ಬೆಂಗಳೂರು: ಎರಡು ವರ್ಷಗಳ ಬಳಿಕ ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಜನರು ಕಿಕ್ಕಿರಿದು ಸೇರಿದ್ದರು. ಶನಿವಾರ ರಾತ್ರಿ ಎಲ್ಲೆಡೆಯು ಯುವಪಡೆಯ ಹರ್ಷೋದ್ಗಾರ ಹಾಗೂ ಕೇಕೆ– ಶಿಳ್ಳೆ ಹೆಚ್ಚಿತ್ತು. ಹೊಸ ವರ್ಷ ಸ್ವಾಗತಿಸಿದ ಜನ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು...
ಕೋವಿಡ್ ಕಾರಣದಿಂದಾಗಿ ಸಾರ್ವಜನಿಕ ಸ್ಥಳಗಳಲ್ಲಿ ವರ್ಷಾಚರಣೆಗೆ ಎರಡು ವರ್ಷ ನಿರ್ಬಂಧವಿತ್ತು. ಈ ವರ್ಷ ಎಲ್ಲವನ್ನೂ ಮರೆತು ಜನರು ಸಂಭ್ರಮದಲ್ಲಿ ಮಿಂದೆದ್ದರು.
ರಾತ್ರಿ 12ರ ದಾಟುತ್ತಿದ್ದಂತೆಯೇ ನಗರದಲ್ಲಿ 2023 ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು. ಜನರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಹೊಸ ವರ್ಷ ಸ್ವಾಗತಿಸಿದರು. ಕೆಲವೆಡೆ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡರು.
ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಇಂದಿರಾನಗರ, ವೈಟ್‌ಫೀಲ್ಡ್, ಬೆಳ್ಳಂದೂರು, ಕೊತ್ತನೂರು, ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್‌ನ ರಸ್ತೆಗಳು ಜನರಿಂದ ತುಂಬಿ ತುಳುಕಿದವು.
ಹೊಸ ವರ್ಷಾಚರಣೆಗೆಂದೇ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ದೀಪಗಳ ಬೆಳಕಿನಲ್ಲಿ ಯುವಕರು ಉತ್ಸಾಹದಿಂದ ಕುಣಿದರು.
ರಸ್ತೆಯ ಒಂದು ಕಡೆಯಿಂದ ಮತ್ತೊಂದು ಬದಿಗೆ ಓಡಾಟ ನಡೆಸು ವವರ ಸಂಖ್ಯೆ ಹೆಚ್ಚಿತ್ತು. ಸಂಜೆಯ ಕತ್ತಲು ಕವಿಯುತ್ತಿದ್ದಂತೆ ಈ ರಸ್ತೆಗಳತ್ತ ಜನರು ಬರಲು ಆರಂಭಿಸಿದ್ದರು.
ರಸ್ತೆಗಳಲ್ಲಿ ಮಾತ್ರವಲ್ಲದೆ ನಗರದ ಬಹುತೇಕ ಮನೆಗಳಲ್ಲಿ ನೂತನ ವರ್ಷಾ ಚರಣೆ ಸಂಭ್ರಮವಿತ್ತು.
ರಾಜರಾಜೇಶ್ವರಿನಗರ, ಗಿರಿನಗರ, ಬಸವನಗುಡಿ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ಕೆಂಗೇರಿ, ಬಸವನಗುಡಿ, ಬಸವೇಶ್ವರನಗರ, ವಿಜಯನಗರ, ಮುದ್ದಿನಪಾಳ್ಯ, ಮರಿಯಪ್ಪನಪಾಳ್ಯ, ಯಲಹಂಕ, ಜಾಲಹಳ್ಳಿ, ದಾಸರಹಳ್ಳಿಯ ಹಲವು ಮನೆಗಳಲ್ಲಿ ಕುಟುಂಬಸ್ಥರು ಹೊಸ ವರ್ಷವನ್ನು ಸ್ವಾಗತಿಸಿದರು. ಕೇಕ್ ಕತ್ತರಿಸಿ ಪರಸ್ಪರ ಹಂಚಿ ತಿಂದು ಹೊಸ ವರ್ಷ ಬರಮಾಡಿಕೊಂಡರು. ಅಪಾರ್ಟ್‌ಮೆಂಟ್ ಸಮುಚ್ಚಯಗಳಲ್ಲಿ ಸಂಭ್ರಮ ಮೇರೆ ಮೀರಿತ್ತು. ನಿವಾಸಿಗಳು ಒಂದೆಡೆ ಸೇರಿ ಕೇಕ್ ಕತ್ತರಿಸಿ ಸಾಮೂಹಿಕ ನೃತ್ಯ ಮಾಡಿದರು. ಲಾನ್ ಹಾಗೂ ಈಜುಕೊಳದ ಬದಿಗಳಲ್ಲಿ ಪಾರ್ಟಿ ಆಯೋಜಿಸಲಾಗಿತ್ತು.
ಮಂದ ಬೆಳಕಿನಲ್ಲಿ ನೃತ್ಯ: ಪಬ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಮಂದ ಬೆಳಕಿನಲ್ಲಿ ಯುವಜನತೆ ನೃತ್ಯ ಮಾಡಿ ಹೊಸ ವರ್ಷ ಸ್ವಾಗತಿಸಿದರು. ವಿಶೇಷ ಪಾರ್ಟಿಗಳಲ್ಲಿ ಮದ್ಯ ಕುಡಿದು, ನಾನಾ ಗೀತೆಗಳಿಗೆ ಹೆಜ್ಜೆ ಹಾಕಿದರು.
ಪಬ್, ರೆಸ್ಟೋರೆಂಟ್‌ಗಳಲ್ಲಿ ಮೊದಲೇ ಸೀಟು ಕಾಯ್ದಿರಿಸಿದವರಿಗೆ ಮಾತ್ರ ಅಲ್ಲಿಗೆ ತೆರಳಲು ಅವಕಾಶವಿತ್ತು. ಕೆಲವು ಪಬ್‌ಗಳಲ್ಲಿ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ಪಬ್‌ಗಳಲ್ಲಿ ನವಜೋಡಿಗಳು ಸಂಗೀತಕ್ಕೆ ಕುಣಿದರು.
ಭರ್ಜರಿ ವ್ಯಾಪಾರಿ: ಬೇಕರಿಗಳಲ್ಲಿ ವಿಭಿನ್ನವಾದ ಕೇಕ್ ತಯಾರಿಸಲಾಗಿತ್ತು. ಬೆಳಿಗ್ಗೆಯಿಂದಲೂ ಬೇಕರಿಗಳ ಮುಂದೆ ಜನದಟ್ಟಣೆ ಕಂಡುಬಂತು. ಹೊಸ ವಿನ್ಯಾಸದ ಕೇಕ್‌ಗಳನ್ನು ಕತ್ತರಿಸಿ ಜನರು ಸಂಭ್ರಮಿಸಿದರು. ಕೆಲವು ರಸ್ತೆಗಳಲ್ಲಿ ಹೊಸ ವರ್ಷದ ಶುಭಾಶಯ ಕೋರಿ ರಂಗೋಲಿ ಬಿಡಿಸಲಾಗಿತ್ತು.
ಹೊರ ವಲಯದ ರೆಸಾರ್ಟ್‌ಗಳತ್ತ ಜನರ: ಈ ವರ್ಷ ಪ್ರವಾಸಿ ತಾಣಗಳಲ್ಲೂ ಯಾವುದೆ ನಿರ್ಬಂಧ ಇರಲಿಲ್ಲ. ಹೀಗಾಗಿ ರಾಜಧಾನಿಯ ಜನರು ಪ್ರವಾಸಿ ತಾಣಗಳಿಗೆ ಶುಕ್ರವಾರವೇ ತೆರಳಿದ್ದರು. ಮಡಿಕೇರಿ, ಮಂಗಳೂರು, ಉಡುಪಿ, ಚಿಕ್ಕಮಗಳೂರು, ಸಕಲೇಶಪುರ, ಮೂಡಿಗೆರೆ, ಶಿವಮೊಗ್ಗ, ಸಾಗರಕ್ಕೆ ರಾಜಧಾನಿಯ ಜನರು ಹೊಸವರ್ಷದ ನೆಪದಲ್ಲಿ ಪ್ರವಾಸಕ್ಕೆ ತೆರಳಿದ್ದರು.
ಕೆಲವರು ನಗರದ ದಟ್ಟಣೆ ಸಮಸ್ಯೆಯಿಂದ ಪಾರಾಗಲು ನಗರದ ಹೊರವಲಯದ ಪಬ್ ಹಾಗೂ ರೆಸ್ಟೋರೆಂಟ್‌ಗಳಿಗೆ ತೆರಳಿದ್ದರು. ದೇವನಹಳ್ಳಿ ವ್ಯಾಪ್ತಿಯ ರೆಸಾರ್ಟ್, ಹೋಮ್‌ಸ್ಟೇಗಳಿಗೆ ಜನರು ಒಮ್ಮೆಲೆ ವಾಹನಗಳಲ್ಲಿ ತೆರಳಿದ ಪರಿಣಾಮ ಹೆಬ್ಬಾಳ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.