ADVERTISEMENT

‘ಶಿರೂರು ಶ್ರೀಗಳು ಮದ್ಯ ಮಾನಿನಿಯ ವ್ಯಸನಿಯಾಗಿದ್ದರು’

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2018, 19:42 IST
Last Updated 29 ಆಗಸ್ಟ್ 2018, 19:42 IST
ಪೇಜಾವರ ಶ್ರೀಗಳು
ಪೇಜಾವರ ಶ್ರೀಗಳು   

ಬೆಂಗಳೂರು: ‘ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಶ್ರೀಕೃಷ್ಣನನ್ನು ಪೂಜಿಸುತ್ತಿದ್ದರೆ ಅವರ ಬಾಯಲ್ಲಿ ಮದ್ಯದ ವಾಸನೆ ಬರುತ್ತಿತ್ತು’ ಎಂದು ಉಡುಪಿ ಅಧೋಕ್ಷಜ ಮಠದ ಪೇಜಾವರ ಶ್ರೀಗಳು ನೊಂದು ನುಡಿದರು.

ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಿರೂರು ಶ್ರೀ ಮದ್ಯ, ಮಾನಿನಿಯರ ವ್ಯಸನಿ ಆಗಿದ್ದರು. ತತ್ವನಿಷ್ಠೆ, ಧರ್ಮನಿಷ್ಠೆ ತ್ಯಜಿಸಿದ್ದ ಅವರಿಗೆ ಸನ್ಯಾಸಿಯ ಗುಣಗಳು ಇರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅವರು ನನ್ನ ಮೇಲೆ ಅನೈತಿಕ ಆರೋಪ ಹೊರಿಸಿದರು. ಆದರೆ, ಈ ಪೇಜಾವರ ಸ್ವಾಮೀಜಿ ಏನು ಎಂಬುದು ಜಗತ್ತಿಗೇ ಗೊತ್ತು’ ಎಂದರು.

ADVERTISEMENT

‘ಬೇಕಾಬಿಟ್ಟಿ ಯೋಜನೆಗಳೇ ಕೊಡಗು, ದಕ್ಷಿಣ ಕನ್ನಡ ಮತ್ತು ಕೇರಳದಲ್ಲಿ ಪ್ರಕೃತಿ ಪ್ರಕೋಪಕ್ಕೆ ಕಾರಣ’ ಎಂದ ಅವರು, ‘ಚಾತುರ್ಮಾಸ್ಯ ಮುಗಿದ ನಂತರ ಕೊಡಗಿಗೆ ಭೇಟಿ ನೀಡುತ್ತೇನೆ. ಮಠದ ಟ್ರಸ್ಟ್ ವತಿಯಿಂದ ಪರಿಹಾರ ನಿಧಿಗೆ ₹ 20 ಲಕ್ಷ ನೀಡಲಾಗುವುದು’ ಎಂದರು.

‘ಎತ್ತಿಹೊಳೆ ಯೋಜನೆ ಬಗ್ಗೆ ಕೋಲಾರ, ಬೆಂಗಳೂರು, ಕರಾವಳಿ ಪ್ರದೇಶಗಳ ವಿಜ್ಞಾನಿಗಳು ಕೂತು ಚರ್ಚಿಸಬೇಕು‌. ಇದರಲ್ಲಿ ಜನಪ್ರತಿನಿಧಿಗಳೂ ಪಾಲ್ಗೊಳ್ಳಬೇಕು. ಮಠಾಧಿಪತಿಗಳನ್ನೂ ಕರೆಯಬೇಕು. ನಾನು ಈ ಯೋಜನೆಯ ವಿರೋಧಿಯೂ ಅಲ್ಲ, ಪರವೂ ಅಲ್ಲ. ಪರಿಸರ ಮತ್ತು ಎಲ್ಲರ ಹಿತ ಮುಖ್ಯ’ ಎಂದರು.

ರಾಜಕೀಯ ಇದೆ: ಗೋಕರ್ಣ ದೇವಾಲಯವನ್ನು ಸರ್ಕಾರದ ವಶಕ್ಕೆ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಇದರ ಹಿಂದೆ ರಾಜಕೀಯ ಇದೆ. ಅದನ್ನೆಲ್ಲಾ ಮಾತನಾಡಬಾರದು. ಆದಾಗ್ಯೂ ನಾನು ಈ ಬಗ್ಗೆ ತಟಸ್ಥ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.