ADVERTISEMENT

ವಿಡಿಯೊ ಬಿಡುಗಡೆ ಅಲ್ಲ, ಪ್ರಜ್ವಲ್ ಅತ್ಯಾಚಾರ ಎಸಗಿರುವುದು ಮಹತ್ವದ್ದು: CM

ಡಿಕೆಶಿ ವಿಚಾರಣೆ ನಡೆಸಬೇಕೆಂಬ ಎಚ್‌ಡಿಕೆ ಹೇಳಿಕೆಗೆ ನಕ್ಕ ಸಿಎಂ

​ಪ್ರಜಾವಾಣಿ ವಾರ್ತೆ
Published 24 ಮೇ 2024, 8:25 IST
Last Updated 24 ಮೇ 2024, 8:25 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಮೈಸೂರು: ‘ವಿಡಿಯೊ ಮಾಡಿದರು, ಅದನ್ನು ಬಿಡುಗಡೆ ಮಾಡಿದರು ಎನ್ನುವುದು ಮಹತ್ವದ್ದಲ್ಲ. ಜೆಡಿಎಸ್‌ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಮಾಡಿರುವುದು ಮಹತ್ವದ್ದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ವಿಚಾರಣೆಗೆ ಒಳಪಡಿಸಬೇಕು’ ಎಂಬ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ಇಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದರು.

‘ಅವರ ಅಣ್ಣನ ಮಗ ಅತ್ಯಾಚಾರ, ಲೈಂಗಿಕ ದೌರ್ಜನ್ಯವನ್ನೆಲ್ಲಾ ಮಾಡಿದ್ದಾನೆ. ಯಾರು ಅತ್ಯಾಚಾರ ಮಾಡಿದ್ದಾರೆಯೋ ಅದು ದೊಡ್ಡ ಅಪರಾಧ. ಈ ಗಂಭೀರ ವಿಚಾರದಿಂದ ಗಮನವನ್ನು ಬೇರೆಡೆ ಸೆಳೆಯಲು ಕುಮಾರಸ್ವಾಮಿ ಏನೇನೋ ಹೇಳುತ್ತಿದ್ದಾರೆ. ಶಿವಕುಮಾರ್‌ ಮತ್ತಿತರ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.

ADVERTISEMENT

‘ಕುಮಾರಸ್ವಾಮಿ ಈ ನೆಲದ ಕಾನೂನಿಗೆ ಗೌರವ ಕೊಡಬೇಕು. ಅವರ ಅಣ್ಣನ ಮಗ ತಪ್ಪು ಮಾಡಿದ್ದಾನೆ. ಅವರು ಆರೋಪಿಯಷ್ಟೆ ಅಪರಾಧಿಯಲ್ಲ ಎಂದೂ ಕುಮಾರಸ್ವಾಮಿ ಹೇಳಿದ್ದಾರೆ. ನಾನೂ ಆರೋಪಿ ಎಂದೇ ಹೇಳುತ್ತೇನೆ. ಈ ವಿಷಯವೆಲ್ಲವೂ ನ್ಯಾಯಾಲಯದಲ್ಲಿ ಸಾಬೀತಾಗಬೇಕಾಗುತ್ತದೆ’ ಎಂದರು.

ಪ್ರಜ್ವಲ್‌ ವಿರುದ್ಧ ಎಷ್ಟು ದೂರು ಸಲ್ಲಿಕೆಯಾಗಿವೆ ಎಂಬ ಪ್ರಶ್ನೆಗೆ, ‘ನಿಮಗೆ ಗೊತ್ತಿಲ್ಲವೇ?’ ಎಂದು ಕೇಳಿದರು. ‘ಸರ್ಕಾರಕ್ಕೆ ಇರುವ ಮಾಹಿತಿಯು ಎಸ್‌ಐಟಿಗೆ ಇರುವ ಮಾಹಿತಿಯಾಗಿದೆ’ ಎಂದರು.

‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಕಚೇರಿಗೆ ಎರಡು ಬಾರಿ ಪತ್ರ ಬರೆದಿದ್ದೇನೆ. ಆದರೆ, ಈವರೆಗೂ ಪ್ರತಿಕ್ರಿಯೆಯೇ ಬಂದಿಲ್ಲ. ಪ್ರಧಾನಿಗೆ ಪತ್ರ ಬರೆದರೆ ಬೇಗ ಸ್ಪಂದನೆ ದೊರೆಯುತ್ತದೆ ಎಂದು ನೀವು ಭಾವಿಸಿರುವುದು ತಪ್ಪು. ಅನೇಕ ಪತ್ರಗಳಿಗೆ ಅವರು ಉತ್ತರವನ್ನೇ ಕೊಟ್ಟಿಲ್ಲ. ಪ್ರಜ್ವಲ್‌ ಪಾಸ್‌ಪೋರ್ಟ್‌ ರದ್ದುಪಡಿಸಿ ಎಂದು ಪತ್ರ ಬರೆದಿದ್ದೇನೆ. ಅದಕ್ಕೆ ಉತ್ತರ ಬಂದಿಲ್ಲ. ಏಕೆ ಉತ್ತರ ಕೊಡುತ್ತಿಲ್ಲ ಎನ್ನುವುದನ್ನು ಅವರು, ಬಿಜೆಪಿಯವರು ಅಥವಾ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನೇ ಕೇಳಿ’ ಎಂದು ಹೇಳಿದರು.

‘ಪ್ರಜ್ವಲ್‌ ಅವರ ಮನೆಯವರಿಗೆ ಹೇಳದೇ ಹೊರಟು ಹೋಗಿದ್ದಾನೆಯೇ? ಲೋಕಸಭೆ ಚುನಾವಣೆಯಲ್ಲಿ ಪ್ರಚಾರಕ್ಕೆ ಹೋಗಿದ್ದಾಗ ಪ್ರಜ್ವಲ್‌ನನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ಇವನು ರೇವಣ್ಣ ಮಗನಲ್ಲ, ನನ್ನ ಮಗ ಎಂದು ತಿಳಿದುಕೊಳ್ಳಿ ಎಂದು ಕುಮಾರಸ್ವಾಮಿ ಹೇಳಿರಲಿಲ್ಲವೇ? ಅದು ಸಂಪರ್ಕವಲ್ಲವೇ? ಸಂಪರ್ಕದಲ್ಲಿ ಇರಲಿಲ್ಲ ಎಂದು ಈಗ ಹೇಳಿದರೆ ಹೇಗೆ?’ ಎಂದು ವ್ಯಂಗ್ಯವಾಗಿ ಕೇಳಿದರು.

‘ಎಸ್‌ಐಟಿ ಮೇಲೆ ನಮಗೆ ಬಹಳ ವಿಶ್ವಾಸವಿದೆ. ಅವರು ನಮ್ಮ ಪೊಲೀಸರೇ. ವಿಶೇಷವಾಗಿ ತನಿಖೆ ನಡೆಸಲಿ, ಹೆಚ್ಚು ಗಮನಕೊಡಲೆಂದು ಆ ತಂಡ ರಚಿಸಿದ್ದೇವೆ’ ಎಂದರು.

ಸಚಿವರಾದ ಡಾ.ಎಚ್‌.ಸಿ. ಮಹದೇವ‍ಪ್ಪ ಮತ್ತು ಕೆ.ವೆಂಕಟೇಶ್, ಶಾಸಕ ಸಿ.ಪುಟ್ಟರಂಗಶೆಟ್ಟಿ, ವರುಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.