ಬೆಂಗಳೂರು: ಅನನ್ಯ ಕೃಷ್ಣ ಭಕ್ತಿ, ಪ್ರಖರ ಚಿಂತನೆ, ಜನಪರ ಕಾಳಜಿ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಸೇವೆಯ ಮೂಲಕ ಜಗದಗಲ ಭಕ್ತರನ್ನು ಸಂಪಾದಿಸಿದ್ದ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಶನಿವಾರ ಲಕ್ಷಾಂತರ ಭಕ್ತರ ಕಂಬನಿಯ ಅಭಿಷೇಕದೊಂದಿಗೆ ವಿದ್ಯಾಪೀಠದಲ್ಲಿ ಬೃಂದಾವನಸ್ಥರಾದರು.
ಸಾವಿರಾರು ಕಂಠಗಳಿಂದ ಮೊಳಗಿದ ‘ಹರಿ ಸರ್ವೋತ್ತಮ ವಾಯು ಜೀವೋತ್ತಮ’ ಘೋಷಣೆಯೊಂದಿಗೆ ಶಾಶ್ವತ ಧ್ಯಾನಕ್ಕೆ ಕುಳಿತ ಶ್ರೀಗಳನ್ನು ಅಪಾರ ಕಣ್ಣುಗಳು ಕೊನೆಯ ಬಾರಿ ತುಂಬಿಕೊಂಡವು.
ಮಠದ ಭಕ್ತರಷ್ಟೇ ಅಲ್ಲ, ಹಲವು ಜಾತಿ–ಧರ್ಮಗಳ ಜನರೂ ಸ್ವಾಮೀಜಿಯನ್ನು ಕೊನೆಯ ಬಾರಿ ನೋಡಲು ಬಂದುದಕ್ಕೆ ಉಡುಪಿ ಕೃಷ್ಣಮಠವಷ್ಟೇ ಅಲ್ಲ, ನಗರದ ನ್ಯಾಷನಲ್ ಕಾಲೇಜು ಮೈದಾನ ಮತ್ತು ವಿದ್ಯಾಪೀಠದ ಆವರಣ ಸಾಕ್ಷಿಯಾದವು.
ತಮ್ಮ ಬೃಂದಾವನವನ್ನು ಬೆಂಗಳೂರಿನ ವಿದ್ಯಾಪೀಠದ ಆವರಣದಲ್ಲೇ ನಿರ್ಮಿಸಬೇಕು ಎಂಬುದು ಸ್ವಾಮೀಜಿ ಬಯಕೆಯಾಗಿತ್ತು. ಆ ಪ್ರಕಾರವೇ ಅವರ ಪಾರ್ಥಿವ ಶರೀರವನ್ನು ವಾಯುಪಡೆಯ ಹೆಲಿಕಾಪ್ಟರ್ ಮೂಲಕ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ತಂದು, ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಯಿತು. ಅಲ್ಲಿ ದರ್ಶನಕ್ಕಾಗಿ ಜನ ಸಾಗರೋಪಾದಿಯಲ್ಲಿ ಹರಿದು ಬಂದರು. ಬಳಿಕ ಸಂಜೆ ಕತ್ರಿಗುಪ್ಪೆಯ ಪೂರ್ಣಪ್ರಜ್ಞ ವಿದ್ಯಾಪೀಠದ ಆವರಣಕ್ಕೆ ತಂದಾಗ ಜನ ಗದ್ಗದಿತರಾಗಿದ್ದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಸ್ವಲ್ಪ ಹೊತ್ತು ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಯಿತು. ಬಳಿಕ ಪಾರ್ಥಿವ ಶರೀರವನ್ನುಬಿದಿರಿನ ಬುಟ್ಟಿಯಲ್ಲಿ ಕೂರಿಸಿ ವಿದ್ಯಾಪೀಠದ ಸುತ್ತ ಪ್ರದಕ್ಷಿಣೆ ಮಾಡಿ ಬೃಂದಾವನ ಸ್ಥಳಕ್ಕೆ ತರಲಾಯಿತು. ಮೊದಲಿಗೆ ದೇಹಕ್ಕೆ ಸ್ನಾನ ಮಾಡಿಸಿ, ನಂತರ ಗೋಪಿ ಚಂದನ, ಮುದ್ರಾಧಾರಣೆ ಮಾಡಲಾಯಿತು.
ಶ್ರೀಕೃಷ್ಣನಿಗೆ ಪೂಜೆ ಮಾಡಿಸಲಾಯಿತು. ದೇವಸ್ಥಾನದ ಪಕ್ಕದ ಉದ್ಯಾನದಲ್ಲಿ ತಾತ್ಕಾಲಿಕವಾಗಿ ಮಾಡಿದ್ದ ಬೃಂದಾವನದ ಗುಂಡಿಯಲ್ಲಿ ಶರೀರವನ್ನು ಸ್ವಸ್ತಿಕಾಸನದಲ್ಲಿ ಇರಿಸಲಾಯಿತು. ಶ್ರೀಗಳ ಬ್ರಹ್ಮರಂಧ್ರಕ್ಕೆ ತೆಂಗಿನಕಾಯಿ ಇಡಲಾಯಿತು. ಸಾಸಿವೆ, ಉಪ್ಪು, ಹತ್ತಿಯನ್ನು ಹಾಕಲಾಯಿತು. ಗಿಂಡಿ, ತುಳಸಿ ಮಾಲೆ, ಪೂಜಾ ಸಾಮಗ್ರಿ ಇಡಲಾಯಿತು. ಬಳಿಕ ಬೃಂದಾವನವನ್ನು ಮಣ್ಣಿನಿಂದ ಮುಚ್ಚಲಾಯಿತು. ವಿವಿಧ ಪುಣ್ಯಕ್ಷೇತ್ರಗಳಿಂದ ತಂದಿದ್ದ ಮಣ್ಣನ್ನೂ ಹಾಕಲಾಯಿತು.
‘ಬೃಂದಾವನದ ಮೇಲೆ ಪಾತ್ರೆ ಇಟ್ಟು ಅದರಲ್ಲಿ ಸಾಲಿಗ್ರಾಮ ಇರಿಸಲಾಯಿತು. ಪಾತ್ರೆಯಲ್ಲಿ ರಂಧ್ರವಿರುತ್ತದೆ. ಪ್ರತಿದಿನ ಪೂಜೆ ಮಾಡಿದ ಬಳಿಕ ನೀರನ್ನು ಸಾಲಿಗ್ರಾಮಕ್ಕೆ ಸುರಿಯಲಾಗುತ್ತದೆ. ಆ ನೀರು ಅವರ ದೇಹದ ಮೇಲೆ ಬೀಳುತ್ತದೆ. ಇದು ತಾತ್ಕಾಲಿಕ ಬೃಂದಾವನವಾಗಿದ್ದು, ಒಂದೆರಡು ತಿಂಗಳ ನಂತರ ಕಲ್ಲಿನ ಬೃಂದಾವನ ಪ್ರತಿಷ್ಠಾಪಿಸಲಾಗುವುದು’ ಎಂದು ಮಠದ ಮೂಲಗಳು ತಿಳಿಸಿವೆ.
ವಿದ್ಯಾಪೀಠದ ಕಾರ್ಯದರ್ಶಿ ಕೇಶವಾಚಾರ್ಯ ನೇತೃತ್ವದಲ್ಲಿ ಅಂತಿಮ ವಿಧಿವಿಧಾನಗಳು ಉಡುಪಿ ಮಾಧ್ವ ಸಂಪ್ರದಾಯದಂತೆ ನಡೆದವು.
ವೇದಾಧ್ಯಯನದ ಸ್ವರ ಕೇಳುತ್ತ...
‘ವಿದ್ಯಾರ್ಥಿಗಳ ವೇದಾಧ್ಯಯನದ ಸ್ವರವನ್ನು ನಾನು ಕೇಳುತ್ತಲೇ ಇರಬೇಕು, ಹೀಗಾಗಿ ವಿದ್ಯಾಪೀಠದಲ್ಲೇ ನನ್ನ ಬೃಂದಾವನ ಮಾಡಬೇಕು’ ಎಂಬ ಸ್ವಾಮೀಜಿ ಕೊನೆಯ ಬಯಕೆ ಭಾನುವಾರ ಈಡೇರಿತು.
ಸಿರಿಗೆರೆ ಮಠದ ಶಿವಾಚಾರ್ಯ ಸ್ವಾಮೀಜಿ, ಪೇಜಾವರ ಶ್ರೀಗಳ ಶಿಷ್ಯೆ ಉಮಾ ಭಾರತಿ, ಪ್ರಮುಖರಾದ ರಾಮಮಾಧವ,ಹೈಕೋರ್ಟ್ ನ್ಯಾಯಮೂರ್ತಿ ದಿನೇಶ್ ಕುಮಾರ್ ಸೇರಿದಂತೆ ಹಲವು ಗಣ್ಯರು ನಮನ ಸಲ್ಲಿಸಿದರು.
‘ವಿದ್ಯಾರ್ಥಿಗಳ ವೇದಾಧ್ಯಯನದ ಸ್ವರವನ್ನು ನಾನು ಕೇಳುತ್ತಲೇ ಇರಬೇಕು, ಹೀಗಾಗಿ ವಿದ್ಯಾಪೀಠದಲ್ಲೇ ನನ್ನ ಬೃಂದಾವನ ಮಾಡಬೇಕು’ ಎಂಬ ಸ್ವಾಮೀಜಿ ಕೊನೆಯ ಬಯಕೆ ಭಾನುವಾರ ಈಡೇರಿತು.
ಸಿರಿಗೆರೆ ಮಠದ ಶಿವಾಚಾರ್ಯ ಸ್ವಾಮೀಜಿ, ಪೇಜಾವರ ಶ್ರೀಗಳ ಶಿಷ್ಯೆ ಉಮಾ ಭಾರತಿ, ಪ್ರಮುಖರಾದ ರಾಮಮಾಧವ,ಹೈಕೋರ್ಟ್ ನ್ಯಾಯಮೂರ್ತಿ ದಿನೇಶ್ ಕುಮಾರ್ ಸೇರಿದಂತೆ ಹಲವು ಗಣ್ಯರು ನಮನ ಸಲ್ಲಿಸಿದರು.
ಎಂದು ಏನಾಯಿತು?
ಡಿ.20 ನಸುಕಿನ 3 ಗಂಟೆಗೆ ಪೇಜಾವರ ಶ್ರೀ ಅಸ್ವಸ್ಥ– ಕೆಎಂಸಿಗೆ ದಾಖಲು, ನ್ಯುಮೋನಿಯಾ ಸೋಂಕು ಪತ್ತೆ 21– ಚಿಕಿತ್ಸೆಗೆ ಸ್ಪಂದಿಸಿದ ಶ್ರೀಗಳು, ಆರೋಗ್ಯ ಸ್ಥಿರ 22– ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ವೈದ್ಯರ ಆಗಮನ 23– ರಕ್ತದೊತ್ತಡ ನಿಯಂತ್ರಣ, ಏಮ್ಸ್ ವೈದ್ಯರ ನೆರವು 24– ಚಿಕಿತ್ಸೆಗೆ ಅಲ್ಪ ಸ್ಪಂದನೆ; ಸ್ವಲ್ಪ ಚೇತರಿಕೆ
25– ಶ್ವಾಸಕೋಶ ಬಲಗೊಳ್ಳುವ ಮುನ್ಸೂಚನೆ, ಪ್ರಜ್ಞಾಹೀನ ಸ್ಥಿತಿ ಮುಂದುವರಿಕೆ
26– ಆರೋಗ್ಯ ದಿಢೀರ್ ಏರುಪೇರು, ಸ್ಥಿತಿ ಗಂಭೀರ
27– ಆರೋಗ್ಯ ತೀರಾ ಗಂಭೀರ, ದೇಹಸ್ಥಿತಿ ಕ್ಷಣಕ್ಷಣಕ್ಕೂ ಇಳಿಮುಖ
28– ಮಿದುಳು ನಿಷ್ಕ್ರಿಯತೆ, ಚಿಕಿತ್ಸೆಗೆ ಸ್ಪಂದನೆ ಇಲ್ಲ, ಮಠಕ್ಕೆ ಕರೆದೊಯ್ಯಲು ನಿರ್ಧಾರ
29– ಕೊನೆಯ ಆಸೆಯಂತೆ ಮಠಕ್ಕೆ ಸ್ಥಳಾಂತರ. ಬೆಳಿಗ್ಗೆ 9.20ಕ್ಕೆ ನಿಧನ
*
ಮೂರು ದಿನ ಶೋಕಾಚರಣೆ
‘ಪೇಜಾವರ ಶ್ರೀಗಳಿಗೆ ಗೌರವ ಸಲ್ಲಿಸಲು ರಾಜ್ಯದಾದ್ಯಂತ ಮೂರು ದಿನಗಳ ಶೋಕಾಚರಣೆ ಇರಲಿದೆ. ಅಪರೂಪದ ರಾಜ ಋಷಿಯನ್ನು ಕಳೆದುಕೊಂದು ದೇಶ ಬಡವಾಗಿದೆ’ ಎಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಸರ್ಕಾರಿ ಗೌರವದೊಂದಿಗೆ ಶ್ರೀಗಳ ಅಂತ್ಯಕ್ರಿಯೆ ನಡೆಸಿದ್ದಾಗಿ ತಿಳಿಸಿದರು.
**
‘ಕೃಷ್ಣನೂರು ಸ್ತಬ್ಧ’
ಶ್ರೀಗಳ ಸಾವಿನ ಸುದ್ದಿ ಹೊರ ಬೀಳುತ್ತಿದ್ದಂತೆ ಉಡುಪಿ ಸ್ತಬ್ಧ ಗೊಂಡಿತು. ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಗೌರವ ಸಲ್ಲಿಸಿದರು. ಬೆಳಿಗ್ಗೆ 7ರಿಂದ 11ರವರೆಗೂ ಕೃಷ್ಣಮಠಕ್ಕೆ ಭಕ್ತರ ಪ್ರವೇಶ ಇರಲಿಲ್ಲ. ಸದಾ ಗಿಜಿಗುಡುತ್ತಿದ್ದ ರಥಬೀದಿ ಖಾಲಿ ಹೊಡೆಯುತ್ತಿತ್ತು.
**
ಸೇವೆ ಹಾಗೂ ಆಧ್ಯಾತ್ಮಿಕತೆಯ ಶಕ್ತಿಕೇಂದ್ರವಾಗಿದ್ದ ವಿಶ್ವೇಶತೀರ್ಥ ಸ್ವಾಮೀಜಿ ಅವರು ಸಹಬಾಳ್ವೆಯ ಸಮಾಜಕ್ಕಾಗಿ ನಿರಂತರ ಕೆಲಸ ಮಾಡಿದ್ದರು.
ನರೇಂದ್ರ ಮೋದಿ, ಪ್ರಧಾನಿ
*
ಪೇಜಾವರ ಶ್ರೀಗಳು ದಯೆ, ಸಹಾನು ಭೂತಿ ಮತ್ತು ನಮ್ರತೆಯ ಸಾಕಾರ ಮೂರ್ತಿಯಾಗಿದ್ದರು. ಅವರ ಸರಳತೆ ಮತ್ತು ಉದಾತ್ತ ಗುಣಗಳು ನನಗೆ ಸ್ಫೂರ್ತಿ
-ಎಲ್.ಕೆ.ಅಡ್ವಾಣಿ ಬಿಜೆಪಿ ಹಿರಿಯ ನಾಯಕ
*
ಹಿಂದೂ ಧರ್ಮದ ಪ್ರಮುಖ ಮಾರ್ಗದರ್ಶಿಯಾಗಿದ್ದರು. ದಲಿತರೊಂದಿಗೆ ಸಹಭೋಜನ ಮಾಡುವ ಮೂಲಕ ಹಿಂದೂ ಧರ್ಮದಲ್ಲಿ ಅಸಮಾನತೆಯ ಕೂಗು ಕ್ಷೀಣಿಸುವಂತೆ ಮಾಡಿದ್ದರು
-ಬಿ.ಎಸ್.ಯಡಿಯೂರಪ್ಪ
*
ಸಮಾಜದ ಅಸಮಾನತೆಗಳ ವಿರುದ್ಧ ಧ್ವನಿಯಾಗಿದ್ದರು. ಅಧ್ಯಾತ್ಮದ ಜತೆಗೆ ಹರಿಜನ ಕೇರಿಗೆ ಪ್ರವೇಶ, ಕನಕದಾಸರ ವಿಚಾರದಲ್ಲಿ ತೋರಿದ ಗೌರವದಿಂದಾಗಿ ಜನರ ಮನಸ್ಸು ಗೆದ್ದಿದ್ದರು.
-ಎಚ್.ಡಿ.ದೇವೇಗೌಡ, ಜೆಡಿಎಸ್ ವರಿಷ್ಠ
*
ದಲಿತ ಕೇರಿಗೆ ಭೇಟಿ ನೀಡಿ ಅವರಿಂದ ಆತಿಥ್ಯ ಸ್ವೀಕರಿಸಿ ಮಾದರಿ ಆಗಿದ್ದರು. ಇದಕ್ಕೆ ವ್ಯಕ್ತವಾದ ಟೀಕೆಗಳನ್ನೂ ಸಮರ್ಥವಾಗಿ ಎದುರಿಸಿದ್ದರು.
-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.