ADVERTISEMENT

‍ಪೇಜಾವರ ಶ್ರೀ ವಿರುದ್ಧದ ಟೀಕೆಗೆ ಖಂಡನೆ

ಆರೋಪಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2018, 9:00 IST
Last Updated 8 ಆಗಸ್ಟ್ 2018, 9:00 IST
ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ (ಸಂಗ್ರಹ ಚಿತ್ರ)
ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ (ಸಂಗ್ರಹ ಚಿತ್ರ)   

ಬೆಳಗಾವಿ: ‘ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ವಿರುದ್ಧ ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಖಂಡನೀಯ’ ಎಂದು ಅವರ ಶಿಷ್ಯ ಹಾಗೂ ಇಲ್ಲಿನ ವಿದ್ಯಾವಿಹಾರ ವಿದ್ಯಾಲಯದ ಮುಖ್ಯಸ್ಥ ಪಂ.ಎನ್.ಆರ್. ವಿಜಯೀಂದ್ರ ಶರ್ಮಾ ಹೇಳಿದರು.

‘ಪೇಜಾವರ ಶ್ರಿಗಳಿಗೆ ಪತ್ನಿ, ಪುತ್ರಿ ಇದ್ದಾರೆ ಎಂಬ ಹೇಳಿಕೆಯನ್ನು ಹಿರಿಯ ರಾಜಕಾರಣಿ ಎ.ಕೆ. ಸುಬ್ಬಯ್ಯ ಈಚೆಗೆ ಮೈಸೂರಿನಲ್ಲಿ ನೀಡಿದ್ದಾರೆ. ಇದನ್ನು ಸಮಾಜದವರು ಖಂಡಿಸುತ್ತೇವೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ದೇಶದ ಧರ್ಮ ಹಾಗೂ ಸಂಸ್ಕೃತಿಯ ರಕ್ಷಣೆಗೆ ಶ್ರಮಿಸುತ್ತಿರುವ ಹಿರಿಯ ಶ್ರೀಗಳ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ಅವರ ಚಾರಿತ್ರ್ಯಕ್ಕೆ ಮಸಿ ಬಳಿಯುವಂತಹ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಇದು ತುಂಬಾ ವಿಷಾದದ ಸಂಗತಿಯಾಗಿದೆ. ‌ಶ್ರೀಗಳ ವಿರುದ್ಧ ಕೇಳಿಬರುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾದವು’ ಎಂದು ತಿಳಿಸಿದರು.

‘ಈಚೆಗೆ ವಿಧಿವಶರಾದ ಶಿರೂರು ಮಠದ ಲಕ್ಷ್ಮೀವರತೀರ್ಥ ಸ್ವಾಮೀಜಿ ಹಿಂದೆ ಆರೋಪಿಸಿದ್ದರು. ಅವರ ಶಿಷ್ಯರು ಈಗ ಮುಂದುವರಿಸಿದ್ದಾರೆ. ಸುಮ್ಮನಿದ್ದರೆ ಮೌನಂ ಸಮ್ಮತಿ ಲಕ್ಷಣಂ ಎನ್ನುವಂತೆ ಆಗುತ್ತದೆ. ಹೀಗಾಗಿ, ನಾವು ಶ್ರೀಗಳ ಪರ ದನಿ ಎತ್ತುತ್ತಿದ್ದೇವೆ. ಆರೋಪ ಮಾಡುತ್ತಿರುವವರನ್ನು ಸರ್ಕಾರ ತನಿಖೆಗೆ ಒಳಪಡಿಸಬೇಕು. ಸಾಬೀತುಪಡಿಸದಿದ್ದಲ್ಲಿ, ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಒತ್ತಾಯಿಸಿದರು.

‘ಶ್ರೀಗಳನ್ನು ಅಭಿನವ ಮಧ್ವಾಚಾರ್ಯರು ಎಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ರಾಜನಾಥ ಸಿಂಗ್, ಉಮಾಭಾರತಿ ಮೊದಲಾದವರು ಹೇಳಿದ್ದಾರೆ’ ಎಂದರು.

ಬ್ರಾಹ್ಮಣ ಸಮಾಜದ ಮುಖಂಡ ಅನಿಲ ಪೋತದಾರ ಮಾತನಾಡಿ, ‘ಕೆಲವರು ಪ್ರಸಿದ್ಧಿಗೆ ಬರುವುದಕ್ಕಾಗಿ ಬ್ರಾಹ್ಮಣ ಸಮಾಜದವರನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡುತ್ತಿದ್ದಾರೆ. ಧರ್ಮ ರಕ್ಷಕರಾದ ಪೇಜಾವರ ಶ್ರೀಗಳನ್ನು ಟೀಕಿಸಿದ್ದಾರೆ. ಮಾನಸಿಕ ಸ್ಥಿಮಿತ ಇಲ್ಲದವರು ಷಡ್ಯಂತ್ರ ರೂಪಿಸುತ್ತಿದ್ದಾರೆ. ಸಮಾಜದದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಅನವಶ್ಯ ಟೀಕೆಗಳನ್ನು ಕೂಡಲೇ ನಿಲ್ಲಿಸಬೇಕು. ಇಲ್ಲವಾದಲ್ಲಿ ಸಮಾಜದವರು ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಟೀಕಾಕಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರನ್ನು ಒತ್ತಾಯಿಸಲಾಗಿದೆ’ ಎಂದರು. ಮುಖಂಡ ಎಚ್‌.ಡಿ. ಕಾಟ್ವ ಇದ್ದರು.

ಇನ್ನಷ್ಟು ಸುದ್ದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.