ADVERTISEMENT

ಪೆನ್‌ಡ್ರೈವ್ ಪ್ರಕರಣ | ವಿಡಿಯೊ ಮಾರ್ಫಿಂಗ್ ಆರೋಪ: SITಯಿಂದ ಇಬ್ಬರ ಬಂಧನ

ಹಾಸನ ಸೆನ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 29 ಮೇ 2024, 0:21 IST
Last Updated 29 ಮೇ 2024, 0:21 IST
<div class="paragraphs"><p>ಪ್ರಜ್ವಲ್ ರೇವಣ್ಣ</p></div>

ಪ್ರಜ್ವಲ್ ರೇವಣ್ಣ

   

ಬೆಂಗಳೂರು: ‘ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಹೋಲುವ ರೀತಿಯಲ್ಲಿ ವಿಡಿಯೊ ಮಾರ್ಪಿಂಗ್ ಮಾಡಲಾಗಿದೆ’ ಎಂಬ ಆರೋಪದಡಿ ದಾಖಲಾಗಿರುವ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ಮತ್ತಿಬ್ಬರು ಆರೋಪಿಗಳನ್ನು ಮಂಗಳವಾರ ನಗರದಲ್ಲಿ ಬಂಧಿಸಿದ್ದಾರೆ.

‘ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ನೆಲ್ಕೆ ಗ್ರಾಮದ ನವೀನ್‌ ಗೌಡ ಹಾಗೂ ಬಿಕ್ಕೋಡು ಗ್ರಾಮದ ಚೇತನ್ ಬಂಧಿತರು. ಇದೇ ಪ್ರಕರಣದಲ್ಲಿ ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಸೇರಿದಂತೆ ಮೂವರನ್ನು ಈಗಾಗಲೇ ಬಂಧಿಸಲಾಗಿದೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

ADVERTISEMENT

‘ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಪಟ್ಟ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಇದನ್ನು ಗಮನಿಸಿದ್ದ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್–ಬಿಜೆಪಿ ಪಕ್ಷದ ಮೈತ್ರಿ ಅಭ್ಯರ್ಥಿಯ ಚುನಾವಣೆ ಏಜೆಂಟ್‌ ಆಗಿರುವ ಎಂ.ಜಿ. ಪೂರ್ಣಚಂದ್ರ ತೇಜಸ್ವಿ ಅವರು ಹಾಸನ ಸೆನ್‌ (ಸೈಬರ್ ಆರ್ಥಿಕ ಹಾಗೂ ಮಾದಕ ದ್ರವ್ಯ ನಿಯಂತ್ರಣ) ಠಾಣೆಗೆ ದೂರು ನೀಡಿದ್ದರು’ ಎಂದು ಮೂಲಗಳು ತಿಳಿಸಿವೆ.

‘ವಿಡಿಯೊಗಳನ್ನು ಮಾರ್ಫಿಂಗ್ ಮಾಡಿ ಪೆನ್‌ಡ್ರೈವ್‌ನಲ್ಲಿ ಸಂಗ್ರಹಿಸಿ ಹಲವೆಡೆ ಹಂಚಿಕೆ ಮಾಡಿರುವ ಬಗ್ಗೆ ದೂರುದಾರರು ಆರೋಪಿಸಿದ್ದರು. ಪ್ರಜ್ವಲ್‌ ಕಾರು ಚಾಲಕನಾಗಿದ್ದ ಹೊಳೆನರಸೀಪುರ ತಾಲ್ಲೂಕಿನ ಕಡವಿನ ಕೋಟೆಯ ಕಾರ್ತಿಕ್, ಪುಟ್ಟರಾಜು, ಕ್ವಾಲಿಟಿ ಬಾರ್ ಶರತ್, ನವೀನ್‌ ಗೌಡ ಹಾಗೂ ಚೇತನ್‌ ಗೌಡ ವಿರುದ್ಧ ಏಪ್ರಿಲ್ 23ರಂದು ಎಫ್‌ಐಆರ್ ದಾಖಲಾಗಿತ್ತು’ ಎಂದು ಮೂಲಗಳು ಹೇಳಿವೆ.

ಸಂಘಟಿತರಾಗಿ ಕೃತ್ಯ: ‘ಪ್ರಜ್ವಲ್ ವಿಡಿಯೊಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದ ಆರೋಪಿಗಳು, ಸಂಘಟಿತರಾಗಿ ಪೆನ್‌ಡ್ರೈವ್‌ನಲ್ಲಿ ಸಂಗ್ರಹಿಸಿ ಹಲವರಿಗೆ ಹಂಚಿಕೆ ಮಾಡಿರುವುದು ಗೊತ್ತಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಬಂಧನ ಭೀತಿಯಲ್ಲಿದ್ದ ನವೀನ್‌ಗೌಡ ಹಾಗೂ ಚೇತನ್ ತಲೆಮರೆಸಿಕೊಂಡು ಓಡಾಡುತ್ತಿದ್ದರು. ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೂ ಅರ್ಜಿ ಸಲ್ಲಿಸಿದ್ದರು. ಸೋಮವಾರ ಅವರು ವಿಧಾನಸೌಧ ಬಳಿ ಹೊರಟಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಸ್ಥಳಕ್ಕೆ ಹೋಗಿ ಇಬ್ಬರನ್ನೂ ವಶಕ್ಕೆ ಪಡೆಯಲಾಯಿತು’ ಎಂದು ಮೂಲಗಳು ಹೇಳಿವೆ.

‘ವಿಡಿಯೊ ಹಂಚಿಕೆಗೆ ಸಂಬಂಧಪಟ್ಟಂತೆ ಇಬ್ಬರಿಂದಲೂ ಮಾಹಿತಿ ಕಲೆಹಾಕಲಾಗುವುದು. ಸೂಕ್ತ ಪುರಾವೆಗಳು ಲಭ್ಯವಾಗುತ್ತಿದ್ದಂತೆ, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಮೂಲಗಳು ತಿಳಿಸಿವೆ. 

ವಶಕ್ಕೆ ಪಡೆದಿರುವ ನವೀನ್‌ಗೌಡ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಹಾಗೂ ಸಚಿವರೊಬ್ಬರ ಆಪ್ತನೆಂದು ಹೇಳಲಾಗುತ್ತಿದೆ.

ವಿಚಾರಣೆ ಮುಂದೂಡಿಕೆ: ವಿಡಿಯೊ ಮಾರ್ಫಿಂಗ್ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ನಾಲ್ವರು ಆರೋಪಿಗಳು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಜೂನ್ 3ಕ್ಕೆ ಮುಂದೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.