೆ. ಆಗ ಅವರಿಗೆ ಕರ್ನಾಟಕದಲ್ಲಿ ಎಲ್ಲ ದಲಿತರಿಗೆ ನ್ಯಾಯ ಸಿಗಲು ಒಳಮೀಸಲಾತಿ ಜಾರಿಗೆ ತರಬೇಕೆಂದು ಹೇಳಿದ್ದೇನೆ. ಸದಾಶಿವ ಆಯೋಗ ಮಾದಿಗರಿಗೆ ಶೇ. 6, ಹೊಲೆಯರಿಗೆ ಶೇ. 5 ಮೀಸಲಾತಿ ಸಿಗಬೇಕೆಂದು ಹಂಚಿಕೆ ಮಾಡಿದೆ ನಿಜ. ಆದರೆ ನೀವಿಬ್ಬರೂ ಶೇ. 5.5ರಷ್ಟು ಹಂಚಿಕೊಂಡು ಅಣ್ಣತಮ್ಮಂದಿರಂತೆ ಇರಿ’ ಎಂದು ಹೇಳಿದ್ದರು.
ಸಾಮಾಜಿಕ ಕಾರಣಕ್ಕಾಗಿ ಪೇಜಾವರರಷ್ಟು ಉಪವಾಸ ಮಾಡಿದ ಮತ್ತೊಬ್ಬ ಧಾರ್ಮಿಕ ನಾಯಕರಿಲ್ಲ ಅನಿಸುತ್ತದೆ. ಎಲ್ಲೇ ದಲಿತರ ಮೇಲೆ ಹಲ್ಲೆ, ದೌರ್ಜನ್ಯ ನಡೆದರೂ ಪ್ರಾಯಶ್ಚಿತ್ತಕ್ಕಾಗಿ ಪೇಜಾವರರು ಒಂದು ದಿನ ಉಪವಾಸ ಮಾಡುತ್ತಿದ್ದರು. ಮಂಗಳೂರಿನಲ್ಲಿ ಎಸ್.ಈ.ಝಡ್.ನ ಎರಡನೇ ಹಂತಕ್ಕಾಗಿ ಎರಡು ಸಾವಿರ ಎಕರೆ ಭೂಮಿ ವಶಪಡಿಸಿಕೊಂಡಾಗ
ಸ್ವಾಮೀಜಿ ಉಪವಾಸಕ್ಕೆ ಮುಂದಾದರು. ತಕ್ಷಣ ಅಂದಿನ ಬಿಜೆಪಿ ಸರ್ಕಾರ ರೈತರಿಗೆ ಭೂಮಿಯನ್ನು ಬಿಟ್ಟುಕೊಟ್ಟಿತು. ಮಂಗಳೂರು ಸಮೀಪದ ಪೆರ್ಮುದೆ ಎಂಬಲ್ಲಿ ಕಾರಣವಿಲ್ಲದೆ ಭೂಮಿ ಕಳೆದುಕೊಂಡು ಬೀದಿಗೆ ಬಂದಿದ್ದ 11 ಕುಡುಬಿ ಸಮುದಾಯದ ಕುಟುಂಬಗಳ ಹಕ್ಕಿಗಾಗಿ ಸ್ವಾಮೀಜಿ ನಿರಶನ ಕುಳಿತರು. ‘ತಿಂದು ತೇಗಿದವರು ಸುಸ್ತಾಗುತ್ತಾರೆ; ಉಪವಾಸದಿಂದ ನನ್ನಲ್ಲಿ ಚೈತನ್ಯ ಹೆಚ್ಚುತ್ತದೆ’ ಎನ್ನುತ್ತಿದ್ದರು ಸ್ವಾಮೀಜಿ.
ನಕ್ಸಲರ ಗುಂಪು ಸೇರಿ ಜೈಲು ಪಾಲಾಗಿದ್ದ ಮಲ್ಲಿಕಾಳ ಕಾಡಂಚಿನ ಮನೆಯ ಮುಂದೆ ಜೀಪು ನಿಂತಾಗ ಮನೆಮಂದಿಗೆ ಪೊಲೀಸರು ಬಂದರು. ಮತ್ತೇನು ಕಾದಿದೆಯೊ ಎಂಬ ಅತಂಕ. ಆದರೆ ಜೀಪಿನಿಂದ ಇಳಿದಿದ್ದು ಪೇಜಾವರ ಸ್ವಾಮೀಜಿ! ನಕ್ಸಲರಿಂದ ಹತನಾದ ಮೆಣಸಿನ ಹಾಡ್ಯದ ಶೇಷಪ್ಪಗೌಡ್ಲುವಿನ ಮಗ ಪ್ರವೀಣನ ಉನ್ನತ ವ್ಯಾಸಂಗಕ್ಕೆ ನೆರವಾದವರು ಸ್ವಾಮೀಜಿ. ಪ್ರವಾಹ, ಬರಗಾಲ, ಭೂಕಂಪದ ಸಂತ್ರಸ್ತರಿಗೆ ನೆರವು ನೀಡಲು ದೂರದ ಗುಜರಾತ್, ಒರಿಸ್ಸಾ, ಬಿಹಾರ, ಆಂಧ್ರಪ್ರದೇಶಗಳಿಗೆ ತೆರಳಿ ವಾರಗಟ್ಟಲೆ ಕೆಲಸ ಮಾಡಿದ್ದಾರೆ.
ದಲಿತ ಕೇರಿಗಳ ಸಾಮರಸ್ಯ ಯಾತ್ರೆಗಳಲ್ಲಿ ರಾಮ, ಕೃಷ್ಣ, ಭರತ, ಪ್ರಹ್ಲಾದ, ಶಬರಿ, ರಂತಿದೇವರ ಕಥೆಗಳ ಮೂಲಕ ಸಂದೇಶ ಕೊಡುತ್ತಿದ್ದವರು ಸ್ವಾಮೀಜಿ. ತಮ್ಮ ಬಾಲ್ಯದ ಘಟನೆಯೊಂದನ್ನು ತಪ್ಪದೆ ಉಲ್ಲೇಖಿಸುತ್ತಿದ್ದರು. ವಿಶ್ವೇಶತೀರ್ಥ ಸ್ವಾಮೀಜಿ ಸನ್ಯಾಸಕ್ಕೂ ಮುಂಚೆ ಪೂರ್ವಾಶ್ರಮದಲ್ಲಿ ವೆಂಕಟರಮಣರಾಗಿದ್ದರು. ಉಪ್ಪಿನಂಗಡಿ ಸಮೀಪದ ರಾಮಕುಂಜದ ಮನೆಯ ಪಕ್ಕದಲ್ಲಿ ಆಟವಾಡುತ್ತಿದ್ದ ಐದು ವರ್ಷದ ವೆಂಕಟರಮಣ ಕಾಲು ಜಾರಿ ನೀರಿನ ಹೊಂಡದಲ್ಲಿ ಬಿದ್ದಿದ್ದ. ಅನತಿ ದೂರದಲ್ಲಿದ್ದ ಓಡಿ ಎಂಬ ದಲಿತರ ಬಾಲಕ - ಹುಡುಗ ನೀರಿಗೆ ಬಿದ್ದನೆಂದು - ಕಿರುಚಿಕೊಂಡ. ಓಡಿಯ ಅಪ್ಪ ಚೋಮ ತಕ್ಷಣ ನೆರವಿಗೆ ಬಂದಿದ್ದರಿಂದ ವೆಂಕಟರಮಣ ಉಳಿದ.
ನನ್ನನ್ನು ಉಳಿಸಿದ್ದೇ ದಲಿತರ ಓಡಿ ಮತ್ತು ಚೋಮ. ನಿಮ್ಮ ಸೇವೆ ಮಾಡಿಯೇ ನಾನವರ ಋಣ ತೀರಿಸಬೇಕಿದೆ ಎನ್ನುತ್ತಿದ್ದರು ಸ್ವಾಮೀಜಿ.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.