ಉಡುಪಿ: ‘ಪೇಜಾವರ ಶ್ರೀಗಳ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದ್ದು, ಕಣ್ಣು ಬಿಡುತ್ತಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಶನಿವಾರ ಮಣಿಪಾಲದ ಕೆಂಎಸಿ ಆಸ್ಪತ್ರೆಗೆ ಭೇಟಿನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ತಜ್ಞ ವೈದ್ಯರ ತಂಡ ಶ್ರೀಗಳ ಆರೋಗ್ಯ ಸುಧಾರಣೆಗೆ ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದೆ. ಶ್ರೀಗಳು ಶೀಘ್ರ ಗುಣಮುಖರಾಗಿ, ಮತ್ತೆ ಕೃಷ್ಣನ ಸೇವೆ ಮಾಡುವಂತಾಗಬೇಕು ಎಂದರು.
ಪೇಜಾವರ ಶ್ರೀಗಳ ಅಪೇಕ್ಷೆಯಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ. ಮುಂದೆ ಮಂದಿರವನ್ನು ನೋಡುವ ಅವಕಾಶ ಶ್ರೀಗಳಿಗೆ ಸಿಗಲಿ ಎಂದು ಮುಖ್ಯಮಂತ್ರಿ ಹಾರೈಸಿದರು.
ಇಡೀ ದೇಶವನ್ನು ವಾಹನದಲ್ಲಿಯೇ ಸುತ್ತಿದ ಬೇರೊಬ್ಬ ಯತಿಯನ್ನು ಕಾಣಲು ಸಾಧ್ಯವಿಲ್ಲ. ವಯೋಸಹಜ ಸಮಸ್ಯೆಗಳು ಅವರನ್ನು ಕಾಡುತ್ತಿದ್ದು, ಆರೋಗ್ಯ ಸುಧಾರಿಸಲಿದೆ ಎಂದರು.
ಶ್ರೀಗಳ ಭಕ್ತರು, ಅಭಿಮಾನಿಗಳು ಆಸ್ಪತ್ರೆಗೆ ಭೇಟಿ ನೀಡುವುದು ಬೇಡ. ಗುಣಮುಖರಾಗಿ ಕೃಷ್ಣಮಠಕ್ಕೆ ಬಂದ ನಂತರ ದರ್ಶನ ಪಡೆಯಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಈಗಾಗಲೇ ದೂರವಾಣಿ ಮೂಲಕ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ ಎಂದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ ಶ್ರೀಗಳ ದೇಹದಲ್ಲಿ ಆಮ್ಲಜನಕ ಪ್ರಮಾಣ ಗಣನೀಯ ಹೆಚ್ಚುತ್ತಿದೆ. ಸೋಂಕು ಕಡಿಮೆಯಾಗುತ್ತಿದೆ. ಶೀಘ್ರ ಚೇತರಿಸಿಕೊಳ್ಳುವ ಲಕ್ಷಣಗಳು ಕಾಣುತ್ತಿವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.