ADVERTISEMENT

ಸರ್ಜಿಕಲ್‌ ಸ್ಟ್ರೈಕ್‌ ನಡೆಸಿ ಭಯೋತ್ಪಾದಕರನ್ನು ಮಟ್ಟಹಾಕಿ: ಪೇಜಾವರ ಶ್ರೀ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2019, 12:24 IST
Last Updated 15 ಫೆಬ್ರುವರಿ 2019, 12:24 IST
   

ಉಡುಪಿ: ಅಮಾಯಕ ಯೋಧರ ಸಾವಿಗೆ ಕಾರಣರಾದ ಭಯೋತ್ಪಾದಕರನ್ನು ಕೇಂದ್ರ ಸರ್ಕಾರ ಮಟ್ಟ ಹಾಕಬೇಕು. ಉಗ್ರರಿಗೆ ಮರೆಯದಂತಹ ಪಾಠ ಕಲಿಸಬೇಕು. ಆದರೆ, ಉಗ್ರರ ವಿರುದ್ಧದ ಕಾರ್ಯಾಚರಣೆ ಯುದ್ಧಕ್ಕೆ ಕಾರಣವಾಗಬಾರದು. ಯುದ್ಧ ನಡೆದರೆ ಮತ್ತಷ್ಟು ಯೋಧರು ಬಲಿದಾನ ಮಾಡಬೇಕಾಗುತ್ತದೆ. ಹಾಗಾಗಿ, ಸರ್ಜಿಕಲ್‌ ಸ್ಟ್ರೈಕ್‌ ಮಾದರಿಯ ಸೀಮಿತ ದಾಳಿ ನಡೆಸಬೇಕು ಎಂದು ಪೇಜಾವರ ಶ್ರೀಗಳು ಅಭಿಪ್ರಾಯಪಟ್ಟರು.

ಪೇಜಾವರ ಮಠದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಶ್ರೀಗಳು ಮಾತನಾಡಿದರು.

ದೇಶಕ್ಕಾಗಿ ಹುತಾತ್ಮರಾದ ಸೈನಿಕರಿಗೆ, ಸಮಾಜಕ್ಕಾಗಿ ಪ್ರಾಣ ಅರ್ಪಿಸಿದ ಯೋಗಿಗಳಿಗೆ ಸಿಗುವಂತಹ ಮೋಕ್ಷ ದೊರೆಯಲಿದೆ. ಕೇಂದ್ರ ಸರ್ಕಾರ ಯೋಧರ ಸಾವಿಗೆ ಪ್ರತಿಕಾರ ತೆಗೆದುಕೊಳ್ಳಬೇಕು ಎಂದು ಪೇಜಾವರ ಶ್ರೀಗಳು ಒತ್ತಾಯಿಸಿದರು.

ADVERTISEMENT

ರಾಮಮಂದಿರ ವಿಚಾರ: ರಾಮಮಂದಿರ ನಿರ್ಮಾಣ ವಿಚಾರದಲ್ಲಿ ಸಂವಿಧಾನ ಹಾಗೂ ಸುಪ್ರೀಂಕೋರ್ಟ್‌ ಮೀರಿ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ತಿಳಿಸಿದರು.

‘ಈಚೆಗೆ ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ ಭಾಗವಹಿಸಿ, ಆರ್‌ಎಸ್‌ಎಸ್‌ನ ಪ್ರಮುಖರು, ಕೇಂದ್ರ ಸಚಿವರು ಹಾಗೂ ವಕೀಲರ ಜತೆ ಚರ್ಚೆ ನಡೆಸಿದೆ. ರಾಮಮಂದಿರ ಪ್ರಕರಣ ನ್ಯಾಯಾಲಯದಲ್ಲಿರುವಾಗ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವುದು ಸರಿಯಲ್ಲ. ಸುಗ್ರೀವಾಜ್ಞೆ ಹೊರಡಿಸಿದರೂ ಆದೇಶ ಹೆಚ್ಚು ಕಾಲ ಉಳಿಯುವುದಿಲ್ಲ ಎಂಬ ನಿಲುವು ವಕೀಲರಿಂದ ವ್ಯಕ್ತವಾಯಿತು’ ಎಂದು ತಿಳಿಸಿದರು.

‘ಲೋಕಸಭಾ ಚುನಾವಣೆಯಲ್ಲಿ ರಾಮಮಂದಿರ ವಿಚಾರವನ್ನು ಮುಂದಿಟ್ಟುಕೊಂಡು ಹೋದರೆ ತಪ್ಪಾಗಲಿದೆ ಎಂಬ ಅಭಿಪ್ರಾಯವೂ ಕೇಳಿಬಂತು. ಕೇಂದ್ರದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ರಾಮಮಂದಿರ ನಿರ್ಮಾಣವಾಗಲೇಬೇಕು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೂ ವಿರೋಧ ಮಾಡುವುದಿಲ್ಲ. ರಾಹುಲ್‌ಗಾಂಧಿ ಕೂಡ ಸ್ವಲ್ಪ ಹಿಂದೂಗಳ ಪರವಾಗಿದ್ದಂತೆ ಕಾಣುತ್ತಿದ್ದಾರೆ’ ಎಂದು ಪೇಜಾವರ ಶ್ರೀಗಳು ಅಭಿಪ್ರಾಯಪಟ್ಟರು.

ಅಯೋಧ್ಯೆಯಲ್ಲಿ ವಿಶ್ವ ಹಿಂದೂ ಪರಿಷತ್ ಅಧೀನದಲ್ಲಿದ್ದ ವಿವಾದಾಸ್ಪದವಲ್ಲದ ಜಾಗವನ್ನು ಹಂಚಿಕೆ ಮಾಡಲು ವಿರೋಧವಿಲ್ಲ. ಆದರೆ, ವಿವಾದಿತ ಜಾಗವನ್ನು ಮಾತ್ರ ಹಂಚಿಕೆ ಮಾಡಬಾರದು ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.